ಭೋಪಾಲ್: ಇಲ್ಲಿನ ಬರ್ಕಾತುಲ್ಲಾ ವಿಶ್ವವಿದ್ಯಾನಿಲಯವನ್ನು ಮಧ್ಯಪ್ರದೇಶ ಸರಕಾರವು ವಾಗ್ದೇವಿ ಭೋಜಪಾಲ ವಿಶ್ವವಿದ್ಯಾನಿಲಯವೆಂದು ಮರುನಾಮಕರಣಗೊಳಿಸಿರುವುದಾಗಿ ನವಭಾರತ್ ಟೈಮ್ಸ್ ದೈನಿಕವು ಗುರುವಾರ ವರದಿ ಮಾಡಿದೆ.
ಭೋಪಾಲ್‌ನವರಾದ ಮೊಹಮ್ಮದ್ ಬರಕಾತುಲ್ಲಾ ಭೋಪಾಲಿ ಅವರು ಸ್ವಾತಂತ್ರ್ಯ ಹೋರಾಟಗಾರ ಸ್ಮರಣಾರ್ಥವಾಗಿ 1988ರಲ್ಲಿ ವಿವಿಗೆ ಅವರ ಹೆಸರನ್ನಿಡಲಾಗಿತ್ತು.
ಬರ್ಕಾತುಲ್ಲಾ ವಿವಿಗೆ ಮರುನಾಮಕರಣಗೊಳಿಸುವ ದೀರ್ಘಕಾಲದ ಪ್ರಸ್ತಾವನೆಗೆ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯು ಸಮ್ಮತಿಸಿದೆ. ಇದೀಗ ಈ ನಿರ್ಧಾರಕ್ಕೆ ವಿವಿಯ ಕುಲಾಧಿಪತಿಯಾದ ರಾಜ್ಯಪಾಲರು ಅನುಮೋದನೆಯ ಅಗತ್ಯವಿದೆ.
ವಾಗ್ದೇವಿ ಎನ್ನುವುದು ಹಿಂದೂ ದೇವತೆ ಸರಸ್ವತಿಯ ಇನ್ನೊಂದು ಹೆಸರಾಗಿದೆ. ಐತಿಹಾಸಿಕ ದೊರೆ ಭೋಜರಾಜನನ್ನು ಭೋಜಪಾಲ ಎಂಬುದಾಗಿಯೂ ಉಲ್ಲೇಖಿಸಲಾಗುತ್ತಿದೆ.
11ನೇ ಶತಮಾನದಲ್ಲಿ ಮಧ್ಯಭಾರತದಲ್ಲಿರುವ ಮಾಳ್ವ ಪ್ರಾಂತವನ್ನು ಭೋಜ ರಾಜ ಆಳಿದ್ದಾನೆ. ಭೋಪಾಲ ನಗರವನ್ನು ಆತ ಸ್ಥಾಪಿಸಿದ್ದನೆಂದು ಹೇಳಲಾಗುತ್ತಿದೆ. ಭೋಪಾಲದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಮರುನಾಮಕರಣವನ್ನು ಮಾಡಲಾಗಿದೆಯೆಂದು ವಿವಿ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ ಭೋಪಾಲ ಮಹಾನಗರ ಪಾಲಿಕೆಯು ಭೋಪಾಲ್‌ನ ಕೊನೆಯ ನವಾಬ ಹಮೀದುಲ್ಲಾ ಖಾನ್ ಅವರ ಹೆಸರಿನ ಮೂರು ಶಿಕ್ಷಣಸಂಸ್ಥೆಗಳನ್ನು ಮರುನಾಮಕರಣಗೊಳಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತ್ತು.
ಕಳೆದ ಕೆಲವು ವರ್ಷಗಳಿಂದ ಭೋಪಾಲ್‌ನ ಹಲವಾರು ಹೆಗ್ಗುರುತುಗಳನ್ನು ಮರುನಾಮಕರಣಗೊಳಿಸಲಾಗಿದೆ. ಹಬೀಬ್‌ಗಂಜ್ ರೈಲು ನಿಲ್ದಾಣಕ್ಕೆ 18ನೇ ಶತಮಾನದಲ್ಲಿ ಪ್ರಾಂತವನ್ನು ಆಳಿದ್ದ ಗೊಂಡ ಪಂಗಡದ ಯುವರಾಣಿ ಕಮಲಾಪತಿ ಎಂದು ಮರುನಾಮಕರಣಗೊಳಿಸಲಾಗಿದೆ. ಕಳೆ ವರ್ಷದ ಜನವರಿಯಲ್ಲಿ ಭೋಪಾಲ್ ಜಿಲ್ಲೆಯ 11 ಗ್ರಾಮಗಳನ್ನು ರಾಜ್ಯ ಸರಕಾರ ಮರುನಾಮಕರಣಗೊಳಿಸಿದೆ.

