ವಿಬಿ ಜಿ ರಾಮ್ ಜಿ ಕಾಯ್ದೆ (ವಿಕಸಿತ್ ಭಾರತ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಕಾಯ್ದೆ) ಅಡಿಯಲ್ಲಿ ಕೇಂದ್ರ ಗಾಮೀಣಾಭಿವೃದ್ಧಿ ಸಚಿವಾಲಯವು ಲಾಂಛನ (ಲೋಗೊ) ವಿನ್ಯಾಸಗೊಳಿಸುವ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 7,233ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಆ ಪೈಕಿ ರಾಜ್ಯದ ರಾಮ್ ಪ್ರಸಾದ್.ಕೆ ವಿನ್ಯಾಸಗೊಳಿಸಿದ ಲೋಗೊ ಪ್ರಥಮ ಸ್ಥಾನ ಪಡೆದುಕೊಂಡು ಆಯ್ಕೆಯಾಗಿದೆ.
ಮಾತ್ರವಲ್ಲದೆ, ರಾಮ್ ಪ್ರಸಾದ್ ಅವರಿಗೆ ₹50,000 ಬಹುಮಾನ ನೀಡಲಾಗಿದೆ. ವಿಬಿ ಜಿರಾಮ್‌ಜಿ ಯೋಜನೆಗೆ ಲೋಗೊವನ್ನು ವಿನ್ಯಾಸಗೊಳಿಸಿ ಆಯ್ಕೆಯಾದ ಬಳಿಕ 'ಪ್ರಜಾವಾಣಿ ಡಿಜಿಟಲ್'ನೊಂದಿಗೆ ರಾಮ್ ಪ್ರಸಾದ್ ಮಾತನಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಚಿನ್ನದ ವ್ಯಾಪಾರ ಮಾಡುವ ಕುಟುಂಬದಲ್ಲಿ ಜನಿಸಿದ ರಾಮ್ ಪ್ರಸಾದ್.ಕೆ ಅವರಿಗೀಗ 25 ವರ್ಷ. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಶಿಕ್ಷಣದ ಜೊತೆಗೆ ಚಿತ್ರ ಬಿಡಿಸುವ ಕಲೆಯನ್ನು ರೂಢಿಸಿಕೊಳ್ಳಲು ಆರಂಭಿಸಿದರು. ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡರು. ಬಳಿಕ ಮಂಗಳೂರಿನ ಮಹಾಲಾಸ ಕಾಲೇಜ್ ಆಫ್ ವಿಶುವಲ್ ಆರ್ಟ್ಸ್ (ಬಿವಿಎ)ನಲ್ಲಿ ಅನ್ವಯಿಕ ಕಲೆ ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಂಡು 4 ವರ್ಷದ ಪದವಿ ಪೂರೈಸಿದ್ದಾರೆ. ಪ್ರಸ್ತುತ ಫ್ರೀಲ್ಯಾನ್ಸ್ ಕಲಾವಿದನಾಗಿ ಕೆಲಸ ಮಾಡುತ್ತಿದ್ದಾರೆ.
ಚಿತ್ರಕಲೆಯಲ್ಲಿ ಆಸಕ್ತಿ ಮೂಡಿದ್ದು ಹೇಗೆ?
ಬಾಲ್ಯದಿಂದಲೇ ಚಿತ್ರ ಬಿಡಿಸುವುದು, ಈಗಾಗಲೇ ಬಿಡಿಸಿರುವ ಚಿತ್ರಗಳನ್ನು ನೋಡಿ, ಅದನ್ನು ಹೇಗೆ ಬಿಡಿಸಿದ್ದಾರೆ? ನಾನು ಏಕೆ ಬಿಡಿಸಬಾರದು ಎಂಬ ಕುತೂಹಲವು ಚಿತ್ರಕಲೆಯಲ್ಲಿ ತೊಡಗಿಕೊಳ್ಳಲು ಮೊದಲ ಪ್ರೇರಣೆಯಾಗಿತ್ತು. ಕೆಲವು ಚಿತ್ರಗಳನ್ನು ನೋಡಿದರೆ, ಅದನ್ನು ಹೇಗೆ ಬಿಡಿಸುತ್ತಾರೆ ಎಂಬ ಕುತೂಹಲ ಮೂಡುತ್ತಿತ್ತು. ಆಗ ನಾನೂ ಚಿತ್ರ ಬಿಡಿಸಬೇಕೆಂದು ಪ್ರಯತ್ನ ಪಡುತ್ತಿದ್ದೆ. ಆದರೆ ಸಾಧ್ಯವಾಗುತ್ತಿರಲಿಲ್ಲ. ಚಿತ್ರವನ್ನು ಹೇಗೆ ಬಿಡಿಸುವುದು? ಎಂಬ ಕುತೂಹಲವೇ ನನ್ನನ್ನು ಈ ಮಟ್ಟಕ್ಕೆ ಕರೆತಂದಿದ್ದು.
