ಅಟ್ಲಾಂಟಾ: ಈಗ ನಡೆಯುತ್ತಿರುವ 2026ರ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕಾಲ ಮಾನ ಗುರುವಾರ ಮುಂಜಾನೆ 12:30ಕ್ಕೆ ನಡೆಯುವ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
1986ರಲ್ಲಿ ಡಿಯಾಗೊ ಮರಡೋನರ ವಿವಾದಾತ್ಮಕ 'ಹ್ಯಾಂಡ್ ಆಫ್ ಗಾಡ್'ಗೋಲಿನಿಂದ ತೊಡಗಿ 1998ರಲ್ಲಿ ಡಿಯಾಗೊ ಸಿಮಿಯೋನ್ಗೆ ತುಳಿದ ಕಾರಣಕ್ಕೆ ಡೇವಿಡ್ ಬೆಕ್ಹ್ಯಾಮ್ ರೆಡ್ ಕಾರ್ಡ್ ಪಡೆದ ಘಟನೆಯ ತನಕ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ಅರ್ಜೆಂಟೀನ ನಡುವಿನ ಪಂದ್ಯಗಳಲ್ಲಿ ನಾಟಕೀಯ ಘಟನಾವಳಿಗೆ ಕೊರತೆ ಎದುರಾಗಿಲ್ಲ.
ಗುರುವಾರದಂದು ಉಭಯ ತಂಡಗಳು ಕ್ರೀಡೆಯ ಅತಿದೊಡ್ಡ ವೇದಿಕೆಯಲ್ಲಿ 24 ವರ್ಷಗಳ ನಂತರ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ತಮ್ಮ ಇತಿಹಾಸದ ಪುಟದಲ್ಲಿ ಹೊಸ ಅಧ್ಯಾಯ ತೆರೆಯಲು ಮುಂದಾಗಿವೆ.
ಅರ್ಜೆಂಟೀನದ ಲೆಜೆಂಡ್ ಲಿಯೊನೆಲ್ ಮೆಸ್ಸಿ ಇದೇ ಮೊದಲ ಬಾರಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಹ್ಯಾರಿ ಕೇನ್ ಹಾಗೂ ಜೂಡ್ ಬೆಲ್ಲಿಂಗ್ಹ್ಯಾಮ್ರಂತಹ ಸ್ಟಾರ್ ಆಟಗಾರರಿದ್ದಾರೆ.
ಈ ಸೆಮಿ ಫೈನಲ್ನಲ್ಲಿ ಗೆಲ್ಲುವ ತಂಡವು ಸೋಮವಾರ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಅಥವಾ ಸ್ಪೇನ್ ತಂಡವನ್ನು ಎದುರಿಸಲಿದೆ.
ಇಂಗ್ಲೆಂಡ್ ತಂಡವು ಅಮೆರಿಕದ ಜಾರ್ಜಿಯಾದ ಅಟ್ಲಾಂಟಾದಲ್ಲಿರುವ ಅಟ್ಲಾಂಟ ಸ್ಟೇಡಿಯಂನಲ್ಲಿ ಅರ್ಜೆಂಟೀನದ ಸವಾಲನ್ನು ಎದುರಿಸಲಿದೆ. ಈ ಮೈದಾನದಲ್ಲಿ ಏಳು ವಿಶ್ವಕಪ್ ಪಂದ್ಯಗಳು ನಡೆದಿವೆ. ಟೂರ್ನಮೆಂಟ್ನಲ್ಲಿ 68,239 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದೆ.
ಅರ್ಜೆಂಟೀನ-ಇಂಗ್ಲೆಂಡ್: ಹೆಡ್-ಟು-ಹೆಡ್
ಎರಡೂ ತಂಡಗಳು ಸ್ಪರ್ಧಾತ್ಮಕ ಹಾಗೂ ಸೌಹಾರ್ದ ಪಂದ್ಯಗಳಲ್ಲಿ ಒಟ್ಟು 14 ಬಾರಿ ಮುಖಾಮುಖಿಯಾಗಿವೆ.
