ಟೆಹರಾನ್: ಅಮೆರಿಕದ ಮಿತ್ರರಾಷ್ಟ್ರಗಳಾದ ಬಹರೇನ್ ಮತ್ತು ಕುವೈತ್ ಮೇಲೆ ಇರಾನ್ ಶನಿವಾರ ಕ್ಷಿಪಣಿ ದಾಳಿ ನಡೆಸಿದೆ. ಇದಕ್ಕೆ ಕೊಲ್ಲಿ ರಾಷ್ಟ್ರಗಳು ಪ್ರತಿರೋಧ ಒಡ್ಡಿವೆ.
'ಹೊರ್ಮುಜ್ ಜಲಸಂಧಿಯನ್ನು ಗುರಿಯಾಗಿರಿಸಿ ಶುಕ್ರವಾರ ರಾತ್ರಿ ಇರಾನ್ ಹಾರಿಸಿದ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.
ಈ ದಾಳಿಗೆ ಪ್ರತಿಯಾಗಿ ಇರಾನ್‌ನ ಕರಾವಳಿ ಕಣ್ಗಾವಲು ರಾಡಾರ್ ತಾಣಗಳ ಮೇಲೆ ದಾಳಿ ಮಾಡಲಾಗಿದೆ' ಅಮೆರಿಕ ಸೇನೆ ಹೇಳಿತ್ತು.
'ನಮ್ಮ ಪ್ರದೇಶದಲ್ಲಿರುವ ಶತ್ರು ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮೂಲಕ ಪ್ರತಿಕ್ರಿಯೆ ನೀಡಲಾಗಿದೆ' ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಶನಿವಾರ ಹೇಳಿದೆ.
'ಬಹರೇನ್ ಮತ್ತು ಕುವೈತ್ ಕಡೆಗೆ ಇರಾನ್ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಈ ಪೈಕಿ ಆರು ಕ್ಷಿಪಣಿಗಳನ್ನು ತಡೆಹಿಡಿಯಲಾಗಿದ್ದು, ಒಂದು ವಿಫಲವಾಗಿದೆ' ಎಂದು ಅಮೆರಿಕ ಸೇನೆ ತಿಳಿಸಿದೆ.
ಅಮೆರಿಕದ ಐದನೇ ನೌಕಾಪಡೆಯ ಪ್ರಧಾನ ಕಚೇರಿಯನ್ನು ಹೊಂದಿರುವ ಬಹರೇನ್, 'ಇರಾನ್‌ನ ಇತ್ತೀಚಿನ ದಾಳಿಗಳನ್ನು ಬಹಿರಂಗ ಆಕ್ರಮಣ' ಎಂದು ಖಂಡಿಸಿದೆ. ಹಾಗೆಯೇ 'ಇವು ಪರಿಸ್ಥಿತಿ ಕೈಮೀರುತ್ತಿರುವುದನ್ನು ಪ್ರತಿನಿಧಿಸುತ್ತವೆ' ಎಂದು ಕುವೈತ್ ಹೇಳಿದೆ.

