ಸೋನಭದ್ರ: ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತದ ನಡುವೆಯೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಿತವಾಗಿ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ವಾಸ್ತವ ಪರಿಸ್ಥಿತಿಯನ್ನು ನೋಡಿದರೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹೆಚ್ಚಲ್ಲ ಎಂಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷ ಪೂರೈಸಿದ ಹಿನ್ನೆಲೆ ಕೇಂದ್ರದ ಅಭಿಯಾನದ ಭಾಗವಾಗಿ ಸೋನಭದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು 2021ರ ನವೆಂಬರ್, 2022ರ ಮೇ ಮತ್ತು ಇತ್ತೀಚೆಗೆ ಕೇಂದ್ರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದಾರೆ. ಇದರಿಂದಾಗಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ ತಲಾ ಸುಮಾರು ₹10 ಹೊರೆ ಹೊರುತ್ತಿದೆ ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕಡಿಮೆಯಾಗುತ್ತಿರುವುದರಿಂದ ದೇಶೀಯ ಇಂಧನ ಬೆಲೆಗಳನ್ನು ಕಡಿಮೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪುರಿ, ವಿಶ್ವಸಂಸ್ಥೆಯಲ್ಲಿ 193 ದೇಶಗಳಿವೆ. ಆ ಪೈಕಿ ಜಪಾನ್ ಮಾತ್ರ ಭಾರತಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ದೇಶವಾಗಿದೆ. ಉಳಿದೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಒಟ್ಟಾರೆ ತಲಾ ₹7.60 ಏರಿಕೆಯಾಗಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಚಾಲ್ತಿಯಲ್ಲಿದ್ದ ಬೆಲೆಗಳಿಗೆ ಹೋಲಿಸಿದರೆ "ವಾಸ್ತವವಾಗಿ ಯಾವುದೇ ಏರಿಕೆಯಾಗಿಲ್ಲ ಎಂದು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಸುತ್ತಲಿನ ಉದ್ವಿಗ್ನತೆಯನ್ನು ಉಲ್ಲೇಖಿಸಿದ ಸಚಿವರು, ತೈಲ ಮಾರುಕಟ್ಟೆ ಕಂಪನಿಗಳು ದಿನಕ್ಕೆ ಸುಮಾರು ₹1,000 ಕೋಟಿ ನಷ್ಟ ಅನುಭವಿಸುತ್ತಿವೆ. ಆದರೆ, ಸರ್ಕಾರವು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸದಂತೆ ನೋಡಿಕೊಂಡಿದೆ ಎಂದು ಹೇಳಿದರು.