ಆರು ಬಾರಿ ಗೆಲುವು ದಾಖಲಿಸಿರುವ ಇಂಗ್ಲೆಂಡ್ ತಂಡವು ಹೆಡ್-ಟು-ಹೆಡ್ ದಾಖಲೆಯಲ್ಲಿ ಮೇಲುಗೈ ಸಾಧಿಸಿದೆ. ಅರ್ಜೆಂಟೀನ ತಂಡವು ಮೂರು ಸಲ ಗೆಲುವು ದಾಖಲಿಸಿದ್ದು, ಐದು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.
ಅರ್ಜೆಂಟೀನ ಹಾಗೂ ಇಂಗ್ಲೆಂಡ್ ತಂಡಗಳು ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಐದು ಬಾರಿ ಸೆಣಸಾಡಿವೆ. ಇಂಗ್ಲೆಂಡ್ ಮೂರು ಬಾರಿ ಹಾಗೂ ಅರ್ಜೆಂಟೀನ ಎರಡು ಬಾರಿ ಜಯ ದಾಖಲಿಸಿದೆ.
2002ರಲ್ಲಿ ಕೊನೆಯ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಎರಡೂ ತಂಡಗಳು ಸೆಣಸಾಡಿದ್ದವು. ಆಗ ಗ್ರೂಪ್ ಪಂದ್ಯವನ್ನು ಇಂಗ್ಲೆಂಡ್ ತಂಡವು 1-0 ಅಂತರದಿಂದ ಗೆದ್ದುಕೊಂಡಿದ್ದು, ಮೊದಲಾರ್ಧದಲ್ಲಿ ಪೆನಾಲ್ಟಿಯಲ್ಲಿ ಡೇವಿಡ್ ಬೆಕ್ಹ್ಯಾಮ್ ಗೋಲು ಗಳಿಸಿದ್ದರು.
ವಿಶ್ವಕಪ್ನಲ್ಲಿ ಅರ್ಜೆಂಟೀನ-ಇಂಗ್ಲೆಂಡ್ ದಾಖಲೆ
2002: ಇಂಗ್ಲೆಂಡ್ಗೆ 1-0 ಗೆಲುವು
1998: ಅರ್ಜೆಂಟೀನ-ಇಂಗ್ಲೆಂಡ್ 2-2 ಡ್ರಾ(ಅರ್ಜೆಂಟೀನಕ್ಕೆ ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೆಲುವು)
1986: ಅರ್ಜೆಂಟೀನಕ್ಕೆ 2-1 ಜಯ
1966: ಇಂಗ್ಲೆಂಡ್ಗೆ 1-0 ಗೆಲುವು
1962: ಇಂಗ್ಲೆಂಡ್ಗೆ 3-1 ಗೆಲುವು
ಅರ್ಜೆಂಟೀನ ಹಾಗೂ ಇಂಗ್ಲೆಂಡ್ ಗೆದ್ದಿರುವ ಟ್ರೋಫಿಗಳು
ಅರ್ಜೆಂಟೀನ ತಂಡವು ಮೂರು ಬಾರಿ (1978, 1986, 2022) ವಿಶ್ವಕಪ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.
ಇಂಗ್ಲೆಂಡ್ ತಂಡವು ಕೇವಲ ಒಂದು ಬಾರಿ ಪ್ರಮುಖ ಟ್ರೋಫಿ ಗೆದ್ದುಕೊಂಡಿದೆ. 1966ರಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಎರಡು ಬಾರಿ ಫೈನಲ್ಗೆ ತಲುಪಿದ್ದರೂ ಯುರೋ ಕಪ್ ಜಯಿಸಲು ಸಾಧ್ಯವಾಗಿಲ್ಲ.
ಅರ್ಜೆಂಟೀನದ ಪ್ರಮುಖ ಆಟಗಾರರು ಯಾರು?
ಎಂಟು ಗೋಲುಗಳನ್ನು ಗಳಿಸಿ 'ಗೋಲ್ಡನ್ ಬೂಟ್'ಸ್ಪರ್ಧೆಯಲ್ಲಿರುವ ಮೆಸ್ಸಿ ಪಂದ್ಯಾವಳಿಯಲ್ಲಿ ಅರ್ಜೆಂಟೀನದ ಶ್ರೇಷ್ಠ ಆಟಗಾರನಾಗಿದ್ದಾರೆ. ಪ್ರಿ-ಕ್ವಾರ್ಟರ್ ಫೈನಲ್ ತನಕ 39ರ ವಯಸ್ಸಿ ಮೆಸ್ಸಿ ಪ್ರತೀ ವಿಶ್ವಕಪ್ ಪಂದ್ಯದಲ್ಲೂ ಗೋಲು ಗಳಿಸಿದ್ದರು. ವಿಶ್ವಕಪ್ನಲ್ಲಿ ಅತ್ಯಂತ ಹೆಚ್ಚು ಗೋಲುಗಳನ್ನು(21)ಗಳಿಸಿದ ದಾಖಲೆ ಹೊಂದಿದ್ದಾರೆ.