ಕರೆತಂದಿದ್ದು.

ಲೋಗೊ ವಿನ್ಯಾಸ (ಡಿಸೈನಿಂಗ್) ಕಲಿತದ್ದು ಹೇಗೆ? ವೃತ್ತಿಪರರಿಂದ ತರಬೇತಿ ಪಡೆದುಕೊಂಡಿದ್ದೀರಾ ಅಥವಾ ಶಾಲೆಯಲ್ಲಿ ಮಾತ್ರ ಕಲಿತು, ಹೆಚ್ಚಿನ ಭಾಗವನ್ನು ಸ್ವಂತ ಕಲಿತಿದ್ದ?
ಪಿಯುಸಿ ಮುಗಿಸಿದ ಬಳಿಕ ಆಸಕ್ತಿಯ ವಿಷಯ ಬಿವಿಎಯನ್ನು ಆಯ್ಕೆ ಮಾಡಿಕೊಂಡೆ. ಕಾಲೇಜಿನಲ್ಲಿ ಚಿತ್ರಗಳನ್ನು ಬಿಡಿಸುವ ಕೌಶಲದ ಜೊತೆಗೆ ಅಲ್ಲಿನ ಶಿಕ್ಷಕರಿಂದ ಅವರ ವೃತ್ತಿ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಿದ್ದೆ. ಕಾಲೇಜಿನಲ್ಲಿ ಚಿತ್ರಕಲೆಯ ವಿಧಗಳು, ಮೈಂಡ್ ಮ್ಯಾಪಿಂಗ್ ಮಾಡುವ ಕೌಶಲ ಕಲಿತೆ. ಅದಕ್ಕಿಂತ ಹೆಚ್ಚಿನದ್ದನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್‌ನಲ್ಲಿ ಕೆಲವು ವೃತ್ತಿಪರ ಕಲಾವಿದರು ಮಾಡುವ ವಿಡಿಯೊಗಳನ್ನು ನೋಡಿ ಕಲಿತೆ.
ವಿಬಿ-ಜಿ ರಾಮ್ ಜಿ: ಜುಲೈ 1ರಿಂದ ಜಾರಿ: ಸಚಿವ ಈಶ್ವರ ಖಂಡ್ರೆ ಮಾಹಿತಿ
ರಾಷ್ಟ್ರಮಟ್ಟದ ಯೋಜನೆಯೊಂದಕ್ಕೆ ಲೋಗೊ ಮಾಡಬಹುದು ಎಂಬ ಆತ್ಮವಿಶ್ವಾಸ ಮೂಡಿದ್ದು ಹೇಗೆ?
ಸಿಕ್ಕ ಅವಕಾಶಗಳನ್ನು ಎಂದಿಗೂ ಕಳೆದುಕೊಳ್ಳಬಾರದು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಸೋಲು ಮತ್ತು ಗೆಲುವು ಸಾಮಾನ್ಯ, ಪ್ರಯತ್ನ ಪಡುವುದಕ್ಕೆ ಏನು? ಹೀಗಾಗಿ ಒಮ್ಮೆ ಪ್ರಯತ್ನ ಮಾಡೋಣ ಎಂದುಕೊಂಡು ಲೋಗೊ ವಿನ್ಯಾಸ ಮಾಡಲು ನಿರ್ಧರಿಸಿದೆ. ಈ ಹಿಂದೆ ಸರ್ಕಾರಕ್ಕೆ ಸೇರಿದ ಕೆಲವು ಲೋಗೊಗಳ ವಿನ್ಯಾಸ ಮಾಡಿದ್ದೆ. ಅವು ಆಯ್ಕೆಯಾಗುವ ಭರವಸೆ ಇತ್ತು. ಆದರೆ ಆಯ್ಕೆಯಾಗಲಿಲ್ಲ. ಅವು ಆಯ್ಕೆಯಾಗಲಿಲ್ಲ ಎಂಬ ಬೇಸರ ನನಗಿಲ್ಲ. ಏಕೆಂದರೆ, ಅವುಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ.
ಲೋಗೊವನ್ನು ವಿನ್ಯಾಸ ಮಾಡಲು ಎಷ್ಟು ದಿನ ತೆಗೆದುಕೊಂಡಿರಿ, ಹೇಗೆಲ್ಲಾ ವಿನ್ಯಾಸ ಮಾಡಿದ್ದೀರಿ?
