ಕಾಸರಗೋಡು: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರ್ರಜಾಪ್ರಭುತ್ವದ ಕರಾಳ ಹತ್ಯೆ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಟಿ.ಪಿ.ಜಯಚಂದ್ರನ್ ಮಾಸ್ಟರ್ ತಿಳಿಸಿದ್ದಾರೆ.
ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ 51 ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತುರ್ತು ಪರಿಸ್ಥಿತಿ ವಿರೋಧಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿರಾ ಗಾಂಧಿ ಜಾರಿಗೆ ತಂದ ಕರಾಳ ತುರ್ತು ಪರಿಸ್ಥಿತಿ ನಾಗರಿಕರ ಹಕ್ಕುಗಳನ್ನು ಕಸಿದುಕೊಂಡು ಕ್ರೂರ ಹಾಗೂ ದಮನಕಾರಿ ನೀತಿ ಹೊರತಾಗಿಯೂ, ಈ ದೇಶದ ಜನರು ತಮ್ಮ ತಾಳ್ಮೆ ಕಳೆದುಕೊಳ್ಳದೆ, ಸರ್ಕಾರದ ಕರಾಳ ಕಾನೂನು ಮತ್ತು ಕ್ರೂರ ದಮನಕಾರಿ ನೀತಿ ವಿರುದ್ಧ ಸಮರಸಾರುವಲ್ಲಿ ಯಶಸ್ವಿಯಾಗಿದ್ದರು. ತುರ್ತು ಪರಿಸ್ಥಿತಿ ಹೋರಾಟಗಾರರ ತ್ಯಾಗ ಮತ್ತು ಯಾತನಾಮಯ ಬದುಕನ್ನು ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾಗಿದ್ದು, ದಮನಕಾರಿ ನೀತಿ ಬಗ್ಗೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕಾಗಿದೆ. ದೇಶಕ್ಕೆ ತುರ್ತುಪರಿಸ್ಥಿತಿ ಹೇರುವ ಮೂಲಕ ಸಂಚಿಧಾನವನ್ನು ಅಮಾನತಿನಲ್ಲಿಟ್ಟಿದ್ದ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್‍ಗಾಂಧಿ ಇಂದು ಸಂವಿಧಾನ ಪುಸ್ತಕದೊಂದಿಗೆ ಸಂಚರಿಸಿ ಸಂವಿಧಾನ ರಕ್ಷಣೆಗೆ ಬೊಬ್ಬಿಡುತ್ತಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ತುರ್ತು ಪರಿಸ್ಥಿತಿಯ ಹೋರಾಟದಲ್ಲಿ ಭಾಗವಹಿಸಿದ್ದ ಸುಮಾರು ಅರವತ್ತು ಮಂದಿ ಹೋರಾಟಗಾರರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತಾ ಟೀಚರ್, ರಾಮಪ್ಪ ಮಂಜೇಶ್ವರ್, ಎ.ವೇಲಾಯುಧನ್; ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಮತ್ತು ಮನುಲಾಲ್ ಮೇಲತ್; ಜಿಲ್ಲಾ ಉಪಾಧ್ಯಕ್ಷ ಎಂ.ಭಾಸ್ಕರನ್, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶೈಬು ಮೊದಲಾದವರು ಉಪಸ್ಥಿತರಿದ್ದರು.

