ತಿರುವನಂತಪುರಂ: : ಶಿಗೆಲ್ಲದಿಂದ ಉಂಟಾಗುವ ಶಿಗೆಲ್ಲೋಸಿಸ್ (ಬ್ಯಾಸಿಲರಿ ಡಿಸೆಂಟರಿ) ಎಂಬ ಅತ್ಯಂತ ಸಾಂಕ್ರಾಮಿಕ ಬ್ಯಾಕ್ಟೀರಿಯದ ಅತಿಸಾರ ರೋಗವು ಕೇರಳ ರಾಜ್ಯಾದ್ಯಂತ ವರದಿಯಾಗುತ್ತಿವೆ.
ವಯನಾಡ್, ಕೋಝಿಕ್ಕೋಡ್, ಆಲಪ್ಪುಝ ಮತ್ತು ಮಲಪ್ಪುರದಿಂದ ಪ್ರಕರಣಗಳು ವರದಿಯಾಗಿವೆ.
ಜೂನ್ 7ರವರೆಗೆ 85 ದೃಢಪಟ್ಟ ಪ್ರಕರಣಗಳು ಮತ್ತು 70ಕ್ಕೂ ಅಧಿಕ ಶಂಕಿತ ಪ್ರಕರಣಗಳು ವರದಿಯಾಗಿವೆ. ಈವರೆಗೆ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಆರೋಗ್ಯವಂತ ವಯಸ್ಕರಲ್ಲಿ ಶೀಗೆಲ್ಲೋಸಿಸ್ ಹೆಚ್ಚು ಬಾಧೆ ಕೊಡದೆ ಇದ್ದರೂ ಐದು ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಿರಬಹುದು. ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೂ ಹೆಚ್ಚು ಬಾಧಿಸಬಹುದು.
ಕೇರಳದ ಈ ಶಿಗೆಲ್ಲಾ ಸಾಂಕ್ರಾಮಿಕ ರೋಗ ಕಲುಷಿತ ಆಹಾರ, ನೀರು ಮತ್ತು ಕಳಪೆ ನೈರ್ಮಲ್ಯ ಅಭ್ಯಾಸಗಳ ಮೂಲಕ ಹರಡುವ ಸಾಂಕ್ರಾಮಿಕ ಬ್ಯಾಕ್ಟೀರಿಯ ರೋಗವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಅತಿಸಾರ, ಜ್ವರ ಮತ್ತು ಹೊಟ್ಟೆ ಸೆಳೆತ ಉಂಟು ಮಾಡುತ್ತವೆಯಾದರೂ ಶಿಗೆಲ್ಲೋಸಿಸ್ ಕೆಲವೊಮ್ಮೆ ಮಾರಕವಾಗಿಯೂ ಪರಿಣಮಿಸಬಹುದು.
ಶಿಗೆಲ್ಲ ಎಂದರೇನು?
ಶಿಗೆಲ್ಲ ಎಂಬುದು ಶಿಗೆಲ್ಲೋಸಿಸ್ ಎಂದು ಕರೆಯಲಾಗುವ ಕರುಳಿನ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯದ ಗುಂಪಾಗಿದೆ. ಸೋಂಕು ಪ್ರಾಥಮಿಕವಾಗಿ ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಲ-ಬಾಯಿಯ ಮೂಲಕ, ಕಲುಷಿತ ಆಹಾರ, ನೀರು, ಮೇಲ್ಮೈಗಳು ಅಥವಾ ತೊಳೆಯದ ಕೈಗಳ ಮೂಲಕ ಹರಡುತ್ತದೆ. ಶಿಗೆಲ್ಲವು ಸಾಮಾನ್ಯವಾಗಿ ಶಾಲೆಗಳು, ಡೇಕೇರ್ ಕೇಂದ್ರಗಳು, ಮನೆಗಳು ಮತ್ತು ನೈರ್ಮಲ್ಯವಿಲ್ಲದ ಪ್ರದೇಶದಲ್ಲಿ ಸಾಂಕ್ರಾಮಿಕವಾಗಿ ಹರಡುತ್ತದೆ.
ಶಿಗೆಲ್ಲೋಸಿಸ್ ಇತರ ಜಠರದುರಿತದಿಂದ ಭಿನ್ನ ಹೇಗೆ?
