HEALTH TIPS

ವೆನೆಜುವೆಲಾ ಅಧ್ಯಕ್ಷೆ ಭಾರತಕ್ಕೆ: ONGCಗೆ ಪಾವತಿಸಬೇಕಿದೆ ₹57 ಸಾವಿರ ಕೋಟಿ ಬಾಕಿ

 ನವದೆಹಲಿ: ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ ಅವರು ಜೂನ್‌ 3ರಂದು ಭಾರತಕ್ಕೆ ಆಗಮಿಸಿದ್ದಾರೆ. ಇಂಧನ, ವ್ಯಾಪಾರ ಮತ್ತು ಹೂಡಿಕೆ ಕಾರ್ಯತಂತ್ರದ ಐದು ದಿನಗಳ (ಜೂನ್‌ 3 -7) ಪ್ರವಾಸದ ಅವಧಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ಉನ್ನತ ಮಟ್ಟದ ಹಲವು ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.‌


ಆ ದೇಶದಲ್ಲಿ ಭಾರತದ ರಾಯಭಾರಿಯಾಗಿದ್ದ ದೀಪಕ್‌ ಭೋಜ್ವಾನಿ ಅವರು ರಾಡ್ರಿಗಸ್‌ ಭೇಟಿ ಹಿನ್ನೆಲೆಯಲ್ಲಿ ಎಎನ್‌ಐ ಜೊತೆ ಮಾತನಾಡಿದ್ದಾರೆ. ಭಾರತದ ಇಂಧನ ಭದ್ರತೆಯ ಪ್ರಮುಖ ಪಾಲುದಾರ ರಾಷ್ಟ್ರವಾಗಿ ವೆನುಜುವೆಲಾ ಹೊರಹೊಮ್ಮುವ ಸಾಧ್ಯತೆ ಇದೆ ಎಂದಿದ್ದಾರೆ.

ವೆನೆಜುವೆಲಾದಿಂದ ಕಚ್ಚಾ ತೈಲ ಆಮದು ಮುಂದುವರಿಸಲು ಭಾರತ ಉತ್ಸುಕವಾಗಿದೆ. ಅದರಲ್ಲೂ ದೇಶದ ಸಂಸ್ಕರಣಾ ಕಂಪನಿಗಳು, ವೆನೆಜುವೆಲಾದ ಗಡಸು ರೂಪದ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಹೆಚ್ಚಿಕೊಂಡಿವೆ. ಇಂಧನದ ವಿಚಾರದಲ್ಲಿ ವೆನೆಜುವೆಲಾ ಭಾರತದ ಮುಖ್ಯ ಪಾಲುದಾರ ರಾಷ್ಟ್ರವಾಗಿರಲಿಲ್ಲ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ಒಎನ್‌ಜಿಸಿಗೆ ₹ 57 ಸಾವಿರ ಕೋಟಿ ಬಾಕಿ

ಉಭಯ ದೇಶಗಳ ನಡುವಣ ಕಚ್ಚಾ ತೈಲ ಕಾರ್ಯತಂತ್ರದ ಮಹತ್ವದ ಕುರಿತು ಮಾತನಾಡಿರುವ ದೀಪಕ್‌, ಭೌಗೋಳಿಕವಾಗಿ ಎರಡೂ ದೇಶಗಳ ನಡುವಣ ಅಂತರ ದೊಡ್ಡದಾಗಿದ್ದರೂ, ವೆನೆಜುವೆಲಾ ಕಚ್ಚಾ ತೈಲದ ಮೇಲೆ ನೀಡುವ ರಿಯಾಯಿತಿ ಗಣನೀಯವಾದದ್ದು. ಹಾಗಾಗಿಯೇ ಭಾರತದ ಪ್ರಮುಖ ಸಂಸ್ಕರಣಾ ಕಂಪನಿಗಳನ್ನು ವೆನೆಜುವೆಲಾ ಆಕರ್ಷಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಮುಖ್ಯವಾಗಿ, ಸಂಸ್ಕರಣಾ ಕಂಪನಿಗಳಿಗೆ ಯೋಗ್ಯ ತಾಣವಾಗಿರುವ ವೆನೆಜುವೆಲಾದಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಅಪಾರ ಪ್ರಮಾಣದಲ್ಲಿ ಹೂಡಿಕೆ ಮಾಡಿದೆ. ಆ ದೇಶವು ಸುಮಾರು ₹ 57 ಸಾವಿರ ಕೋಟಿಯನ್ನು ಒಎನ್‌ಜಿಸಿಗೆ ಪಾವತಿಸುವುದು ಬಾಕಿ ಇದೆ. ಅದನ್ನು ಸಂಪೂರ್ಣ ಚುಕ್ತಾ ಮಾಡಿದರೆ, ಒಎನ್‌ಜಿಸಿ ಸೇರಿದಂತೆ ಇನ್ನಷ್ಟು ಕಂಪನಿಗಳು ತೈಲ ಪರಿಶೋಧನಾ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ. ಇಂಧನ ಭದ್ರತೆಯ ವಿಚಾರದಲ್ಲಿ ಭಾರತದ ಪಾಲಿಗೆ ವೆನೆಜುವೆಲಾ ಪ್ರಮುಖ ಪಾಲುದಾರ ರಾಷ್ಟ್ರವಾಗುವುದೇ? ಬಾಕಿ ಪಾವತಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದೇ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.

ಇಂಧನ ಕ್ಷೇತ್ರದಲ್ಲಿ ಭಾರತೀಯ ಕಂಪನಿಗಳ ಹೂಡಿಕೆ ಪುನಶ್ಚೇತನಗೊಳಿಸುವುದು ತೈಲ ಪರಿಶೋಧನೆ, ಉತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮಾರ್ಗ ಸುಗಮಗೊಳಿಸುತ್ತದೆ. ಇಂಧನ ಮಾತ್ರವಲ್ಲದೆ, ಖನಿಜ ಸಂಬಂಧಿತ ವ್ಯವಹಾರಗಳನ್ನೂ ವಿಸ್ತರಿಸುತ್ತದೆ ಎಂದು ದೀಪಕ್‌ ಅಭಿಪ್ರಾಯಪಟ್ಟಿದ್ದಾರೆ.

ವೆನೆಜುವೆಲಾ ನೈಸರ್ಗಿಕವಾಗಿ ಸಂಪದ್ಭರಿತವಾದ ದೇಶ ಎಂದು ತಿಳಿಸಿರುವ ದೀಪಕ್‌, ‌ಅಲ್ಲಿನ ಕಬ್ಬಿಣದ ಅದಿರು, ಬಾಕ್ಸೈಟ್ ಮತ್ತು ಚಿನ್ನದ ಗಣಿಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಭಾರತೀಯ ಕಂಪನಿಗಳು ಬಹಳ ಹಿಂದಿನಿಂದಲೂ ಆಸಕ್ತಿ ತೋರಿವೆ. ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಆದರೆ, ಆಡಳಿತಾತ್ಮಕ ಕಾರಣಗಳಿಂದಾಗಿ ಅಲ್ಲಿನ ವ್ಯವಹಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.

'ಹಂಗಾಮಿ ಅಧ್ಯಕ್ಷೆ ರಾಡ್ರಿಗಸ್‌ ಅವರು ಹೊಸ ಖನಿಜ ಕಾನೂನು ಪರಿಚಯಿಸಿದ್ದಾರೆ. ಅದು ಹೂಡಿಕೆದಾರರಿಗೆ ಪೂರಕವಾಗಿರಬಹುದು. ಆದಾಗ್ಯೂ, ವೆನೆಜುವೆಲಾದ ಬಳಿ ವ್ಯಾವಹಾರಿಕವಾಗಿ ಔಷಧ ಉದ್ಯಮ, ಇತರ ವಿಚಾರಗಳಿಗೆ ಸಂಬಂಧಿಸಿದಂತೆ ತನ್ನದೇ ನಿರೀಕ್ಷೆಗಳು ಇರುವ ಸಾಧ್ಯತೆ ಇದೆ. ಆ ವಿಚಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದಕ್ಕಾದರೂ ಆ ದೇಶಕ್ಕೆ ಅಪಾರ ಹಣದ ಅಗತ್ಯವಿದೆ' ಎಂದು ತಿಳಿಸಿದ್ದಾರೆ.

