ಹಿಮಾಲಯದ ತಪ್ಪಲಿನಲ್ಲಿ ಬರೋಬ್ಬರಿ 158 ವರ್ಷಗಳ ಹಿಂದೆ ಕಾಣೆಯಾಗಿದ್ದ ಅಪರೂಪದ ಹೂಬಿಡುವ ಸಸ್ಯವೊಂದು, ಹಲವು ದಶಕಗಳ ನಂತರ ಮತ್ತೆ ಪತ್ತೆಯಾಗಿದೆ.
ಹಿಮಾಲಯ ಚಾರಣ ಹೊರಟಿದ್ದೀರಾ? ಶೆರ್ಪಾಗಳೇ ನಿಮ್ಮ ಜೀವಕ್ಕೆ ಕುತ್ತು ತಂದಾರು ಹುಷಾರ್!ಹಿಮಾಲಯ ಚಾರಣಿಗರಿಗೆ ಸಿಹಿ ಸುದ್ದಿ: ಉತ್ತರಾಖಂಡದ 83 ಶಿಖರಗಳು ಏರಲು ಮುಕ್ತಪ್ರವಾಸ: ಚಾರಣ ಬೇಡವೆನ್ನುತ್ತಾ ಹಿಮಾಲಯ ಏರಿದೆ!
ಈ ಅಪರೂಪದ ಸಸ್ಯದ ಹೆಸರು 'ಸಯಾಂಥಸ್ ಹೂಕರೀ'. ಈ ಸಸ್ಯವನ್ನು ಮೊದಲಿಗೆ 1867ರಲ್ಲಿ, ಹಿಮಾಲಯದ ತಪ್ಪಲಿನ ಸಿಕ್ಕಿಂ ಪ್ರದೇಶದಲ್ಲಿ ಗುರುತಿಸಲಾಗಿತ್ತು. ಅಂದಿನ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಸರ್.ಜೋಸೆಫ್ ಡಾಲ್ಟನ್ ಹೂಕರ್, ಈ ಸಸ್ಯದ ಕುರಿತು ಮೊದಲ ಮಾಹಿತಿಯನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಈ ಸಸ್ಯವು ಹಿಮಾಲಯದಿಂದಲೇ ಯಾರ ಕಣ್ಣಿಗೂ ಬೀಳದೆ ಮಾಯವಾಗಿತ್ತು.
ಇತ್ತೀಚೆಗೆ ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆ (ಬಿಎಸ್‌ಐ)ಯ ವಿಜ್ಞಾನಿಗಳು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಈ ಸಯಾಂಥಸ್ ಹೂಕರೀ ಸಸ್ಯವನ್ನು ಪತ್ತೆ ಮಾಡಿದ್ದಾರೆ.
ಈಶಾನ್ಯ ಟುಡೇ ಪ್ರಕಾರ, 1867ರಲ್ಲಿ ಸಿಕ್ಕಿಂನ ಪ್ರದೇಶದಲ್ಲಿ ಈ ಸುಂದರ ಹೂಬಿಡುವ ಸಸ್ಯವನ್ನು ಗುರುತಿಸಲಾಗಿತ್ತು. ಇದಾದ ಬಳಿಕ 2025ರ ಅಂತ್ಯದವರೆಗೂ ಈ ಸಸ್ಯ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇದೀಗ ಮತ್ತೆ ಈ ಸಸ್ಯವು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಮಾಗೊ ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ಚುನ ಕಣಿವೆಯ ಸಮೀಪದ ಸುಮಾರು 3,600 ಮೀಟರ್ ಎತ್ತರದಲ್ಲಿ ಪತ್ತೆಯಾಗಿದೆ.
ಬಿಎಸ್‌ಐ ಸಂಶೋಧಕರಾದ ಸುಭಜಿತ್ ಲಹಿರಿ, ಮೊನಾಲಿಸಾ ದಾಸ್ ಹಾಗೂ ಸುಧಾಂಶು ಶೇಖರ್ ದಾಶ್ ಅವರ ನೇತೃತ್ವದಲ್ಲಿ ಕ್ಷೇತ್ರ ಕಾರ್ಯ ಮಾಡುವ ವೇಳೆ ಇದು ಪತ್ತೆಯಾಗಿದ್ದು, ಈ ಜಾತಿಯ ಸಸ್ಯ ಅರುಣಾಚಲ ಪ್ರದೇಶದಲ್ಲಿ ದಾಖಲಾಗಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಆಕರ್ಷಕ ನೀಲಿ ಬಣ್ಣದ ಸಯಾಂಥಸ್ ಹೂಕರೀ
ಸಯಾಂಥಸ್ ಹೂಕರೀ ಸಸ್ಯವು, ಬೆಲ್‌ಫ್ಲವರ್ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಮೂಲಿಕೆಯ ಸಸ್ಯವಾಗಿದೆ. ಸಂಶೋಧನೆಯ ಪ್ರಕಾರ, ಈ ಸಸ್ಯವು ಅರುಣಾಚಲ ಪ್ರದೇಶದಲ್ಲಿ ಕೇವಲ 3 ರಿಂದ 7 ಸಸ್ಯಗಳು ಮಾತ್ರ ಇರಬಹುದು. ಮಾತ್ರವಲ್ಲದೆ, ದೇಶದಲ್ಲಿ ಈ ಜಾತಿಯ ಸಸ್ಯಗಳ ಸಂಖ್ಯೆ 50 ಕ್ಕಿಂತ ಕಡಿಮೆ ಇರಬಹುದು ಎಂದು ಹೇಳಿದೆ.
ಅಪರೂಪದ 'ಸಯಾಂಥಸ್ ಹೂಕರೀ'.
ಸಯಾಂಥಸ್ ನೀಲಿ ಬಣ್ಣದ ಪುಟ್ಟ ಹೂ ಬಿಡುವ ಸಸ್ಯವಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಯಲ್ಲಿಯೂ ಬೆಳೆಯುವ ಗುಣ ಈ ಸಸ್ಯಕ್ಕಿದೆ. ಆಗಸ್ಟ್‌ನಿಂದ ಸೆಪ್ಟೆಂಬರ್ ನಡುವೆ ಹೂ ಬಿಡುತ್ತದೆ. ಇದು ಭೂತಾನ್, ಟಿಬೆಟ್, ಚೀನಾ, ನೇಪಾಳ ಮತ್ತು ಹಿಮಾಲಯದ ಕೆಲವು ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ.
ಈ ಸಸ್ಯವು 2,700 ರಿಂದ 4,500 ಮೀಟರ್ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಮಾತ್ರವಲ್ಲದೆ, ಪೊದೆ, ಹುಲ್ಲುಗಾವಲುಗಳು ಮತ್ತು ಕಲ್ಲಿನ ನಡುವೆ ಹಾಗೂ ಇಳಿಜಾರಿನಿಂದ ಕೂಡಿದ ಸ್ಥಳಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ನ್ಯೂಸ್‌ಡ್ರಮ್ ವರದಿ ಪ್ರಕಾರ, ಸಂಶೋಧಕರು ಈ ಸಸ್ಯವನ್ನು ಅಂತರರಾಷ್ಟ್ರೀಯ ಪ್ರಕೃತಿ ಸಂರಕ್ಷಣೆ ಒಕ್ಕೂಟ ((IUCN) ಮಾನದಂಡದ ಅಡಿಯಲ್ಲಿ, ಭಾರತದ ಅಳಿವಿನಂಚಿನಲ್ಲಿರುವ ಅಪರೂಪದ ಸಸ್ಯ ಎಂದು ಪರಿಗಣಿಸಿ ಕೆಂಪು ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದಾರೆ.
ಈ ಅಪರೂಪದ ಸಸ್ಯದ ಕುರಿತು ಮಾತನಾಡಿರುವ ಅರುಣಾಚಲ ಪ್ರದೇಶದ ಉಪಮುಖ್ಯಮಂತ್ರಿ ಚೌನಾ ಮೇನ್, 'ಈ ಸಸ್ಯವು ಭಾರತದಲ್ಲಿರುವ ಪ್ರಾಚೀನ ಸಸ್ಯ ಸಂಕುಲಕ್ಕೆ ಉದಾಹರಣೆಯಾಗಿದೆ. ಇದರ ಮರು ಸಂಶೋಧನೆಯು ಅರುಣಾಚಲ ಪ್ರದೇಶದ ಸಸ್ಯ ವೈವಿಧ್ಯತೆಯನ್ನು ಸಾರುತ್ತದೆ. ಹಿಮಾಲಯದ ಪರಿಸರ ಹಾಳಾಗುತ್ತಿದೆ ಎಂಬುಕ್ಕೆ ಈ ಸಸ್ಯದ ಅವನತಿ ಉದಾಹರಣೆಯಾಗಿದೆ' ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಜನಪದ ಕಥೆಗಳ ಪ್ರಕಾರ, ದುರ್ಗಮ ಬೆಟ್ಟಗಳ ಮೇಲೆ ಮಾತ್ರ ಈ ಸಸ್ಯಗಳು ಬೆಳೆಯುತ್ತವೆ. ಅವು ದೇವರಿಂದ ರಕ್ಷಿಸಲ್ಪಡುತ್ತವೆ. ಮನುಷ್ಯರು ಸುಲಭವಾಗಿ ಇವುಗಳನ್ನು ಹುಡುಕಲು ಸಾಧ್ಯವಿಲ್ಲ. ಹೀಗಾಗಿ, ಇಲ್ಲಿ ಬೆಳೆಯುವಂತಹ ಹೂಗಳು ಅಪರೂಪ ಹಾಗೂ ವಿಶೇಷ' ಎಂಬ ಉಲ್ಲೇಖಗಳಿವೆ.