ಶಿಗೆಲ್ಲೋಸಿಸ್ ಸಾಮಾನ್ಯವಾಗಿ ಹಠಾತ್ ಆಗಿ ಹರಡುತ್ತದೆ. ಅತಿಸಾರ, ಜ್ವರ, ಹೊಟ್ಟೆ ಸೆಳೆತ ಮತ್ತು ಮಲ ವಿಸರ್ಜನೆಯ ತುರ್ತು ಅಗತ್ಯದೊಂದಿಗೆ ಬರುತ್ತದೆ. ಜಠರದುರಿತಕ್ಕೆ ಭಿನ್ನವಾಗಿ ಅತಿಸಾರವು ರಕ್ತಸ್ರಾವ ಅಥವಾ ಕರುಳಿನ ಒಳಪದರದ ಉರಿಯೂತದಿಂದಾಗಿ ಲೋಳೆ ಹೊಂದಿರಬಹುದು. ರೋಗಿಗಳು ಕರುಳಿನಲ್ಲಿ ನೋವಿನ ಚಲನೆ (painful bowel movements) ಮತ್ತು ಗಮನಾರ್ಹ ಹೊಟ್ಟೆಯ ಅಸ್ವಸ್ಥತೆ ಅನುಭವಿಸಬಹುದು. ಜ್ವರ, ಆಗಾಗ್ಗೆ ಸಣ್ಣ ಪ್ರಮಾಣದ ಮಲ ಮತ್ತು ಮಲದಲ್ಲಿ ರಕ್ತ ಅಥವಾ ಲೋಳೆಯ ಸಂಯೋಜನೆಯು ಶಿಗೆಲ್ಲ ಸೋಂಕಿನ ಅನುಮಾನ ತರಬಹುದು.
ರೋಗನಿರ್ಣಯ ಮಾಡುವುದು ಹೇಗೆ?
ಚಿಕಿತ್ಸಾತ್ಮಕ ಲಕ್ಷಣಗಳು ಮತ್ತು ಪ್ರಯೋಗಾಲಯದ ಪರೀಕ್ಷೆಯ ಮೂಲಕ ದೃಢೀಕರಿಸಲಾಗುತ್ತದೆ. ಸಾಮಾನ್ಯವಾಗಿ ಶಿಗೆಲ್ಲವನ್ನು ಗುರುತಿಸಲು ಮಲದ ಪರೀಕ್ಷೆ ಮಾಡಲಾಗುತ್ತದೆ. ಪಿಸಿಆರ್ನಂತರ ಮೊಲೆಕ್ಯುಲರ್ ಪರೀಕ್ಷೆಗಳೂ ವೇಗದ ಫಲಿತಾಂಶ ನೀಡಬಹುದು. ಹಠಾತ್ ಸಾಂಕ್ರಾಮಿಕವಾದಾಗ ವೇಗದ ರೋಗನಿರ್ಣಯ ಅಗತ್ಯವಿರುವವಾಗಿ ಇವು ಉಪಯುಕ್ತ. ತೀವ್ರ ಅತಿಸಾರ, ಮಲದಲ್ಲಿ ರಕ್ತ, ದೀರ್ಘಕಾಲದ ಅನಾರೋಗ್ಯ, ಶಂಕಿತ ಹರಡುವಿಕೆ ಸಂದರ್ಭದಲ್ಲಿ ರೋಗಿಗಳನ್ನು ಪರೀಕ್ಷಿಸಬೇಕಾಗುತ್ತದೆ.
ಶಿಗೆಲ್ಲಾ ಸೋಂಕಿಗೆ ಚಿಕಿತ್ಸೆ ಏನು?
ಬಹುತೇಕ ರೋಗಿಗಳಿಗೆ ಹೈಡ್ರೇಶನ್ ಮತ್ತು ಎಲೆಕ್ಟ್ರೋಲೈಟ್ ಸೇರಿದಂತೆ ಬೆಂಬಲದ ಆರೈಕೆ ಅಗತ್ಯವಿರುತ್ತದೆ. ತೀವ್ರ ಅನಾರೋಗ್ಯ, ಅಧಿಕ ಜ್ವರ, ರಕ್ತಸಿಕ್ತ ಅತಿಸಾರ, ದೀರ್ಘಕಾಲದ ಲಕ್ಷಣಗಳು ಮತ್ತು ಚಿಕ್ಕಮಕ್ಕಳು, ವೃದ್ಧರು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆಯಾದ ವ್ಯಕ್ತಿಗಳಿಗೆ ಹೆಚ್ಚು ಅಪಾಯವಿರುವ ಕಾರಣದಿಂದ ಆಂಟಿಬಯಾಟಿಕ್ ತೆರಪಿ ಮಾಡಬಹುದು. ಪ್ರಯೋಗಾಲದಯದ ಪರೀಕ್ಷೆ ಮತ್ತು ಸ್ಥಳೀಯ ಮಾದರಿಗಳನ್ನು ಅನುಸರಿಸಿ ಆಂಟಿಬಯಾಟಿಕ್ ಚಿಕಿತ್ಸೆ ನೀಡಬೇಕಾಗುತ್ತದೆ.
ಮಕ್ಕಳು ವೃದ್ಧರು ಹೇಗೆ ಎಚ್ಚರದಿಂದ ಇರಬೇಕು?
ಫ್ಲೂಯಿಡ್ ನಷ್ಟದಿಂದ ಉಂಟಾಗುವ ಡಿಹೈಡ್ರೇಶನ್ ಬಗ್ಗೆ ಎಚ್ಚರದಿಂದ ಇರಬೇಕು. ಮಕ್ಕಳು ಮತ್ತು ವೃದ್ಧರು ಹೆಚ್ಚು ವೇಗವಾಗಿ ಡಿಹೈಡ್ರೇಟ್ ಆಗಬಹುದು, ಎಲೆಕ್ಟ್ರೋಲೈಟ್ ಅಸಮತೋಲನ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ ಶಿಗೆಲ್ಲ ಸೋಂಕು ತೀವ್ರ ಕರುಳಿನ ಉರಿಯೂತ, ರಕ್ತಪ್ರವಾಹದ ಸೋಂಕು ಅಥವಾ ರಿಯಾಕ್ಟಿವ್ ಆರ್ಥ್ರೈಟಿಸ್ ತರಬಹುದು.
ಕೇರಳದಲ್ಲಿ ಸೋಂಕು ಹರಡಲು ಕಾರಣವೇನು?
ಕುಡಿಯುವ ನೀರಿನ ಮೂಲಗಳ ಮಾಲಿನ್ಯ, ಅಸಮರ್ಪಕ ನೈರ್ಮಲ್ಯ, ಜನದಟ್ಟಣೆ ಮತ್ತು ಸರಿಯಾಗಿ ಕೈ ತೊಳೆಯದಿರುವುದು ಶಿಗೆಲ್ಲಾ ಪ್ರಕರಣಗಳ ಹಠಾತ್ ಹರಡುವಿಕೆಗೆ ಕಾರಣವಾಗಿರಬಹುದು. ಭಾರೀ ಮಳೆ ಮತ್ತು ಪ್ರವಾಹದಿಂದಲೂ ಜಲಜನ್ಯ ಸೋಂಕುಗಳಿಗೆ ಕಾರಣವಾಗಬಹುದು.
ಯಾವ ನೈರ್ಮಲ್ಯ ಕ್ರಮ ಅನುಸರಿಸಬೇಕು?
ತಡೆಗಟ್ಟಲು ನೈರ್ಮಲ್ಯ ಅಭ್ಯಾಸ ಸುಧಾರಣೆಯಾಗಬೇಕು. ಶೌಚಾಲಯ ಬಳಸಿದ ನಂತರ ಮತ್ತು ಆಹಾರ ಸೇವನೆ ಮೊದಲು ಸಾಬೂನಿನಿಂದ ಕೈತೊಳೆಯಬೇಕು. ಕುಡಿಯುವ ನೀರಿನ ಪ್ರದೇಶ ಸುರಕ್ಷಿತವಾಗಿರಬೇಖು, ಒಳಚರಂಡಿ ವಿಲೇವಾರಿ ಮತ್ತು ಸುರಕ್ಷಿತ ಆಹಾರ ನಿರ್ವಹಣಾ ಅಭ್ಯಾಸ ಮುಖ್ಯವಾಗುತ್ತದೆ. ಸೋಂಕು ಹರಡಿದಾಗ ಪ್ರಕರಣಗಳನ್ನು ಮೊದಲೇ ಗುರುತಿಸುವುದು, ತ್ವರಿತ ವೈದ್ಯಕೀಯ ಮೌಲ್ಯಮಾಪನ, ರೋಗ ಲಕ್ಷಣದ ವ್ಯಕ್ತಿಗಳನ್ನು ಶಾಲೆಗಳಿಂದ ಅಥವಾ ಆಹಾರ ನಿರ್ವಹಣಾ ಚಟುವಟಿಕೆಗಳಿಂದ ಹೊರಗಿಡುವುದರಿಂದ ಅನಾಹುತವನ್ನು ಕಡಿಮೆ ಮಾಡಬಹುದು.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದ ಮಾಹಿತಿಯಿಂದ ಬರೆಯಲಾಗಿದೆ. ವೃತ್ತಿಪರ ವೈದ್ಯರಿಗೆ ಪರ್ಯಾಯವಲ್ಲ. ಯಾವುದೇ ಸಮಸ್ಯೆಗಳಿಗೆ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.