ಮೊದಲಿಗೆ ಲೋಗೊ ವಿನ್ಯಾಸದ ಬಗ್ಗೆ ಹೇಳಿದರೆ ನಿಮಗೆ ಕುತೂಹಲ ಮೂಡಬಹುದು. ಲೋಗೊವನ್ನು ವಿನ್ಯಾಸ ಮಾಡಲು 5 ದಿನ ಸಮಯ ತೆಗೆದುಕೊಂಡೆ. ನನಗೆ ಈ ಸ್ಪರ್ಧೆಯ ಬಗ್ಗೆ ತಿಳಿದಾಗ, ಕೊನೆಯ ದಿನಾಂಕಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಇತ್ತು. ಮೊದಲಿಗೆ ಲೋಗೊ ಹೇಗಿರಬೇಕೆಂಬ ನಿಯಮಕ್ಕೆ ಅನುಗುಣವಾಗಿ ಮೈಂಡ್ ಮ್ಯಾಪಿಂಗ್ ಮಾಡಿದೆ. ಅದರಂತೆ ಮೊದಲು 10 ರಿಂದ 15 ಲೋಗೊಗಳ ವಿನ್ಯಾಸ ಮಾಡಿದೆ. ಆದರೆ ವಿನ್ಯಾಸ ಮಾಡಿದ ಅಷ್ಟು ಲೋಗೊಗಳು ಕೊನೆಯ ದಿನಾಂಕದವರೆಗೆ ಸಮಾಧಾನ ನೀಡಲಿಲ್ಲ. ಜೊತೆಗೆ ಕೊನೆಯ ದಿನಾಂಕ ಕೂಡ ಮುಕ್ತಾಯವಾಗಿತ್ತು.
ಅದೃಷ್ಟವಶಾತ್ ಅಂತಿಮ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿತ್ತು. ಆಗ ಪುನಃ ಲೋಗೊ ವಿನ್ಯಾಸ ಆರಂಭಿಸಿದೆ. ವಿಭಿನ್ನ ಮತ್ತು ಸರಳವಾಗಿ ಕಾಣುವಂತಹ ಲೋಗೊ ವಿನ್ಯಾಸ ಮಾಡಿದೆ. ಲೋಗೊ ಸಲ್ಲಿಸಲು ಕೊನೆಯ 15 ನಿಮಿಷ ಬಾಕಿ ಇರುವಾಗ ಪೂರಕ ಮಾಹಿತಿಯೊಂದಿಗೆ ಲೋಗೊ ಸಲ್ಲಿಕೆ ಮಾಡಿದೆ.
ಲೋಗೊದ ಹಿಂದೆ ಇರುವ ಕಲ್ಪನೆ ಏನು? ಹೇಗೆ ವಿನ್ಯಾಸ ಮಾಡಿದ್ದೀರಿ?
ಲೋಗೊ ಹೇಗಿರಬೇಕು ಎಂದು ಇಲಾಖೆ ಮೊದಲೇ ನಿಯಮಾವಳಿಗಳನ್ನು ತಿಳಿಸಿತ್ತು. ಅದಕ್ಕೆ ಅನುಗುಣವಾಗಿ ನಿಯಮಗಳನ್ನು ಮೊದಲು ಸರಿಯಾಗಿ ಅರ್ಥ ಮಾಡಿಕೊಂಡೆ. ಬಳಿಕ ಯಾವ ಮಾದರಿಯ ಲೋಗೊ ವಿನ್ಯಾಸಗೊಳಿಸಬಹುದು ಎಂದು ಯೋಚಿಸಿ, ಹಲವು ಮಾದರಿ ಲೋಗೊ ತಯಾರಿಸಿದೆ. ಲೋಗೊ ಸರಳವಾಗಿ, ಉದ್ಯೋಗದ ಕಲ್ಪನೆಯೊಂದಿಗೆ ಹಾಗೂ ವಿಬಿ ಜಿ ರಾಮ್ ಜಿಯನ್ನು ಪ್ರತಿನಿಧಿಸುವಂತಿರಬೇಕಿತ್ತು. ಅದರಂತೆ ವಿನ್ಯಾಸ ಮಾಡಿದೆ. ಕೊನೆಗೂ ಲೋಗೊ ನಾನು ಅಂದುಕೊಂಡಂತೆಯೇ ಸಿದ್ಧವಾಯಿತು.
ನಿಮ್ಮ ಲೋಗೊ ಆಯ್ಕೆಯಾಗಲು ಅದರಲ್ಲಿ ಏನು ವಿಶೇಷ ಇತ್ತು ಎಂದು ನಿಮಗೆ ಅನ್ನಿಸುತ್ತದೆ?
