ನವದೆಹಲಿ: ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಗಳಲ್ಲಿ ಸಮಸ್ಯೆಗಳಿದ್ದರೆ, ಮೌಲ್ಯಮಾಪನದ ಬಗ್ಗೆ ತಕರಾರುಗಳಿದ್ದರೆ ಈ ಬಗ್ಗೆ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ಪೋರ್ಟಲ್ ಅನ್ನು ಸಿಬಿಎಸ್‌ಇ ಮಂಗಳವಾರ ತೆರೆದಿದೆ. ಜೂನ್ 6 ಮಧ್ಯರಾತ್ರಿವರೆಗೆ ಇದು ಕಾರ್ಯನಿರ್ವಹಿಸಲಿದೆ.
ಆ ನಂತರ ಬಂದ ಯಾವುದೇ ಅರ್ಜಿಯನ್ನೂ ಪರಿಗಣಿಸುವುದಿಲ್ಲ ಮತ್ತು ಸ್ಕ್ಯಾನ್ಡ್ ಪ್ರತಿಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಮಾತ್ರವೇ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಮೇ 29ಕ್ಕೆ ಪೋರ್ಟಲ್ ತೆರೆಯುವುದಾಗಿ ಸಿಬಿಎಸ್‌ಇ ಈ ಹಿಂದೆ ಘೋಷಿಸಿತ್ತು.
ವಿದ್ಯಾರ್ಥಿಗಳು ಏನು ಮಾಡಬೇಕು?
ಆಧಾರ್ ಸಂಖ್ಯೆ ಮೂಲಕ ಲಾಗ್‌ಇನ್ ಆಗಬೇಕು. ವಿದ್ಯಾರ್ಥಿಯದ್ದೇ ಆಧಾರ್ ಕಾರ್ಡ್ ಇಲ್ಲದಿದ್ದರೆ ಪೋಷಕರ ಆಧಾರ್ ಸಂಖ್ಯೆ ಮೂಲಕವೂ ಲಾಗ್‌ಇನ್ ಆಗಬಹುದು. ಪೋಷಕರ ಆಧಾರ್ ಸಂಖ್ಯೆಯಿಂದ ಲಾಗ್‌ಇನ್ ಮಾಡಿದರೆ, ಜನ್ಮ ದಿನಾಂಕ, ಲಿಂಗ ಸೇರಿದಂತೆ ಎಲ್ಲ ಮಾಹಿತಿಗಳನ್ನೂ ಪೋಷಕರದ್ದೇ ನೀಡಬೇಕು
ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನ್ಡ್ ಪ್ರತಿಯಲ್ಲಿ ಪುಟಗಳು ಅಥವಾ ಉತ್ತರ ಪತ್ರಿಕೆಯ ಪೂರಕ ಪುಟಗಳು ಕಾಣೆಯಾಗಿದ್ದರೆ, ನಕ್ಷೆ ಅಥವಾ ಗ್ರಾಫ್‌ಗಳು ಕಾಣೆಯಾಗಿದ್ದರೆ, ನೀಡಿದ ಸ್ಕ್ಯಾನ್ಡ್ ಪ್ರತಿಗಳು ಅಸ್ಪಷ್ಟವಾಗಿ ಕಾಣುತ್ತಿದ್ದರೆ, ಬೇರೆಯವರ ಉತ್ತರ ಪತ್ರಿಕೆ ನೀಡಲಾಗಿದ್ದರೆ, ಕೇಳಿದ ವಿಷಯದ ಉತ್ತರ ಪತ್ರಿಕೆ ಬದಲಿಗೆ ಬೇರೆ ವಿಷಯದ ಉತ್ತರ ಪತ್ರಿಕೆ ನೀಡಲಾಗಿದ್ದರೆ ಅರ್ಜಿ ಸಲ್ಲಿಸಬಹುದು
ಶುಲ್ಕ ಹೇಗಿರಲಿದೆ?
ಉತ್ತರ ಪತ್ರಿಕೆಯಲ್ಲಿನ ಸಮಸ್ಯೆಗಳ ಪರಿಶೀಲನೆಗೆ ಒಂದು ಉತ್ತರ ಪತ್ರಿಕೆಗೆ ₹100
ಮರು ಮೌಲ್ಯಮಾಪನಕ್ಕಾಗಿ ಪ್ರತಿ ಪ್ರಶ್ನೆಗೆ ₹25
ಯುಪಿಐ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು
ಸ್ಕ್ಯಾನ್ಡ್ ಪ್ರತಿಗಳಲ್ಲಿ ಸಮಸ್ಯೆಗಳಿದ್ದರೆ, ಮರು ಮೌಲ್ಯಮಾಪನ ಆಗಬೇಕಿದ್ದರೆ- ಒಂದು ಪರಿಶೀಲನೆಗೆ ಒಂದು ಅರ್ಜಿಯನ್ನು ಮಾತ್ರವೇ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಒಂದು ಅರ್ಜಿ ಸಲ್ಲಿಸಬೇಕೆ ಅಥವಾ ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಬೇಕೇ ಎಂಬುದನ್ನು ವಿದ್ಯಾರ್ಥಿಗಳು ಮೊದಲೇ ನಿರ್ಧರಿಸಬೇಕಾಗುತ್ತದೆ
'ಫ್ರೀಜ್ ಆಯಂಡ್ ಪ್ರೊಸೀಡ್' ಬಟನ್ ಒತ್ತಿದ ಬಳಿಕ, ವಿದ್ಯಾರ್ಥಿಗಳು ನೀಡಿದ ಎಲ್ಲ ವಿವರಗಳು ಲಾಕ್ ಆಗುತ್ತವೆ. ಇದಾದ ಬಳಿಕ, ಯಾವುದೇ ಬದಲಾವಣೆಗೆ ಅವಕಾಶವಿಲ್ಲ
ಶುಲ್ಕ ಪಾವತಿಯಾದ ಬಳಿಕವಷ್ಟೇ ಅರ್ಜಿ ಸ್ವೀಕೃತವಾಗುತ್ತದೆ
'ಸೈಬರ್‌ದಾಳಿ ನಡೆಸಲಾಗಿದೆ'
'ಪರಿಶೀಲನೆಗಾಗಿ ರೂಪಿಸಲಾದ ಪೋರ್ಟಲ್ ಮೇಲೆ ಸೈಬರ್ ದಾಳಿಯಾಗಿದೆ. ಎರಡು ನಿಮಿಷಗಳಲ್ಲಿ 15 ಲಕ್ಷ ಬಾರಿ ಪೋರ್ಟಲ್‌ಗೆ ಪ್ರವೇಶ ಪಡೆಯಲು ಯತ್ನಿಸಲಾಗಿದೆ ಮತ್ತು ಪೋರ್ಟಲ್‌ನಲ್ಲಿರುವ ಕಡತಗಳನ್ನು ಕದಿಯಲು 1 ಲಕ್ಷ ಬಾರಿ ಯತ್ನಿಸಲಾಗಿದೆ' ಎಂದು ಸಿಬಿಎಸ್‌ಇ ಹೇಳಿದೆ.
ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಬಿಎಸ್‌ಇ ಈ ಮಾಹಿತಿ ನೀಡಿದೆ. 'ನಮ್ಮ ತಾಂತ್ರಿಕ ತಂಡವು ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದೆ. ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ ಬಳಿಕ ಇನ್ನಷ್ಟು ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ' ಎಂದು ಸಿಬಿಎಸ್‌ಇ ಹೇಳಿದೆ.
'ಜೂನ್ 2ರ ಮಧ್ಯಾಹ್ನ 3ರವರೆಗೆ 16 ಸಾವಿರ ವಿದ್ಯಾರ್ಥಿಗಳು ಪೋರ್ಟಲ್ ಮೂಲಕ ಅರ್ಜಿಗಳನ್ನು ಯಶಸ್ವಿಯಾಗಿ ಸಲ್ಲಿಸಿದ್ದಾರೆ. 8 ಸಾವಿರ ಮಂದಿ ಪೋರ್ಟಲ್‌ಗೆ ಏಕಕಾಲದಲ್ಲಿ ಪ್ರವೇಶ ಪಡೆಯಬಹುದಾಗಿದೆ' ಎಂದಿದೆ.
ಸಂಸದೀಯ ಸಮಿತಿ ಮುಂದೆ ಸಾರ್ಥಕ್ ಹಾಜರು
ಒಎಸ್‌ಎಂ ವ್ಯವಸ್ಥೆ ನಿರ್ವಹಿಸುತ್ತಿರುವ ಕಂಪನಿಗೆ ಅನುಕೂಲ ಮಾಡಿಕೊಡಲು ಗುತ್ತಿಗೆ ನಿಯಮಗಳಲ್ಲಿನ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿ 'ಎಕ್ಸ್'ನಲ್ಲಿ ವಿಡಿಯೊ ಮಾಡಿದ್ದ ಜಾರ್ಖಂಡ್‌ನ 17 ವರ್ಷದ ಸಾರ್ಥಕ್ ಸಿದ್ಧಾಂತ್ ಅವರು ಶಿಕ್ಷಣ, ಮಹಿಳೆ, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಮಂಗಳವಾರ ಹಾಜರಾದರು.
'ತಾನು ಪತ್ತೆಹಚ್ಚಿದ ಸಮಸ್ಯೆಗಳ ಬಗ್ಗೆ ಸಾರ್ಥಕ್ ಅವರು ಏಳು ಪುಟಗಳ ವರದಿಯೊಂದನ್ನು ಸಮಿತಿಗೆ ನೀಡಿದರು. ಜೊತೆಗೆ, ಗುತ್ತಿಗೆ ಪ್ರಕ್ರಿಯೆ ಕುರಿತು ಸಾರ್ಥಕ್ ಅವರು ಹಲವು ಪ್ರಶ್ನೆಗಳನ್ನೂ ಸಿಬಿಎಸ್‌ಇ ಅಧಿಕಾರಿಗಳ ಮುಂದಿಟ್ಟರು' ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಅವರು ಈ ಸಮಿತಿಯ ಅಧ್ಯಕ್ಷ.
ಉದಯ್ ಭಾನು ಚಿಬ್, ಯುವ ಕಾಂಗ್ರೆಸ್ ಅಧ್ಯಕ್ಷನಾವು ದೇಶದಾದ್ಯಂತ ನಮ್ಮ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಿದ್ದೇವೆ. ಪ್ರಧಾನಿ ಮೋದಿ ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದುಕೊಳ್ಳುವವರೆಗೆ ನಾವು ನಿಲ್ಲುವುದಿಲ್ಲ

