ಕೋಲ್ಕತಾ : ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಗೆ ಕೆಲವು ದಿನಗಳಿಗೆ ಮುನ್ನ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಗುರುವಾರ ಭಾಂಗರ್‌ನ ದಕ್ಷಿಣ ಬಮುನಿಯಾ ಪ್ರದೇಶದಲ್ಲಿರುವ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಸೌಕತ್ ಮೊಲ್ಲಾ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಬಾಂಬ್ ಸ್ಫೋಟದ ಕುರಿತು ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಎನ್‌ಐಎ ಟಿಎಂಸಿ ನಾಯಕ ವಹೀದುಲ್ ಇಸ್ಲಾಂ ಸೇರಿದಂತೆ ಹಲವರನ್ನು ಬಂಧಿಸಿದೆ.
ಮಾಹಿತಿ ಸಂಗ್ರಹಿಸಲು ಮತ್ತು ಈ ಪ್ರಕರಣಕ್ಕೆ ಇರಬಹುದಾದ ಸಂಭಾವ್ಯ ನಂಟನ್ನು ಪರಿಶೀಲಿಸಲು ವಿಶೇಷ ಎನ್‌ಐಎ ತಂಡದ ಅಧಿಕಾರಿಗಳು ಮೊಲ್ಲಾ ಅವರ ನಿವಾಸಕ್ಕೆ ಆಗಮಿಸಿದ್ದರು.

