ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನೀಟ್-ಯುಜಿ ಮರುಪರೀಕ್ಷೆಯು ಭಾನುವಾರ ನಡೆಯಲಿದ್ದು, ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳ ಮೇಲೆ ತಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.
'ಇಂದು 22 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ಅವರು ನಿರ್ಭೀತಿಯಿಂದ ಯಾವುದೇ ಆತಂಕವಿಲ್ಲದೆ ಪರೀಕ್ಷೆಗೆ ಹಾಜರಾಗಬೇಕು. ಖಂಡಿತವಾಗಿಯೂ ಉತ್ತಮ ಸಾಧನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ನನ್ನ ಶುಭಹಾರೈಕೆಗಳು' ಎಂದು ಅವರು ತಿಳಿಸಿದ್ದಾರೆ.
'ಈ ಸಂದರ್ಭದಲ್ಲಿ ದಯವಿಟ್ಟು ದೇಶ ನವಪೀಳಿಗೆಯ ಭವಿಷ್ಯದ ಜೊತೆ ಆಟವಾಡಬೇಡಿ' ಎಂದು ಪ್ರಧಾನ್ ಮನವಿ ಮಾಡಿದ್ದಾರೆ.
'ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೆಲಸವನ್ನು ಮಾಡಬೇಡಿ. ಕೆಲವೇ ಗಂಟೆಗಳ ನಂತರ ಮಕ್ಕಳು ಪರೀಕ್ಷೆಗೆ ಹಾಜರಾಗಲಿದ್ದಾರೆ' ಎಂದು ಅವರು ಹೇಳಿದ್ದಾರೆ.
'ಕನಿಷ್ಠ ಪಕ್ಷ ನೀವು ಜವಾಬ್ದಾರಿಯುತವಾಗಿದ್ದರೆ, ಭಾರತೀಯ ಪ್ರಜೆ ಎಂದು ಪರಿಗಣಿಸಿದ್ದರೆ ದಯವಿಟ್ಟು ಮಕ್ಕಳಿಗೆ ತೊಂದರೆ ಕೊಡಬೇಡಿ' ಎಂದು ವಿನಂತಿಸಿದ್ದಾರೆ.
ನೀಟ್ ಸೇರಿದಂತೆ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಹಾಗೂ ಅಕ್ರಮಗಳ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶನಿವಾರ ಎರಡನೇ ಸಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

