ಮುಂಬೈ: ಕಾಂಗ್ರೆಸ್ ನೊಂದಿಗೆ ನ್ಯಾಷನಲಿಷ್ಟ್ ಕಾಂಗ್ರೆಸ್ ಪಾರ್ಟಿ(NCP) ವಿಲೀನಗೊಳ್ಳಲಿದೆ ಎಂಬ ವರದಿಗಳನ್ನುNCP (SP) ನಾಯಕಿ ಹಾಗೂ ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಳ್ಳಿಹಾಕಿದ್ದಾರೆ.
ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಈ ಕುರಿತು ನಮಗೆ ಏನೂ ತಿಳಿದಿಲ್ಲ.
ಶರದ್ ಪವಾರ್ ಸಾಹೇಬರಿಗೆ ತಿಳಿದಿರಬಹುದೇ ಹೊರತು, ನನಗಾಗಲಿ, ರಾಜ್ಯ ಘಟಕದ ಅಧ್ಯಕ್ಷ ಶಶಿಕಾಂತ್ ಶಿಂದೆಗಾಗಲಿ ಅಥವಾ ಪಕ್ಷದ ಹಿರಿಯ ನಾಯಕ ಜಯಂತ್ ಪಾಟೀಲ್ ಗಾಗಲಿ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ' ಎಂದು ಹೇಳಿದರು.
'ನಮ್ಮ ಪಕ್ಷದಲ್ಲಿ ಯಾರೂ ಯಾವುದೇ ಪ್ರಸ್ತಾವವನ್ನು ಮಂಡಿಸಿಲ್ಲ. ಬೇರೆ ಯಾರಿಂದಲೂ ನಾವು ಯಾವುದೇ ಪ್ರಸ್ತಾವವನ್ನು ಸ್ವೀಕರಿಸಿಲ್ಲ. ನಾವು ಯಾವುದೇ ಪ್ರಸ್ತಾವ ಮಾಡಿಲ್ಲ; ಅವರೂ ಯಾವುದೇ ಪ್ರಸ್ತಾವ ಮಂಡಿಸಿಲ್ಲ' ಎಂದು ವಿಲೀನ ಮಾತುಕತೆಗಳ ಕುರಿತ ವದಂತಿಗಳನ್ನು ಅವರು ಅಲ್ಲಗಳೆದರು.
ಬಿಜೆಪಿ ವಿರುದ್ಧದ ರಾಜಕೀಯ ಶಕ್ತಿಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಕಾಂಗ್ರೆಸ್ನಿಂದ ಬೇರ್ಪಟ್ಟು ರೂಪುಗೊಂಡಿರುವ ಶರದ್ ಪವಾರ್ ನೇತೃತ್ವದ NCP ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ನಂತಹ ಪಕ್ಷಗಳು ತಮ್ಮ ಮಾತೃಪಕ್ಷವಾದ ಕಾಂಗ್ರೆಸ್ ಗೆ ಮರಳುವ ಕುರಿತು ಪರಿಗಣಿಸಬೇಕು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಯ ಬಳಿಕ ಕಾಂಗ್ರೆಸ್-NCP ವಿಲೀನದ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿದ್ದವು.
ಇದೇ ವೇಳೆ, 'NCP (SP) ಸಂಸ್ಥಾಪಕ ಶರದ್ ಪವಾರ್ ಅವರ ಪ್ರಸ್ತಾವವನ್ನು ಚರ್ಚಿಸಲಾಗಿದೆ. ಬಿಜೆಪಿ ವಿರೋಧಿ ಮತಗಳು ವಿಭಜನೆಯಾಗುವುದನ್ನು ತಪ್ಪಿಸಲು ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಂದಿರುವ ವಿರೋಧ ಪಕ್ಷಗಳು ಒಂದಾಗಬೇಕು ಎಂಬ ಅಭಿಪ್ರಾಯವನ್ನು ಪರಿಗಣಿಸಲಾಗುತ್ತಿದೆ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ನ ಹಿರಿಯ ನಾಯಕ ನಾನಾ ಪಟೋಲೆ ಹೇಳಿದ್ದರು. ಇದರಿಂದ ವಿಲೀನದ ಊಹಾಪೋಹಗಳಿಗೆ ಮತ್ತಷ್ಟು ಬಲ ಬಂದಿತ್ತು.
ಆದರೆ, ಈ ವಾರದ ಆರಂಭದಲ್ಲಿ ವಿಲೀನದ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ್ದ ಸುಪ್ರಿಯಾ ಸುಳೆ, 'ಸಮಯವೇ ಹೇಳಲಿದೆ. ಮೊದಲು ಮಳೆ ಬರಲಿ. ಬಳಿಕ ಕೊಡೆ ಹಿಡಿಯುವುದೋ ಅಥವಾ ರೈನ್ ಕೋಟ್ ಧರಿಸುವುದೋ ಎಂಬುದನ್ನು ನಾವು ನಿರ್ಧರಿಸುತ್ತೇವೆ' ಎಂದು ಹೇಳಿದ್ದರು.

