ನವದೆಹಲಿ: 'ಎನ್‌ಟಿಎ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಎಂಬುದರ ವ್ಯಾಖ್ಯಾನ ಏನು? 2018ರ ನಂತರ ಈವರೆಗೆ ಸಂಸ್ಥೆ ನಡೆಸಿರುವ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆಯೇ' ಎಂದು ಸಂಸದೀಯ ಸಮಿತಿಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯನ್ನು (ಎನ್‌ಟಿಎ) ಪ್ರಶ್ನಿಸಿದೆ.
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಒಳಗೊಂಡು ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಲೋಪಗಳನ್ನು ಕುರಿತಂತೆ ಎನ್‌ಟಿಎ ಮತ್ತು ಸಿಬಿಎಸ್‌ಇ ಸಂಸ್ಥೆಗಳ ಅಧಿಕಾರಿಗಳಿಗೆ ಇದೂ ಸೇರಿ ಹಲವು ಪ್ರಶ್ನೆಗಳನ್ನು ಸಮಿತಿಯು ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯ ಪರೀಕ್ಷಾ ವ್ಯವಸ್ಥೆಯಿಂದ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ. ಸಂಭವನೀಯ ಪ್ರಶ್ನೆಪತ್ರಿಕೆಗಳಿಂದ ಕೆಲ ಪ್ರಶ್ನೆಗಳು ಹಂಚಿಕೆಯಾಗಿವೆ ಎಂದು ಎನ್‌ಟಿಎ ಈ ಮುನ್ನ ಪ್ರತಿಪಾದಿಸಿತ್ತು.
ಕಾಂಗ್ರೆಸ್ ಸದಸ್ಯ ದಿಗ್ವಿಜಯ ಸಿಂಗ್ ಶಿಕ್ಷಣ ಕುರಿತ ಸಂಸದೀಯ ಸಮಿತಿ ಅಧ್ಯಕ್ಷರಾಗಿದ್ದಾರೆ. ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಿಬಿಎಸ್‌ಇಯ ಒಎಸ್‌ಎಂ ವ್ಯವಸ್ಥೆಯ ಲೋಪಗಳ ತನಿಖೆಯ ಭಾಗವಾಗಿ ಎನ್‌ಟಿಎ, ಸಿಬಿಎಸ್‌ಇಯ ಕೆಲ ಅಧಿಕಾರಿಗಳನ್ನು ವಿಚಾರಣೆಗೆ ಸಮಿತಿ ಕರೆಸಿತ್ತು.
ಒಎಸ್‌ಎಂ ವ್ಯವಸ್ಥೆ ಹಾಗೂ ನೀಟ್ ಪರೀಕ್ಷಾ ಸ್ವರೂಪ ಕುರಿತು ಲಿಖಿತ ವಿವರಣೆ ಸಲ್ಲಿಸುವಂತೆ ಸಮಿತಿ ಈ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದೆ. ಸಿಬಿಐ ತನಿಖೆ ಹೊರತುಪಡಿಸಿ, ನೀಟ್ ಯುಜಿ 2024ರ ಪರೀಕ್ಷಾ ಅವ್ಯವಹಾರ ಕುರಿತಂತೆ ಎನ್‌ಟಿಎ ಸತನಿಖೆ ನಡೆಸಿದೆಯೇ ಎಂದೂ ಪ್ರಶ್ನಿಸಿದೆ.
ಕಳೆದ ಮೂರು ವರ್ಷಗಳ ಅವಧಿಯ ಸಿಬ್ಬಂದಿ ಸಾಮರ್ಥ್ಯ, 2022ರ ನಂತರ ಆಗಿರುವ ನೇಮಕಾತಿ ವಿವರ, ಕಳೆದ ಮೂರು ವರ್ಷಗಳಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿರುವ ವಾರ್ಷಿಕ ವರದಿಗಳು, ರಾಧಾಕೃಷ್ಣನ್ ಸಮಿತಿ ವರದಿಯ 101 ಶಿಫಾರಸುಗಳು ಹಾಗೂ ಅವುಗಳ ಕುರಿತು ಎನ್‌ಟಿಎ ಕೈಗೊಂಡಿರುವ ಕ್ರಮಗಳ ಬಗ್ಗೆ ಲಿಖಿತ ವರದಿ ಸಲ್ಲಿಸಬೇಕು ಎಂದು ಸಮಿತಿ ಸೂಚಿಸಿದೆ.
ಸುಗಮ ಮತ್ತು ಪಾರದರ್ಶಕ ಕ್ರಮದಲ್ಲಿ ಪರೀಕ್ಷೆಗಳನ್ನು ನಡೆಸುವ ಕುರಿತು ಅಗತ್ಯ ಸಲಹೆ, ಸುಧಾರಣಾ ಕ್ರಮಗಳ ಬಗ್ಗೆ ಸಲಹೆ ನೀಡಲು ಇಸ್ರೊ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ಜೂನ್ 2024ರಲ್ಲಿ ರಚಿಸಿತ್ತು.
ಸಂಸದೀಯ ಸಮಿತಿ ಕೇಳಿರುವ ವಿವರಗಳನ್ನು ಸಲ್ಲಿಸಲು ಸಿಬಿಎಸ್‌ಇಗೆ ಜೂನ್ 8, ಎನ್‌ಟಿಎಗೆ ಜೂನ್ 10ರ ಗಡುವು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಒಎಸ್‌ಎಂ ವ್ಯವಸ್ಥೆ ಅಳವಡಿಸುವ ಮೊದಲು ವಿವಿಧ ಪ್ರಸ್ತಾವಗಳು ಹಾಗೂ 'ಕೋಎಂಪ್ಟ್' ವ್ಯವಸ್ಥೆಯನ್ನು ಪೂರ್ವಭಾವಿಯಾಗಿ ಪರಿಶೀಲಿಸಲಾಗಿತ್ತೆ ಎಂದು ಸಂಸದೀಯ ಸಮಿತಿಯು ಸಿಬಿಎಸ್‌ಇ ಸಂಸ್ಥೆಗೆ ಪ್ರಶ್ನಿಸಿದೆ.
ಕೋಎಂಪ್ಟ್ ಎಜುಟೆಕ್ ಸಂಸ್ಥೆ ಮತ್ತು ಅದರ ನಿರ್ದೇಶಕರು ಈ ಮೊದಲು ಗ್ಲೋಬರೆನಾ ಟೆಕ್ನಾಲಜೀಸ್ ಸಂಸ್ಥೆಯ ಜೊತೆಗೆ ಗುರುತಿಸಿಕೊಂಡಿದ್ದರು ಎಂಬುದರ ಮಾಹಿತಿ ಸಿಬಿಎಸ್‌ಇಗೆ ಇತ್ತೆ ಎಂದು ಸಮಿತಿ ಪ್ರಶ್ನಿಸಿದೆ. ಗ್ಲೋಬರೆನಾ ಟೆಕ್ನಾಲಜೀಸ್ ಸಂಸ್ಥೆಯು ಹಿಂದೆ 2019ರಲ್ಲಿ ತೆಲಂಗಾಣ ಇಂಟರ್ ಮೀಡಿಯೇಟ್ ಪರೀಕ್ಷೆ ವ್ಯವಸ್ಥೆಯಲ್ಲಿ ಲೋಪ ಎಸಗಿದ್ದು ತನಿಖೆಯಲ್ಲಿ ಗೊತ್ತಾಗಿತ್ತು.
ಸಿಬಿಎಸ್‌ಇ ಲೋಗೊ
ಸಿಬಿಎಸ್‌ಇಗೆ ಸಮಿತಿಯ ಪ್ರಶ್ನೆಗಳು
* ಒಎಸ್‌ಎಂ ವ್ಯವಸ್ಥೆ ಗುತ್ತಿಗೆಗೆ ಬಿಡ್ ಮಾಡುವ ಕಂಪನಿಗಳ ವಾರ್ಷಿಕ ಕನಿಷ್ಠ ವಹಿವಾಟು ₹50 ಕೋಟಿ ಇರಬೇಕು ಎಂದು ನಿರ್ದಿಷ್ಟವಾಗಿ ನಿಗದಿಪಡಿಸಲು ಕಾರಣವೇನು?
* ತನ್ನದೇ ಡಾಟಾ ಸೆಂಟರ್ ಹೊಂದಿರುವ ಗುತ್ತಿಗೆದಾರ ಸಂಸ್ಥೆಗಳಿಗೆ ಅನುಕೂಲ ಆಗುವಂತೆ ಆರ್‌ಎಫ್‌ಪಿ (ಪ್ರಸ್ತಾವಗಳಿಗಾಗಿ ಮನವಿ) ನಿಯಮಗಳನ್ನು ಬದಲಿಸಲು ಕಾರಣವೇನು?
* ರೋಬೊಟಿಕ್ ಸ್ಕ್ಯಾನರ್ ಮಾಡಬೇಕು ಎಂಬ ನಿಯಮ ಸಡಿಲಿಸಿದ್ದು ಏಕೆ? ಉತ್ತರ ಪತ್ರಿಕೆಗಳ ಹೊಲಿಗೆ ಕಟ್ಟು ತೆಗೆಯದೇ ಸ್ಕ್ಯಾನ್ ಪ್ರಕ್ರಿಯೆ ನಡೆಸಬೇಕು ಎಂಬ ನಿಯಮ ಕೈಬಿಟ್ಟಿದ್ದು ಏಕೆ?
* ಸ್ಕ್ಯಾನಿಂಗ್‌ನ ಗುಣಮಟ್ಟ ಕನಿಷ್ಠ ಡಿಪಿಐ 300 ಇರಬೇಕು ಎಂಬುದನ್ನು ಡಿಪಿಐ 200ಕ್ಕೆ ಎಂದು ಬದಲಿಸಿದ್ದು ಏಕೆ?
* ದೊಡ್ಡ ಪ್ರಮಾಣದ ಯೋಜನೆಗಳ ನಿರ್ವಹಣೆ (ಕನಿಷ್ಠ 5 ಲಕ್ಷ ವಿದ್ಯಾರ್ಥಿಗಳು) ಅನುಭವ ಇರಬೇಕು ಎಂಬ ನಿಯಮ ಸಡಿಲಿಸಿದ್ದು ಏಕೆ?
* ಒಎಸ್‌ಎಂ ವ್ಯವಸ್ಥೆ ಬಗ್ಗೆ ವೀಕ್ಷಕರ ವರದಿ ಆಧರಿಸಿ ಸಿಬಿಎಸ್‌ಇ ಕ್ರಮ ಜರುಗಿಸಿದೆಯೇ ಅಥವಾ ಈ ಸಂಬಂಧ ಶಿಕ್ಷಣ ಸಚಿವಾಲಯದ ಅಧಿಕಾರಿಗಳ ಜೊತೆಗೆ ಚರ್ಚಿಸಿದೆಯೇ?