ಭಾರತ-ವೆನೆಜುವೆಲಾ ಸಂಬಂಧ

ರಾಡ್ರಿಗಸ್ ಅವರು ಹಂಗಾಮಿ ಅಧ್ಯಕ್ಷರಾದ ನಂತರ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಾದರೂ, ಅದಕ್ಕೂ ಮೊದಲು ಐದು ಸಲ ಭಾರತಕ್ಕೆ ಬಂದಿದ್ದರು ಎಂದು ದೀಪಕ್‌ ತಿಳಿಸಿದ್ದಾರೆ.

ಇಂಧನ ವ್ಯವಹಾರ ಅದರಲ್ಲೂ, ಕಚ್ಚಾ ತೈಲ ವ್ಯಾಪಾರ ಮತ್ತು ಇಂಧನ ಹೂಡಿಕೆಗಳಲ್ಲಿ ಉಭಯ ದೇಶಗಳ ನಡುವೆ ಹಲವು ದಶಕಗಳಿಂದ ವ್ಯವಹಾರವಿದೆ. ಆದಾಗ್ಯೂ, ವೆನೆಜುವೆಲಾ ಆಡಳಿತದ ಮೇಲಿನ ಅಮೆರಿಕದ ಹಸ್ತಕ್ಷೇಪ ಸುಗಮ ವ್ಯವಹಾರಕ್ಕೆ ತೊಡಕಾಗಿವೆ ಎಂದು ವಿವರಿಸಿದ್ದಾರೆ.

ಉಭಯ ದೇಶಗಳ ನಡುವೆ ದೀರ್ಘಾವಧಿಯ ಒಪ್ಪಂದಗಳು ಜಾರಿಯಲ್ಲಿವೆ. ಆದರೆ, ಅವುಗಳನ್ನು ಕೆಲ ವರ್ಷಗಳ ಹಿಂದೆಯೇ ಅಮೆರಿಕ ಅಮಾನತು ಮಾಡಿ, ಏಕಪಕ್ಷೀಯ ನಿರ್ಬಂಧ ಹೇರಿದೆ. ಅಂತರರಾಷ್ಟ್ರೀಯ ವ್ಯವಹಾರಕ್ಕೆ ಡಾಲರ್ ವಿನಿಯಮ ಅಗತ್ಯವಿರುವುದರಿಂದ, ಭಾರತದ ಕಂಪನಿಗಳು ಅಮೆರಿಕದ ನಿರ್ಬಂಧಗಳನ್ನು ಪಾಲಿಸಲೇಬೇಕಾಗಿದೆ.

ಇಂದು (ಜೂನ್‌ 4) ಜೈಶಂಕರ್‌ ಅವರೊಂದಿಗೆ ನಿಗದಿಯಾಗಿರುವ ಸಭೆಯೊಂದಿಗೆ ರಾಡ್ರಿಗಸ್‌ ಅವರ ಯೋಜಿತ ಕಾರ್ಯಕ್ರಮಗಳು ಆರಂಭವಾಗಲಿವೆ. ನಂತರ, ರಾಷ್ಟ್ರ ರಾಜಧಾನಿಯಲ್ಲಿರುವ ಹೈದರಾಬಾದ್ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಯಲಿದೆ. ಉಭಯ ದೇಶಗಳ ಮಾತುಕತೆ ಎಷ್ಟರ ಮಟ್ಟಿಗೆ ಫಲಪ್ರದವಾಗಲಿವೆ ಎಂಬುದು ಇನ್ನಷ್ಟೇ ತಿಳಿಯಲಿದೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries