HEALTH TIPS

Operation Amistad: ವೆನೆಜುವೆಲಾಗೆ ಮಾನವೀಯ ನೆರವು ನೀಡಿದ ಭಾರತ

ನವದೆಹಲಿ: 'ಆಪರೇಷನ್ ಅಮಿಸ್ಟಾಡ್' ಅಡಿಯಲ್ಲಿ ಭೂಕಂಪ ಪೀಡಿತ ವೆನೆಜುವೆಲಾಗೆ ಕಳುಹಿಸಲಾಗಿದ್ದ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಉಪಕರಣಗಳು ಆ ದೇಶಕ್ಕೆ ತಲುಪಿವೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. 

'ಭಾರತದ ನೆರವು ವೆನೆಜುವೆಲಾವನ್ನು ತಲುಪಿದೆ.

ನಮ್ಮ ಪರಿಹಾರ ಸಾಮಗ್ರಿಗಳು, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಅಲ್ಲಿ (ವೆನೆಜುವೆಲಾ) ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗೆ ಮತ್ತಷ್ಟು ಬಲ ತುಂಬಲಿವೆ ಎಂಬ ವಿಶ್ವಾಸ ನನಗಿದೆ' ಎಂದು ಜೈಶಂಕರ್ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಆಪರೇಷನ್ ಅಮಿಸ್ಟಾಡ್' ಕುರಿತು ಭಾರತೀಯ ವಾಯುಪಡೆಯು (ಐಎಎಫ್) 'ಎಕ್ಸ್‌'ನಲ್ಲಿ ಇತ್ತೀಚಿನ ಮಾಹಿತಿಯನ್ನು ಹಂಚಿಕೊಂಡಿದೆ.

'ಭಾರತೀಯ ವಾಯುಪಡೆಯ ಎರಡು ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳು ದೆಹಲಿಯಿಂದ ಕರಾಕಸ್‌ವರೆಗೆ 14,000 ಕಿಲೋಮೀಟರ್‌ಗಳಿಗಿಂತಲೂ ಹೆಚ್ಚು ವೈಮಾನಿಕ ದೂರವನ್ನು ಕ್ರಮಿಸಿ, 23 ಗಂಟೆಗಳ ಸತತ ಹಾರಾಟದ ಬಳಿಕ ವೆನೆಜುವೆಲಾವನ್ನು ತಲುಪಿವೆ' ಎಂದು ವಾಯುಪಡೆ ತಿಳಿಸಿದೆ.

'ಐಎಎಫ್ ವಿಮಾನಗಳು ಕರಾಕಸ್‌ನ ಮೈಕೆಟಿಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, 66 ಟನ್ ಮಾನವೀಯ ನೆರವನ್ನು ಹೊತ್ತು ತಂದಿವೆ. ಇದರಲ್ಲಿ 35 ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿಗಳು, ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಎರಡು 'ಭೀಷ್ಮ ಕ್ಯೂಬ್ಸ್' (ಸಂಚಾರಿ ತುರ್ತು ವೈದ್ಯಕೀಯ ಘಟಕಗಳು) ಸೇರಿದಂತೆ ಇತರೆ ಉಪಕರಣಗಳು ಸೇರಿವೆ' ಎಂದು ಐಎಎಫ್ ತಿಳಿಸಿದೆ.

ಭೂಕಂಪ ಪೀಡಿತ ವೆನೆಜುವೆಲಾಕ್ಕೆ ಮಾನವೀಯ ನೆರವು ನೀಡಲು ಭಾರತವು ಆರಂಭಿಸಿರುವ 'ಆಪರೇಷನ್ ಅಮಿಸ್ಟಾಡ್' ಅಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು 41 ಸದಸ್ಯರ ರಕ್ಷಣಾ ತಂಡವನ್ನು ಹೊತ್ತ ಎರಡು ಐಎಎಫ್ ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳು ಶುಕ್ರವಾರದಂದು ಹೊರಟಿದ್ದವು.

ಈ ಕಷ್ಟದ ಸಮಯದಲ್ಲಿ ಭಾರತವು ವೆನೆಜುವೆಲಾ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ಬೆಂಬಲವಾಗಿ ನಿಲ್ಲುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತ್ತು.

ವೆನೆಜುವೆಲಾದಲ್ಲಿ ಜೂನ್ 24ರಂದು (ಬುಧವಾರ) 7.2ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಾದ ಕೆಲ ಸೆಕೆಂಡುಗಳ ಅಂತರದಲ್ಲಿಯೇ ಮತ್ತೆ 7.5ರಷ್ಟು ತೀವ್ರತೆಯ ಭಾರಿ ಭೂಕಂಪ ಸಂಭವಿಸಿತ್ತು. ಇದರಿಂದ ದೇಶದ ವಿವಿಧೆಡೆ ಕಟ್ಟಡಗಳು ಕುಸಿದಿದ್ದು, ಅವಶೇಷಗಳ ಅಡಿ ನೂರಾರು ಜನ ಸಿಲುಕಿದ್ದರು.

ವೆನೆಜುವೆಲಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪಗಳಿಂದ ಮೃತಪಟ್ಟವರ ಸಂಖ್ಯೆ ಶನಿವಾರದ ವೇಳೆಗೆ 1,430ಕ್ಕೆ ಏರಿದೆ. ಸಾವಿರಾರು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿರುವುದರಿಂದ, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries