ನವದೆಹಲಿ: ದಕ್ಷಿಣ ದೆಹಲಿಯ ಪಾದಚಾರಿ ಮಾರ್ಗದಲ್ಲಿ ಪೋಷಕರ ಜತೆ ಮಲಗಿದ್ದ 11 ವರ್ಷದ ಬಾಲಕಿಯನ್ನು ಕ್ಯಾಬ್ ಚಾಲಕನೊಬ್ಬ ಅಪಹರಿಸಿ, ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಜೂನ್ 22ರ ಮುಂಜಾನೆ ನಡೆದಿದ್ದು, ಆರೋಪಿ ಬಾಶು ಕುಮಾರ್ ಸಿಂಗ್ (29) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
'ಗಾಂಜಾ ನಶೆಯಲ್ಲಿದ್ದ ಆರೋಪಿಯು ಬಾಲಕಿಯನ್ನು ಫರಿದಾಬಾದ್- ಗುರುಗ್ರಾಮ ಗಡಿ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಬಟ್ಟೆ ತುಂಡಿನಿಂದ ಕತ್ತು ಬಿಗಿದು, ಕಲ್ಲಿನಿಂದ ಎದೆಗೆ ಹೊಡೆದು ಕೊಂದಿದ್ದಾನೆ. ನಂತರ ಕಲ್ಲುಗಳ ರಾಶಿಯಿಂದ ಬಾಲಕಿಯ ದೇಹವನ್ನು ಮುಚ್ಚಿ, ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾನೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಆರು ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಆತ ಬಿಹಾರ ಮೂಲದವನಾಗಿದ್ದು, ವಿವಾಹಿತ ಮತ್ತು ಮಕ್ಕಳನ್ನು ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ:
ಮೆಹ್ರೌಲಿಯ ಛತ್ತರ್‌ಪುರ ಮೆಟ್ರೊ ನಿಲ್ದಾಣ ಬಳಿಯ ಪಾದಚಾರಿ ಮಾರ್ಗದಲ್ಲಿ ತನ್ನ ಹೆತ್ತವರ ಜತೆ (ದಿನಗೂಲಿ ಕಾರ್ಮಿಕರು) ಬಾಲಕಿ ಮಲಗಿದ್ದಳು. ಅಲ್ಲಿಯೇ ಸಮೀಪದಲ್ಲಿ ಆರೋಪಿ ಸಿಂಗ್ ತನ್ನ ಬಿಳಿ ಕಾರನ್ನು ನಿಲ್ಲಿಸಿದ್ದ. ಆತ ಸೋಮವಾರ ಬೆಳಗ್ಗಿನ ಜಾವ 4.15ರ ಸುಮಾರಿಗೆ ಬಾಲಕಿಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಕೆಲ ಕ್ಷಣದಲ್ಲೇ ಬಾಲಕಿಯ ತಂದೆಗೆ ಎಚ್ಚರವಾಗಿದೆ. ಈ ವೇಳೆ ವಾಹನ ವೇಗವಾಗಿ ಚಲಿಸಿದ್ದನ್ನು ಅವರು ಗಮನಿಸಿದ್ದಾರೆ. ಅಲ್ಲದೆ ಮಗಳು ಕಾಣೆಯಾಗಿರುವುದನ್ನೂ ಕಂಡುಕೊಂಡಿದ್ದಾರೆ. ಮಗಳು ಕಾಣೆಯಾದ ಬಗ್ಗೆ ಅವರು ಬೆಳಿಗ್ಗೆ 4.58ರ ಸುಮಾರಿಗೆ ಮೆಹ್ರೌಲಿ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಬಾಲಕಿಯ ಶೋಧಕ್ಕೆ ಕಾರ್ಯಾಚರಣೆ ನಡೆಸಲಾಯಿತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
200 ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ: 'ಸುಮಾರು 200 ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ, ಗುಪ್ತಚರ ಮಾಹಿತಿಯ ಜಾಡು ಹಿಡಿದು, ಪಶ್ಚಿಮ ದೆಹಲಿಯ ವಿಕಾಸಪುರ ಬಳಿ ಆರೋಪಿಯನ್ನು ಬಂಧಿಸಲಾಯಿತು' ಎಂದು ಅವರು ಹೇಳಿದ್ದಾರೆ.
ಒಮ್ಮೆ ಕಾರಿನೊಳಗೆ ಮತ್ತೊಮ್ಮೆ, ನಂತರ ಏಕಾಂತ ಅರಣ್ಯ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಬಳಿಕ ಆಕೆಯನ್ನು ಕತ್ತು ಹಿಸುಕಿ ಕೊಂದು, ಕಲ್ಲಿನಿಂದ ಜಜ್ಜಿರುವುದಾಗಿಯೂ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಪರಾಧ ಎಸಗಿದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದು ಬಾಲಕಿಯ ಶವವನ್ನು ಹೊರತೆಗೆಯಲಾಯಿತು. ವಿಧಿವಿಜ್ಞಾನ ಪ್ರಯೋಗಾಲಯದ ತಂಡದವರು ಆರೋಪಿಯ ಕಾರು ಮತ್ತು ಘಟನಾ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮಂಗಳವಾರ ಛತ್ತರ್‌ಪುರದ ಸ್ಮಶಾನದಲ್ಲಿ ಬಾಲಕಿಯ ಅಂತ್ಯಕ್ರಿಯೆ ನಡೆಯಿತು. ತೀವ್ರ ದುಃಖಿತರಾಗಿದ್ದ ಪೋಷಕರು, ಆರೋಪಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿದರು.
ಪೋಕ್ಸೊ ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸಿಂಗ್ ವಿರುದ್ಧ ಬಿಹಾರದಲ್ಲಿ ಎರಡು ಕೊಲೆ ಯತ್ನ ಸೇರಿದಂತೆ ಐದು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

