ನವದೆಹಲಿ: ದೇಶದಲ್ಲಿ ಮುಂಬರುವ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ)ಗೆ ಸಲ್ಲಿಕೆಯಾಗಿರುವ ಕಾರ್ಯಪತ್ರವೊಂದು ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 543ರಿಂದ 824ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಮುಂದಿಟ್ಟಿದೆ.
ದೇಶದ 170 ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳನ್ನು ಏಕರೂಪದ ಮಾನದಂಡದ ಬದಲು 'ಗುರಿ ನಿಗದಿಪಡಿಸಿದ ಮಾನದಂಡ'ದ ಆಧಾರದಲ್ಲಿ ವಿಭಜಿಸಬೇಕು ಎಂದು ಕಾರ್ಯಪತ್ರವು ಶಿಫಾರಸು ಮಾಡಿದೆ.
ಇಎಸಿ-ಪಿಎಂ ಸದಸ್ಯೆ ಶಮಿಕಾ ರವಿ ಹಾಗೂ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ ಮುದಿತ್ ಕಪೂರ್ ಸಿದ್ಧಪಡಿಸಿರುವ ಕಾರ್ಯಪತ್ರದಲ್ಲಿ 59 ಕ್ಷೇತ್ರಗಳನ್ನು ಎರಡು ಭಾಗಗಳಾಗಿ ಹಾಗೂ 111 ಕ್ಷೇತ್ರಗಳನ್ನು ಮೂರು ಭಾಗಗಳಾಗಿ ವಿಭಜಿಸಲು ಸೂಚಿಸಲಾಗಿದೆ. ಈ ಕ್ರಮದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವು 0.3ರಿಂದ 2.3 ಶೇಕಡಾವಾರು ಅಂಕಗಳಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಇದರಿಂದ ಹೆಚ್ಚುವರಿಯಾಗಿ 90 ಲಕ್ಷದಿಂದ 2.3 ಕೋಟಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಅಂದಾಜಿಸಲಾಗಿದೆ.
ಪ್ರಸ್ತಾವಿತ ಮಾದರಿಯಂತೆ, ಎರಡು ಭಾಗಗಳಾಗಿ ವಿಭಜಿಸಲು ಶಿಫಾರಸು ಮಾಡಲಾದ 59 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳು ಕೇರಳ ಮತ್ತು ತಮಿಳುನಾಡಿನಲ್ಲಿವೆ. ಮೂರು ಭಾಗಗಳಾಗಿ ವಿಭಜಿಸಲು ಉದ್ದೇಶಿಸಿರುವ 111 ಕ್ಷೇತ್ರಗಳಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 17 ಕ್ಷೇತ್ರಗಳಿದ್ದು, ಮಹಾರಾಷ್ಟ್ರದಲ್ಲಿ 12, ಬಿಹಾರದಲ್ಲಿ 10 ಹಾಗೂ ಪಶ್ಚಿಮ ಬಂಗಾಳದಲ್ಲಿ 10 ಕ್ಷೇತ್ರಗಳಿವೆ.
ಈ ಪ್ರಸ್ತಾವನೆ ಜಾರಿಯಾದರೆ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಲಿದೆ. ತೆಲಂಗಾಣದ ಸ್ಥಾನಗಳು 17ರಿಂದ 26ಕ್ಕೆ, ಆಂಧ್ರಪ್ರದೇಶದ ಸ್ಥಾನಗಳು 25ರಿಂದ 38ಕ್ಕೆ, ಕರ್ನಾಟಕದ ಸ್ಥಾನಗಳು 28ರಿಂದ 42ಕ್ಕೆ, ತಮಿಳುನಾಡಿನ ಸ್ಥಾನಗಳು 39ರಿಂದ 59ಕ್ಕೆ ಹಾಗೂ ಕೇರಳದ ಸ್ಥಾನಗಳು 20ರಿಂದ 30ಕ್ಕೆ ಹೆಚ್ಚಾಗಲಿವೆ.
ಉತ್ತರ ಮತ್ತು ಪಶ್ಚಿಮ ಭಾರತದ ರಾಜ್ಯಗಳಲ್ಲಿಯೂ ಸ್ಥಾನಗಳ ಸಂಖ್ಯೆ ಏರಿಕೆಯಾಗಲಿದೆ. ಮಹಾರಾಷ್ಟ್ರದ ಸ್ಥಾನಗಳು 48ರಿಂದ 72ಕ್ಕೆ, ರಾಜಸ್ಥಾನದ ಸ್ಥಾನಗಳು 25ರಿಂದ 38ಕ್ಕೆ, ಉತ್ತರ ಪ್ರದೇಶದ ಸ್ಥಾನಗಳು 80ರಿಂದ 120ಕ್ಕೆ, ಮಧ್ಯಪ್ರದೇಶದ ಸ್ಥಾನಗಳು 29ರಿಂದ 44ಕ್ಕೆ, ಗುಜರಾತ್ನ ಸ್ಥಾನಗಳು 26ರಿಂದ 39ಕ್ಕೆ ಹಾಗೂ ಬಿಹಾರದ ಸ್ಥಾನಗಳು 40ರಿಂದ 60ಕ್ಕೆ ಹೆಚ್ಚಾಗಲಿವೆ.
ಆದರೆ ಈ ಸೂತ್ರವನ್ನು ಜಾರಿಗೆ ತಂದರೂ ದಕ್ಷಿಣ ರಾಜ್ಯಗಳು ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಹಾಗೂ ಪಶ್ಚಿಮ ರಾಜ್ಯಗಳ ಲೋಕಸಭಾ ಸ್ಥಾನಗಳ ಪಾಲಿನಲ್ಲಿ ಮಹತ್ವದ ಬದಲಾವಣೆ ಆಗುವುದಿಲ್ಲ ಎಂದು ಕಾರ್ಯಪತ್ರ ಹೇಳಿದೆ. ದಕ್ಷಿಣ ರಾಜ್ಯಗಳ ಪಾಲು ಶೇಕಡಾ 23.7ರಷ್ಟೇ ಉಳಿಯಲಿದ್ದು, ಉತ್ತರ ಮತ್ತು ಪಶ್ಚಿಮ ರಾಜ್ಯಗಳ ಪಾಲು ಶೇಕಡಾ 45.2ರಿಂದ 45.6ರ ನಡುವೆಯೇ ಮುಂದುವರಿಯಲಿದೆ ಎಂದು ವಿವರಿಸಲಾಗಿದೆ.
ಕ್ಷೇತ್ರಗಳ ಗಾತ್ರವು ಪ್ರಾತಿನಿಧ್ಯದ ದೃಷ್ಟಿಯಿಂದ ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂದು ಕಾರ್ಯಪತ್ರ ಉಲ್ಲೇಖಿಸಿದೆ. 2024ರಲ್ಲಿ ಒಂದು ಲೋಕಸಭಾ ಕ್ಷೇತ್ರದಲ್ಲಿ ಸರಾಸರಿ 18.2 ಲಕ್ಷ ನೋಂದಾಯಿತ ಮತದಾರರಿದ್ದರೆ, ಕೆಲವು ದೊಡ್ಡ ಕ್ಷೇತ್ರಗಳಲ್ಲಿ ಈ ಸಂಖ್ಯೆ 32 ಲಕ್ಷಕ್ಕೂ ಹೆಚ್ಚಿತ್ತು. ಇಂತಹ ಕ್ಷೇತ್ರಗಳಲ್ಲಿ ಮತದಾರರ ಮೇಲಿನ ಆಡಳಿತಾತ್ಮಕ ಹೊರೆ ಹೆಚ್ಚುವುದರ ಜೊತೆಗೆ ವಿವಿಧ ಸಾಮಾಜಿಕ ಗುಂಪುಗಳ ಚುನಾವಣಾ ಭಾಗವಹಿಸುವಿಕೆಯಲ್ಲಿ ಅಸಮಾನತೆ ಕಂಡುಬರುವುದರಿಂದ ಪ್ರಾತಿನಿಧ್ಯದ ಅಂತರ ಹೆಚ್ಚಾಗುತ್ತದೆ ಎಂದು ವರದಿ ತಿಳಿಸಿದೆ.
ಪರಿಶಿಷ್ಟ ಪಂಗಡ (ಎಸ್ಟಿ) ಪ್ರಾಬಲ್ಯದ ಕ್ಷೇತ್ರಗಳಲ್ಲಿ ಈಗ ಅತ್ಯಧಿಕ ಮತದಾನ ಪ್ರಮಾಣ ದಾಖಲಾಗುತ್ತಿದೆ. ಆದರೆ ಹೆಚ್ಚಿನ ನಗರ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಕುಸಿತ ಕಂಡುಬಂದಿದ್ದು, ವಿಶೇಷವಾಗಿ ಮಹಿಳೆಯರ ಮತದಾನ ಪ್ರಮಾಣ ಕಡಿಮೆಯಾಗಿದೆ ಎಂದು ಕಾರ್ಯಪತ್ರ ಹೇಳಿದೆ.
ಮಹಾನಗರ ಪ್ರದೇಶಗಳಲ್ಲಿ ಮಹಿಳೆಯರ ಚುನಾವಣಾ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಮಹಿಳೆಯರಿಗೆ ಮಾತ್ರ ಮತಗಟ್ಟೆಗಳನ್ನು ಸ್ಥಾಪಿಸುವುದು, ಉದ್ಯೋಗದಲ್ಲಿರುವ ಮಹಿಳೆಯರಿಗೆ ಅನುಕೂಲವಾಗುವಂತೆ ಮತದಾನದ ಅವಧಿಯನ್ನು ಸಂಜೆಯವರೆಗೆ ವಿಸ್ತರಿಸುವುದು ಹಾಗೂ ಮತಗಟ್ಟೆಗಳಿಗೆ ಸುಲಭ ಸಾರಿಗೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕಾರ್ಯಪತ್ರ ಶಿಫಾರಸು ಮಾಡಿದೆ.

