HEALTH TIPS

ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಬೆಂಬಲಿತ ಭಯೋತ್ಪಾದಕ ಜಾಲ ಭೇದಿಸಿದ ದಿಲ್ಲಿ ಪೊಲೀಸರು; 7 ಮಂದಿಯ ಬಂಧನ

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್‌) ಬೆಂಬಲಿತ ಭಯೋತ್ಪಾದಕ-ಅಪರಾಧ ಜಾಲವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ದಿಲ್ಲಿ -ಎನ್‌ ಸಿ ಆರ್‌ ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು, ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವುದು ಸೇರಿದಂತೆ ಪ್ರಮುಖ ಸ್ಥಳಗಳ ಕುರಿತು ಮಾಹಿತಿ ಸಂಗ್ರಹಿಸುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಬಂಧಿತರು ಪಾಕಿಸ್ತಾನ ಮೂಲದ ದರೋಡೆಕೋರ ಶಹಝಾದ್ ಭಟ್ಟಿ ಮತ್ತು ಆತನ ಸಹಚರ ಅಜ್ಮಲ್ ಗುಜ್ಜರ್‌ ಅವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ದಿಲ್ಲಿ ಪೊಲೀಸ್ ವಿಶೇಷ ಘಟಕದ ತಂಡ ಇವರ ವಿರುದ್ಧದ ಕಾರ್ಯಾಚರಣೆಯನ್ನು ನಡೆಸಿದೆ.

ಜಾಲವು ಪಾಕಿಸ್ತಾನದಿಂದ ಪಂಜಾಬ್ ಮಾರ್ಗವಾಗಿ ಭಾರತಕ್ಕೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಹೆರಾಯಿನ್‌ ಸೇರಿದಂತೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿತ್ತು. ಬಳಿಕ ಅವುಗಳನ್ನು ದಿಲ್ಲಿ -ಎನ್‌ ಸಿ ಆರ್‌ ನ ವಿವಿಧ ಭಾಗಗಳಿಗೆ ಪೂರೈಸಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಪಂಜಾಬ್‌ ಗೆ ಸರಕುಗಳನ್ನು ರವಾನಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳು ದಿಲ್ಲಿ -ಎನ್‌ ಸಿ ಆರ್‌ ನ ಜನನಿಬಿಡ ಸಾರ್ವಜನಿಕ ಸ್ಥಳಗಳು, ಪ್ರಮುಖ ಸಂಸ್ಥೆಗಳು, ಸೂಕ್ಷ್ಮ ಪ್ರದೇಶಗಳು ಹಾಗೂ ಧಾರ್ಮಿಕ ಮುಖಂಡರಿಗೆ ಸಂಬಂಧಿಸಿದ ಸ್ಥಳಗಳ ಕುರಿತು ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೆ, ಫೊಟೋ ಮತ್ತು ವೀಡಿಯೊಗಳನ್ನು ತೆಗೆದು ಪಾಕಿಸ್ತಾನದಲ್ಲಿರುವ ತಮ್ಮ ನಿರ್ವಾಹಕರಿಗೆ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಜಾಲದ ಉದ್ದೇಶ ಭಯದ ವಾತಾವರಣ ಸೃಷ್ಟಿಸುವುದು, ಕೋಮು ಉದ್ವಿಗ್ನತೆ ಕೆರಳಿಸುವುದು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವುದಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಪ್ತಚರ ಮಾಹಿತಿಯ ಆಧಾರದ ಮೇಲೆ ತಾಂತ್ರಿಕ ನಿಗಾ, ಮೊಬೈಲ್‌ ಫೋನ್‌ ದತ್ತಾಂಶ ವಿಶ್ಲೇಷಣೆ ಹಾಗೂ ಸ್ಥಳೀಯ ಮಾಹಿತಿ ಸಂಗ್ರಹದ ಮೂಲಕ ಜಾಲದ ಚಟುವಟಿಕೆಗಳನ್ನು ಪತ್ತೆಹಚ್ಚಲಾಯಿತು. 2026ರ ಮೇ ತಿಂಗಳಲ್ಲಿ ದಿಲ್ಲಿ-ಎನ್‌ ಸಿ ಆರ್‌ ನಲ್ಲಿ ದಾಳಿ ನಡೆಸುವ ಸಂಚಿನ ಕುರಿತು ಮಾಹಿತಿ ದೊರೆತ ಬಳಿಕ ತನಿಖೆ ತೀವ್ರಗೊಳಿಸಲಾಗಿತ್ತು.

ಬಂಧಿತರನ್ನು ಗಾಝಿಯಾಬಾದ್‌ ನ ಲೋನಿ ನಿವಾಸಿಗಳಾದ ಅನಸ್ ಅಲಿಯಾಸ್ ಅನಸ್ ತ್ಯಾಗಿ (26), ಮೋಹಿತ್ ಅಲಿಯಾಸ್ ಯೋಗಿ (26), ಆರಿಫ್ ಅಲಿಯಾಸ್ ಪ್ರಧಾನ್ ಮತ್ತು ಸಬೀರ್, ಟೆಕ್ನೋ ಸಿಟಿಯ ದೀಪಕ್ ಅಲಿಯಾಸ್ ದೀಪಕ್ ಅಗ್ರೋಲಾ ಹಾಗೂ ಜತನ್, ಪಂಜಾಬ್‌ನ ಫತೇಘರ್ ಸಾಹಿಬ್ ನಿವಾಸಿ ಕರಣ್‌ವೀರ್ ಸಿಂಗ್ ಎಂದು ಗುರುತಿಸಲಾಗಿದೆ.

ಬಂಧಿತರಲ್ಲಿ ಕೆಲವರ ವಿರುದ್ಧ ಕೊಲೆ, ದರೋಡೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಎನ್‌ ಡಿ ಪಿ ಎಸ್ ಕಾಯ್ದೆಯಡಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಮುನಾ ವಿಹಾರ್‌ ನ ಭಾಗೀರಥ್ ನೀರು ಸಂಸ್ಕರಣಾ ಘಟಕದ ಸಮೀಪ ಮೋಹಿತ್‌ಯನನ್ನು ಮೊದಲಿಗೆ ಬಂಧಿಸಲಾಯಿತು. ಆತನಿಂದ ಒಂದು ಅಕ್ರಮ ಪಿಸ್ತೂಲ್‌, ನಾಲ್ಕು ಜೀವಂತ ಕಾರ್ಟ್ರಿಡ್ಜ್‌ ಗಳು ಹಾಗೂ ಮೊಬೈಲ್‌ ಫೋನ್‌ ವಶಪಡಿಸಿಕೊಳ್ಳಲಾಯಿತು. ಮೊಬೈಲ್‌ ಪರಿಶೀಲನೆಯಲ್ಲಿ ಅಜ್ಮಲ್ ಗುಜ್ಜರ್‌ ಜತೆಗಿನ ಸಂಪರ್ಕದ ದಾಖಲೆಗಳು ಪತ್ತೆಯಾಗಿವೆ.

ನಂತರದ ಕಾರ್ಯಾಚರಣೆಯಲ್ಲಿ ಐದು ಅರೆ-ಸ್ವಯಂಚಾಲಿತ ಪಿಸ್ತೂಲ್‌ ಗಳು, 41 ಜೀವಂತ ಕಾರ್ಟ್ರಿಡ್ಜ್‌ ಗಳು, ಶಹಜಾದ್ ಭಟ್ಟಿ ಮತ್ತು ಅಜ್ಮಲ್ ಗುಜ್ಜರ್‌ಗೆ ಸಂಬಂಧಿಸಿದ ಚಾಟ್‌ ಗಳು ಹಾಗೂ ಧ್ವನಿ ಸಂದೇಶಗಳನ್ನು ಒಳಗೊಂಡ ಏಳು ಮೊಬೈಲ್‌ ಫೋನ್‌ ಗಳು, ಒಂದು ಸ್ಕಾರ್ಪಿಯೋ ವಾಹನ ಮತ್ತು ಹಣ ವರ್ಗಾವಣೆಗೆ ಬಳಸಲಾಗಿದ್ದ ಹಲವು ಬ್ಯಾಂಕ್‌ ಖಾತೆಗಳ ವಿವರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಹಝಾದ್ ಭಟ್ಟಿ ಮತ್ತು ಅಜ್ಮಲ್ ಗುಜ್ಜರ್ ಸಾಮಾಜಿಕ ಜಾಲತಾಣಗಳು ಹಾಗೂ ಎನ್‌ಕ್ರಿಪ್ಟ್‌ ಮಾಡಿದ ಸಂದೇಶ ವಿನಿಮಯ ಆಯಪ್‌ಯಗಳ ಮೂಲಕ ಭಾರತೀಯ ಯುವಕರನ್ನು ಸಂಪರ್ಕಿಸುತ್ತಿದ್ದರು. ಹಣದ ಆಮಿಷವೊಡ್ಡಿ ಅವರನ್ನು ಜಾಲಕ್ಕೆ ಸೆಳೆದು, ಶಸ್ತ್ರಾಸ್ತ್ರ ಸಾಗಣೆ, ಮಾದಕವಸ್ತು ಕಳ್ಳಸಾಗಣೆ, ವಿಚಕ್ಷಣ ಕಾರ್ಯ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಅನಸ್ ಮತ್ತು ಕರಣ್‌ವೀರ್ ಸಿಂಗ್ ಸೇರಿದಂತೆ ಕೆಲ ಸದಸ್ಯರನ್ನು ಪಂಜಾಬ್‌ ಗೆ ಕಳುಹಿಸಿ, ಅಲ್ಲಿಗೆ ತಲುಪುತ್ತಿದ್ದ ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಸರಕುಗಳನ್ನು ಸ್ವೀಕರಿಸಿ ದಿಲ್ಲಿ -ಎನ್‌ ಸಿ ಆರ್‌ ಗೆ ಸಾಗಿಸಲಾಗುತ್ತಿತ್ತು. ಆರಿಫ್ ಜಿಗಾನಾ ಪಿಸ್ತೂಲ್‌ ಖರೀದಿಸಿದ್ದರೆ, ಅಜ್ಮಲ್ ಗುಜ್ಜರ್ ವಿವಿಧ ಯುಪಿಐ ಖಾತೆಗಳ ಮೂಲಕ ಸುಮಾರು 1 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಬಳಿಕ ಜಾಲವು ಹೆರಾಯಿನ್ ಮತ್ತು 'ಚಿಟ್ಟಾ' ಮಾದಕವಸ್ತು ಕಳ್ಳಸಾಗಣೆಯಲ್ಲಿಯೂ ತೊಡಗಿತ್ತು.

ದೀಪಕ್ ಅಗ್ರೋಲಾ ಜೈಲಿನೊಳಗಿಂದಲೇ ಮೊಬೈಲ್‌ ಫೋನ್‌ ಬಳಸಿ ಜಾಲದ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಿದ್ದನು. ಅನಸ್ ಮೂಲಕ ಅಜ್ಮಲ್ ಗುಜ್ಜರ್‌ನೊಂದಿಗೆ ಸಂಪರ್ಕ ಸಾಧಿಸಿ ಶಸ್ತ್ರಾಸ್ತ್ರ ಸಾಗಣೆಗೆ ವ್ಯವಸ್ಥೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲಕ್ಕೆ ಸಂಬಂಧಿಸಿದ ಇನ್ನಿತರ ಆರೋಪಿಗಳು, ಶಸ್ತ್ರಾಸ್ತ್ರ ಪೂರೈಕೆದಾರರು, ಮಾದಕವಸ್ತು ಕಳ್ಳಸಾಗಣೆ ಜಾಲಗಳು ಹಾಗೂ ಪಾಕಿಸ್ತಾನ ಮೂಲದ ನಿರ್ವಾಹಕರ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ದಿಲ್ಲಿ ಪೊಲೀಸ್ ವಿಶೇಷ ಘಟಕ ತಿಳಿಸಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries