ಲಕ್ನೊ: ಉತ್ತರ ಪ್ರದೇಶ ರಾಜಕಾರಣದಲ್ಲಿ ಮೂಲೆಗುಂಪಾಗಿರುವ ಬಹುಜನ ಸಮಾಜ ಪಕ್ಷಕ್ಕೆ (BSP) ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಪಕ್ಷದ ವರಿಷ್ಠೆ ಮಾಯಾವತಿ ಜೂನ್ 22ರಂದು ಅಯೋಧ್ಯೆಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದು, 2027ರ ವಿಧಾನಸಭಾ ಚುನಾವಣೆಯತ್ತ ಪಕ್ಷದ ಚುನಾವಣಾ ಸಿದ್ಧತೆ ನಡೆಸಲಿದ್ದಾರೆ ಎಂದು deccanherald.com ವರದಿ ಮಾಡಿದೆ.
ಅಯೋಧ್ಯೆಯ ಸಾರ್ವಜನಿಕ ಸಭೆಯ ಒಂದು ದಿನದ ಬಳಿಕ ನೆರೆಯ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಮಾಯಾವತಿ ಮತ್ತೊಂದು ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
'2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಗಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಸರಣಿ ಸಮಾವೇಶಗಳನ್ನು ಹಮ್ಮಿಕೊಳ್ಳಲು ಪಕ್ಷ ಯೋಜನೆ ರೂಪಿಸಿದೆ' ಎಂದು BSPಯ ಹಿರಿಯ ನಾಯಕರೊಬ್ಬರು ಶನಿವಾರ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ದಲಿತ ನಾಯಕ ಅವಧೇಶ್ ಪ್ರಸಾದ್ ಅವರ ಗೆಲುವಿನಲ್ಲಿ ದಲಿತ ಮತಗಳು ಪ್ರಮುಖ ಪಾತ್ರ ವಹಿಸಿವೆ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, BSP ತನ್ನ ಚುನಾವಣಾ ಪ್ರಚಾರವನ್ನು ಅಯೋಧ್ಯೆಯಿಂದಲೇ ಆರಂಭಿಸಲು ಮುಂದಾಗಿದೆ ಎಂದು ಹೇಳಲಾಗಿದೆ. ಆ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರೆ, BSP ಮೂರನೇ ಸ್ಥಾನಕ್ಕೆ ಕುಸಿದಿತ್ತು.
ಅಂಬೇಡ್ಕರ್ ನಗರ ಜಿಲ್ಲೆಯಲ್ಲಿಯೂ ಇತರೆ ಹಿಂದುಳಿದ ವರ್ಗಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ಮತದಾರರು ಇರುವುದರಿಂದ, ಆ ಜಿಲ್ಲೆ ಕೂಡ BSPಗೆ ಚುನಾವಣಾ ದೃಷ್ಟಿಯಿಂದ ಮಹತ್ವದ ಜಿಲ್ಲೆಯಾಗಿದೆ.
ಅಯೋಧ್ಯೆ ಹಾಗೂ ಅಂಬೇಡ್ಕರ್ ನಗರದಲ್ಲಿ ನಡೆಯಲಿರುವ ಸಮಾವೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಪಕ್ಷವು ಹಿರಿಯ ನಾಯಕರಿಗೆ ಸೂಚನೆ ನೀಡಿದೆ. ಈ ಸಮಾವೇಶಗಳಿಗೆ ಜನರನ್ನು ಕರೆತರುವ ಜವಾಬ್ದಾರಿಯನ್ನು BSP ರಾಜ್ಯಾಧ್ಯಕ್ಷ ವಿಶ್ವನಾಥ್ ಪಾಲ್ ಅವರಿಗೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ತನ್ನ ಪ್ರತಿಸ್ಪರ್ಧಿಗಳನ್ನು ಚುನಾವಣಾ ಓಟದಲ್ಲಿ ಹಿಂದಿಕ್ಕುವ ಉದ್ದೇಶದಿಂದ ಈ ತಿಂಗಳಲ್ಲೇ ಹಲವು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಯೋಜನೆಯನ್ನೂ BSP ಹೊಂದಿದೆ ಎಂದು ಮೂಲಗಳು ಹೇಳಿವೆ.
2027ರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿರುವ ಮಾಯಾವತಿ, ಮುಂದಿನ ಚುನಾವಣೆ ತ್ರಿಕೋನ ಸ್ಪರ್ಧೆಯಾಗಬೇಕು ಹಾಗೂ BSP ಕನಿಷ್ಠ 'ಕಿಂಗ್ಮೇಕರ್' ಆಗಿಯಾದರೂ ಹೊರಹೊಮ್ಮಬೇಕು ಎಂಬ ಲೆಕ್ಕಾಚಾರ ಹೊಂದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಕಳೆದ ಒಂದು ದಶಕದಲ್ಲಿ ಉತ್ತರ ಪ್ರದೇಶದಲ್ಲಿ BSPಯ ಮತಗಳಿಕೆ ಪ್ರಮಾಣ ಕ್ರಮೇಣ ಕುಸಿಯುತ್ತ ಬಂದಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಕೇವಲ 19 ಸ್ಥಾನಗಳಲ್ಲಿ ಜಯಗಳಿಸಿದ್ದು, ಅದರ ಮತಗಳಿಕೆ ಪ್ರಮಾಣ ಶೇ.22ಕ್ಕೆ ಇಳಿದಿತ್ತು.
2022ರ ಚುನಾವಣೆಯಲ್ಲಿ ಪಕ್ಷದ ಸಾಧನೆ ಮತ್ತಷ್ಟು ಹಿನ್ನಡೆ ಕಂಡಿತ್ತು. ಆಗ BSPಯ ಮತಗಳಿಕೆ ಪ್ರಮಾಣ ಶೇ.12.8ಕ್ಕೆ ಕುಸಿದಿದ್ದು, ಕೇವಲ ಒಬ್ಬ ಅಭ್ಯರ್ಥಿ ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಲ್ಲದೆ, 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಒಂದು ಸ್ಥಾನವನ್ನೂ ಗೆಲ್ಲದೆ ಖಾತೆ ತೆರೆಯಲು ವಿಫಲವಾಗಿತ್ತು.

