ನವದೆಹಲಿ: ವೈದ್ಯೆಯಾಗಿ ತನ್ನ ಕುಟುಂಬವನ್ನು ಬಡತನದಿಂದ ಮೇಲೆತ್ತಬೇಕೆಂಬ ಕನಸಿನೊಂದಿಗೆ ನೀಟ್ ಪರೀಕ್ಷೆ ಬರೆದಿದ್ದ ಮದ್ಯಪ್ರದೇಶದ ಮಾವುಗಂಜ್‌ನ ನಿವಾಸಿ ಆಕಾಂಕ್ಷಾ ಚತುರ್ವೇದಿಯ ಬದುಕು ದಾರುಣ ಅಂತ್ಯವನ್ನು ಕಂಡಿದೆ. ನೀಟ್ ಪ್ರಶ್ನಾಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾದ್ದರಿಂದ ತನ್ನೆಲ್ಲಾ ಪರಿಶ್ರಮ ವ್ಯರ್ಥವಾದ ಕಾರಣ ಖಿನ್ನಳಾದ ಆಕೆ ಸಾವಿಗೆ ಶರಣಾಗಿದ್ದಾರೆ.
ನಾಗಪುರದ ಕೋಚಿಂಗ್ ಸಂಸ್ಥೆಯೊಂದರಲ್ಲಿ ನೀಟ್ ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಆಕಾಂಕ್ಷಾ ಅವರು ಮೇ 20ರಂದು ತನ್ನ ಕೊಠಡಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಾದ ಹಲವು ದಿನಗಳ ಬಳಿಕ ಆಕೆ ಬರೆದಿಟ್ಟ ಕೈಬರಹದ ಪತ್ರವೊಂದು ಪತ್ತೆಯಾಗಿದ್ದು, ಅದನ್ನು ಆಕೆಯ ಬಂಧುಗಳು ಬಹಿರಂಗಪಡಿಸಿದ್ದಾರೆ. ನೀಟ್ ಪರೀಕ್ಷೆ ರದ್ದಾದ ಬಳಿಕ ತಾನು ಭಾವನಾತ್ಮಕ ಒತ್ತಡವನ್ನು ಎದುರಿಸುತ್ತಿದ್ದುದನ್ನು ಈ ಪತ್ರವು ಬಹಿರಂಗಪಡಿಸಿದೆ.
ಪತ್ರದಲ್ಲಿ ಆಕೆ ತಂದೆ, ತಾಯಿಯನ್ನು ಉದ್ದೇಶಿಸಿ, ''ನಿಮ್ಮ ಮಗಳು ಕಷ್ಟಪಟ್ಟು ಅಧ್ಯಯನ ಮಾಡಿ, ವೈದ್ಯೆಯಾಗುವಳೆಂಬ ನಂಬಿಕೆ ನಿಮಗಿತ್ತು. ಆದರೆ ಮತ್ತೊಮ್ಮೆ ನೀಟ್ ಪರೀಕ್ಷೆ ಬರೆಯುವ ಧೈರ್ಯ ನನ್ನಲ್ಲಿ ಉಳಿದಿಲ್ಲ'' ಎಂದು ಆಕಾಂಕ್ಷಾ ಪತ್ರದಲ್ಲಿ ಬರೆದಿದ್ದಾಳೆ.
'' ಮೊದಲ ಯತ್ನದಲ್ಲಿ ನಾನು ಉತ್ತಮ ಅಂಕಗಳನ್ನು ಗಳಿಸಿದ್ದೆ. ಆದರೆ ಹಾಗೆಯೇ ಮತ್ತೊಮ್ಮೆ ಚೆನ್ನಾಗಿ ಮಾಡಬಲ್ಲೆನೆಂಬ ಖಾತರಿ ನನಗಿಲ್ಲ. ತಂದೆ, ತಾಯಿಯವರೇ ನನ್ನನ್ನು ಕ್ಷೃಮಿಸಿ. ನಾನು ಎಲ್ಲವನ್ನೂ ಭಗ್ನಗೊಳಿಸಿದೆ'' ಎಂದು ಆಕಾಂಕ್ಷಾ ಪತ್ರದಲ್ಲಿ ಬರೆದಿದ್ದಾರೆ.
ಆಕಾಂಕ್ಷಾ ಅವರ ತಂದೆ ಕೃಷ್ಣ ಕುಮಾರ್ ಅವರು ಬಡ ರೈತರಾಗಿದ್ದು, ತನ್ನ ಮಗಳ ನೀಟ್ ಶಿಕ್ಷಣಕ್ಕೆ ನೆರವಾಗಲು ಭಾರೀ ಸಾಲ ಮಾಡಿದ್ದರು. ಸಣ್ಣ ತುಂಡು ಜಮೀನಿನಲ್ಲಿ ಬೇಸಾಯ ಮಾಡುವುದರ ಜೊತೆಗೆ, ಮನೆ ಖರ್ಚು ಹಾಗೂ ಮಗಳ ಕೋಚಿಂಗ್ ಶುಲ್ಕಗಳ ಹೊರೆಯನ್ನು ತುಂಬಲು ನಾಗಪುರದಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದು.
ಆಕಾಂಕ್ಷಾಳ ನೀಟ್ ಕೋಚಿಂಗ್‌ಗಾಗಿ, ಕೃಷ್ಣ ಕುಮಾರ್ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 3 ಲಕ್ಷ ರೂ. ಸಾಲ ಪಡೆದಿದ್ದರು ಹಾಗೂ ಕುಟುಂಬಿಕರಿಂದಲೂ ಆರ್ಥಿಕ ನೆರವು ಪಡೆದುಕೊಂಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಆಕಾಂಕ್ಷಾ ಅವರ ಚಿಕ್ಕಪ್ಪ ಜಗದೀಶ್ ಪ್ರಸಾದ್ ಚತುರ್ವೇದಿ, ಆಕಾಂಕ್ಷಾ ನೀಟ್ ಪರೀಕ್ಷೆ ಬರೆದ ಬಳಿಕ ಅತೀವ ಸಂತಸದಿಂದ್ದಳು. 650ಕ್ಕೂ ಅಧಿಕ ಅಂಕಗಳನ್ನು ಗಳಿಸುವ ವಿಶ್ವಾಸವನ್ನು ಹೊಂದಿದ್ದಳು. ಆದರೆ ಪ್ರಶ್ನಾಪತ್ರಿಕೆ ಸೋರಿಕೆ ಹಗರಣದ ಸುದ್ದಿಗಳು ಬರತೊಡಗಿದಾಗ ಆಕೆ ತೀವ್ರ ಆಘಾತಗೊಂಡಿದ್ದಳು. ಆಕೆ ಊಟ ಮಾಡುವುದನ್ನು ನಿಲ್ಲಿಸಿದ್ದಳು. ಹೆಚ್ಚು ಮಾತನಾಡುತ್ತಿರಲಿಲ್ಲ ಹಾಗೂ ವಿಚಲಿತಳಾದಂತೆ ಕಂಡುಬಂದಿದ್ಧಳು. ಇದು ಹೀಗೆ ಕೊನೆಗೊಳ್ಳಬಹುದೆಂದು ನಾವು ಕಲ್ಪಿಸಿಯೇ ಇರಲಿಲ್ಲ.

