ಫ್ರಾನ್ಸ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿದ್ದು, ಲೆಬನಾನ್ ವಿಷಯದಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ. ಇಸ್ರೇಲ್ ನಡೆಯು ಹೊಸದಾಗಿ ಘೋಷಿಸಿದ ಅಮೆರಿಕ-ಇರಾನ್ ಶಾಂತಿ ಒಪ್ಪಂದಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಫ್ರಾನ್ಸ್ನಲ್ಲಿ ನಡೆದ ಉ7 ಶೃಂಗಸಭೆಯ ಕೊನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇಸ್ರೇಲ್ನ ಇತ್ತೀಚಿನ ಸೇನಾ ಕ್ರಮಗಳ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದರು. ವಿಶೇಷವಾಗಿ, ಇರಾನ್ ಒಪ್ಪಂದ ಅಂತಿಮಗೊಳ್ಳುವ ಕೆಲವೇ ಸಮಯದ ಮೊದಲು ಬೈರೂತ್ ಮೇಲೆ ನಡೆಸಿದ ದಾಳಿಯ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅಸಮಾಧಾನವನ್ನು ಇಸ್ರೇಲ್ ಅಧಿಕಾರಿಗಳಿಗೆ ನೇರವಾಗಿ ತಿಳಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.
"ಇರಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕುವ ಎರಡು ಗಂಟೆಗಳ ಮೊದಲು ಬೈರೂತ್ ಮೇಲೆ ಇಸ್ರೇಲ್ ನಡೆಸಿದ ದಾಳಿ ನನಗೆ ಇಷ್ಟವಾಗಲಿಲ್ಲ. ನಾನು ಅವರಿಗೆ ಅದನ್ನು ತಿಳಿಸಿದೆ. ನನಗೆ ಅದು ಇಷ್ಟವಾಗಲಿಲ್ಲ, ಇಷ್ಟವೇ ಅಲ್ಲ" ಎಂದು ಟ್ರಂಪ್ ಹೇಳಿದ್ದಾರೆ.
ಖತರ್ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಟ್ರಂಪ್ ಅವರು ಈ ಹೇಳಿಕೆ ನೀಡಿದ್ದಾರೆ. ಇಬ್ಬರು ನಾಯಕರು ಅಮೆರಿಕ-ಇರಾನ್ ಒಪ್ಪಂದದ ಪರಿಣಾಮಗಳು ಮತ್ತು ವಿಶಾಲ ಪ್ರಾದೇಶಿಕ ಸ್ಥಿರತೆಯ ಬಗ್ಗೆ ಚರ್ಚಿಸಿದರು.
ನೀವು ನೆತನ್ಯಾಹು ಬಗ್ಗೆ ನಿರಾಶೆಗೊಂಡಿದ್ದೀರಾ ಎಂಬ ಪ್ರಶ್ನೆಗೆ, ಟ್ರಂಪ್ ಇಸ್ರೇಲ್ ಪ್ರಧಾನಿಯ ಬಗ್ಗೆ ಕೆಲವು ಬಲವಾದ ಟೀಕೆಗಳನ್ನು ಮಾಡಿದರು. ನಾನಿಲ್ಲದೆ ಇರುತ್ತಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ. ಏಕೆಂದರೆ ನಾನು ಮಾಡಿದ್ದನ್ನು ಬೇರೆ ಯಾವುದೇ ಅಧ್ಯಕ್ಷರು ಮಾಡಲು ಸಿದ್ಧರಿರಲಿಲ್ಲ ಎಂದು ಟ್ರಂಪ್ ಹೇಳಿದರು.
"ನಾನು ಬೀಬಿ(ನೆತನ್ಯಾಹು) ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ, ಆದರೆ ಈಗ ಬೀಬಿ ಲೆಬನಾನ್ಗೆ ಸಂಬಂಧಿಸಿದಂತೆ ಹೆಚ್ಚು ಜವಾಬ್ದಾರಿಯುತವಾಗಿರಬೇಕು" ಎಂದು ಟ್ರಂಪ್ ಹೇಳಿದ್ದಾರೆ.

