ಕಾಸರಗೋಡು: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಅಧೀನದಲ್ಲಿ ಪ್ರಧಾನ ಮಂತ್ರಿ ದಿವ್ಯಶಾ ವಯೋಶ್ರೀ ಕೇಂದ್ರದ ಸಹಯೋಗದೊಂದಿಗೆ ಅಕ್ಷಯಮಿತ್ರ ಫೌಂಡೇಶನ್, ರಾಷ್ಟ್ರೀಯ ವಯೋಶ್ರೀ ಯೋಜನೆಯನ್ವಯ ಹಿರಿಯ ನಾಗರಿಕರಿಗೆ ಎಲೆಕ್ಟ್ರಿಕ್ ಸ್ಕೂಟರ್, ಶ್ರವಣ ಉಪಕರಣ, ಗಾಲಿಕುರ್ಚಿ ಸೇರಿದಂತೆ ಸಹಾಯಕ ಪರಿಕರಗಳ ವಿತರಣಾ ಸಮಾರಂಭ ಬಂದಡ್ಕದಲ್ಲಿ ಜರುಗಿತು.
ಅಕ್ಷಯಮಿತ್ರ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಸಮಾರಂಭ ಉದ್ಘಾಟಿಸಿದರು. ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರ್ಕಾರ ಎಲ್ಲಾ ವರ್ಗದ ಜನರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ವಯೋಶ್ರೀ ಯೋಜನೆಯನ್ವಯ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರಿಗೆ ಶ್ರವಣ ಸಾಧನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ದುಬಾರಿ ಸಹಾಯಕ ಸಾಧನಗಳನ್ನು ಉಚಿತವಾಗಿ ವಿತರಿಸುವುದು ಮೋದಿ ಸರ್ಕಾರದ ಸಾಮಾಜಿಕ ಬದ್ಧತೆಗೆ ಪುರಾವೆಯಾಗಿದೆ ಎಂದು ಅಶ್ವಿನಿ ತಿಳಿಸಿದರು. ಅಕ್ಷಯಮಿತ್ರ ಫೌಂಡೇಶನ್ ಪದಾಧಿಕಾರಿಗಳಾದ ಪಿ.ಆರ್.ಸುನಿಲ್, ಸತ್ಯನಾಥನ್ ಕೆ ಉಪಸ್ಥಿತರಿದ್ದರು.
ಬಿಜೆಪಿ ಮುಳಿಯಾರ್ ಮಂಡಲ ಅಧ್ಯಕ್ಷ ದಿಲೀಪಕುಮಾರ ಪಲ್ಲಂಚಿ ಅಧ್ಯಕ್ಷತೆ ವಹಿಸಿದ್ದರು. ಕುತ್ತಿಕೋಲ್ ಪಂಚಾಯತ್ ಸಮಿತಿ ಅಧ್ಯಕ್ಷ ಮಣಿ ಕವುಂಗಾನಂ, ಕುತ್ತಿಕೋಲ್ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಾದ ಮಹೇಶ್ ಗೋಪಾಲ್, ಸಿಂಧು ಮೋಹನ್, ದೇಲಂಪಾಡಿ ಗ್ರಾಮ ಪಂಚಾಯಿತಿ ಜನಪ್ರತಿನಿಧಿ ಧನಂಜಯ ಬೆಳ್ಳಿಪ್ಪಾಡಿ, ಬಿಜೆಪಿ ಮುಳಿಯಾರ್ ಮಂಡಲ ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಮಂಡುಕ್ಕಂ ಉಪಸ್ಥಿತರಿದ್ದರು.



