ಕಾಸರಗೋಡು: ವಿಧಾನಸಭಾ ಚುನಾವಣೆಯೊಂದಿಗೆ ಕೇರಳದಲ್ಲಿ ಬಿಜೆಪಿ ಜನರ ಮನಸ್ಸಿನಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿರುವುದಾಗಿ ಬಿಜೆಪಿ ರಾಜ್ಯ ಕೋಶ ಸಂಯೋಜಕ ವಿ.ಕೆ. ಸಜೀವನ್ ತಿಳಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ನಾಯಕತ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಡಳಿತಕ್ಕೇರಿದ ಒಂದೇ ತಿಂಗಳ ಅವಧಿಯೊಳಗೆ, ಬಂಧುನೇಮಕಾತಿ ವಿಚಾರದಲ್ಲಿ ಎಡರಂಗವನ್ನು ಮೀರಿಸುವ ಸಾಧನೆಯನ್ನು ಐಕ್ಯರಂಗ ನಡೆಸಿದೆ. ಎಡರಂಗ ಸರಕಾರದ ಆಡಳಿತಾವಧಿಯಲ್ಲಿ ಸಚಿವರೊಬ್ಬರು ತನ್ನ ಸೊಸೆಯನ್ನು ಸರ್ಕಾರಿ ಸಿಬಂದಿಯಾಗಿ ನೇಮಿಸಿಕೊಂಡಿದ್ದರೆ, ಐಕ್ಯರಂಗದ ಸಚಿವ ತನ್ನ ಅಳಿಯನನ್ನೇ ಅಡಿಷನಲ್ ಪ್ರೈವೇಟ್ ಸೆಕ್ರೇಟರಿಯಾಗಿ ನೇಮಿಸಿಕೊಂಡು ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ. ನರೇಂದ್ರ ಮೋದಿಯವರ ನಾಯಕತ್ವದಿಂದ ಆಕರ್ಷಿತರಾಗಿ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವವರಲ್ಲಿ ಪಕ್ಷದ ಸಿದ್ಧಾಂತ, ಕಾರ್ಯಸೂಚಿಗಳ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎಂ.ಸಂಜೀವ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಎ.ವೇಲಾಯುಧನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್, ರಾಜ್ಯ ಪರಿಷತ್ ಸದಸ್ಯ ಶಿವಕೃಷ್ಣ ಭಟ್ ಮತ್ತು ಜಿಲ್ಲಾ ಕೋಶ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ ಉಪಸ್ಥಿತರಿದ್ದರು.