ಅಷ್ಟು ಜನರು ಸಲ್ಲಿಸಿದ್ದ ಲೋಗೊದಲ್ಲಿ ನನ್ನ ಲೋಗೊ ಆಯ್ಕೆಯಾಗುತ್ತದೆ ಎಂಬ ಭರವಸೆ ಏನು ಇರಲಿಲ್ಲ. ಆದರೆ ನನಗೆ ಲೋಗೊ ಇಷ್ಟವಾಗಿತ್ತು. ಆ ಸಮಾಧಾನ ನನಗಿತ್ತು. ನನ್ನ ಲೋಗೊ ಆಯ್ಕೆಯಾಗಲು ಒಂದು 'ಸರಳತೆ' ಮತ್ತೊಂದು 'ವಿಶಿಷ್ಟ' ಕಾರಣವಿರಬಹುದು ಎಂದು ಭಾವಿಸುತ್ತೇನೆ. ಸರಳವಾದ ವಿನ್ಯಾಸ ಮಾಡಲು ಹೆಚ್ಚು ಸೃಜನಶೀಲತೆ ಬೇಕಾಗುತ್ತದೆ. ವಿವಿಧ ಬಣ್ಣ ಮತ್ತು ಪ್ರಾತಿನಿಧಿಕ ಆಕಾರ ಬಳಸಿಕೊಂಡು ಸಾಂದರ್ಭಿಕವಾಗಿರುವ ಲೋಗೊ ವಿನ್ಯಾಸ ಮಾಡಿದೆ.
ಚಿತ್ರಕಲೆಯ ಮೂಲ ತತ್ವವೇನು?
ಚಿತ್ರಕಲೆ ಎಂಬುದು ಕುತೂಹಲದ ವಿಷಯವಾಗಿದೆ. ಚಿತ್ರಕಲೆ ಅಥವಾ ವಿನ್ಯಾಸಕ್ಕೆ ವಿಶೇಷವಾದ ಕೌಶಲ ಬೇಕೇ ಬೇಕು. ಸಾಮಾನ್ಯರೂ ಚಿತ್ರವನ್ನು ಬಿಡಿಸಬಹುದು. ಆದರೆ ಅಭ್ಯಾಸದಲ್ಲಿ ನಿರಂತರತೆ ಬಹಳ ಮುಖ್ಯ. ಹುಟ್ಟಿನಿಂದ ಚಿತ್ರಕಲೆಯ ಮೇಲೆ ಆಸಕ್ತಿ ಇದ್ದರೆ, ಅಭ್ಯಾಸ ಮಾಡುವ ಮೂಲಕ ಕರಗತ ಮಾಡಿಕೊಳ್ಳಬಹುದು. ಜೊತೆಗೆ ನೈಪುಣ್ಯತೆಯು ಪ್ಲಸ್ ಪಾಯಿಂಟ್ ಆಗುತ್ತದೆ ಎಂಬುದು ನನ್ನ ಅನಿಕೆ.
ಇಂದು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕಾರಣದಿಂದ ಡಿಸೈನಿಂಗ್ ಸುಲಭವಾಗಿದೆ ಎಂಬ ವಾದವಿದೆ. ಕಲಾವಿದನಿಗೆ ಭವಿಷ್ಯ ಇದೆಯಾ?
ಎಐ, ಕಲಾವಿದನೊಬ್ಬನನ್ನು ಸಂಪೂರ್ಣವಾಗಿ ಮರುಪೂರಣ ಮಾಡುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅದು ಸಾಧ್ಯವೂ ಇಲ್ಲ. ವಿಷಯ ಮತ್ತು ವಿನ್ಯಾಸವನ್ನು ಇನ್ನಷ್ಟು ಉತ್ತಮ ಪಡಿಸುವ ಕೌಶಲ ಎಐಗೆ ಇದೆ. ಆದರೆ ಮಾನವನ ಆಸಕ್ತಿ, ಅಭಿರುಚಿಯ ಬಗ್ಗೆ ಅದಕ್ಕೆ ತಿಳಿದಿಲ್ಲ. ನಾವು ಹೇಳಿದಂತೆ ಕೆಲವು ಲೋಗೊಗಳ ವಿನ್ಯಾಸ ಮಾಡಿಕೊಡುತ್ತದೆ. ಆದರೆ ಮನುಷ್ಯನಿಗೆ ಹತ್ತಿರವಾಗುವ ರೀತಿಯ ವಿನ್ಯಾಸ ಮಾಡಲು ಸಾಧ್ಯವಿಲ್ಲ. ಎಐ ಸಂಶೋಧನೆ ಉತ್ತಮ ಟೂಲ್ ಆಗಿದೆ. ನಮ್ಮ ಡಿಸೈನಿಂಗ್‌ಗೆ ಬೇಕಾದ ವಿನ್ಯಾಸ ಪಡೆಯಲು ಸಹಕಾರಿ. ಆದರೆ ಎಐಯನ್ನು ಮಿತಿಯಾಗಿ ಇಡುವುದು ಅನಿವಾರ್ಯ.