ಮೆಸ್ಸಿ ಅವರಲ್ಲದೆ, ಎರಡು ಗೋಲು ಗಳಿಸಿರುವ ಲೌಟಾರೊ ಮಾರ್ಟಿನೆಝ್, ಲಿಸಾಂಡ್ರೊ ಮಾರ್ಟಿನೆಝ್ ಹಗೂ ಎಂರೊ ಫೆರ್ನಾಂಡಿಸ್ ಪ್ರಮುಖ ಆಟಗಾರರಾಗಿದ್ದಾರೆ.
ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರು ಯಾರು?
ತಲಾ ಆರು ಗೋಲುಗಳನ್ನು ಗಳಿಸಿರುವ ಸ್ಟ್ರೈಕರ್ ಹ್ಯಾರಿ ಕೇನ್ ಹಾಗೂ ಆಕ್ರಮಣಕಾರಿ ಮಿಡ್ ಫೀಲ್ಡರ್ ಬೆಲ್ಲಿಂಗ್ಹ್ಯಾಮ್ ಅವರು ಇಂಗ್ಲೆಂಡ್ ತಂಡದ ಯಶಸ್ಸಿಗೆ ಸಮಾನ ಕೊಡುಗೆ ನೀಡಿದ್ದಾರೆ. ಕೇನ್ ಅವರು ಗ್ರೂಪ್ ಪಂದ್ಯಗಳಲ್ಲಿ ತನ್ನ ಬಹುತೇಕ ಗೋಲು ಗಳಿಸಿದ್ದರೆ, ಬೆಲ್ಲಿಂಗ್ಹ್ಯಾಮ್ ನಾಕೌಟ್ ಹಂತದಲ್ಲಿ ಗೋಲು ಗಳಿಸಿದ್ದರು.
ಅಂಥೋನಿ ಗೋರ್ಡಾನ್ ಹಾಗೂ ಬುಕಾಯೊ ಸಾಕಾ ತಲಾ ಮೂರು ಬಾರಿ ಅಸಿಸ್ಟ್ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಎಲಿಯೋಟ್ ಆಯಂಡರ್ಸನ್ ಹಾಗೂ ಮಾರ್ಕ್ ಗುಯೆಹಿ ಕೂಡ ಪರಿಣಾಮಕಾರಿ ಪ್ರದರ್ಶನ ನೀಡಿದ್ದಾರೆ.
ಅರ್ಜೆಂಟೀನ: ಸಾಮಥ್ಯಗಳು ಹಾಗೂ ದೌರ್ಬಲ್ಯಗಳು
ಅರ್ಜೆಂಟೀನದ ಶಕ್ತಿಯು 1.70 ಮೀಟರ್ ಎತ್ತರದ ಫುಟ್ಬಾಲ್ ಮಾಂತ್ರಿಕ ಮೆಸ್ಸಿ ಅವರಲ್ಲಿ ಅಡಗಿದೆ. ಅವರಿಂದ ಹೆಚ್ಚು ನಿರೀಕ್ಷೆ ಮಾಡದೇ ಇದ್ದಾಗ ಮಾಂತ್ರಿಕ ಕ್ಷಣವನ್ನು ಸೃಷ್ಟಿಸಬಲ್ಲರು. 39ರ ವಯಸ್ಸಿನ ಮೆಸ್ಸಿ ತನ್ನ ಆರನೇ ವಿಶ್ವಕಪ್ ಟೂರ್ನಿಯನ್ನಾಡುತ್ತಿದ್ದಾರೆ. ಫಾರ್ವರ್ಡ್ ಆಟಗಾರ ಮೆಸ್ಸಿ, ಅರ್ಜೆಂಟೀನದ ಶ್ರೇಷ್ಠ ಆಕ್ರಮಣಕಾರಿ ಅಸ್ತ್ರವೆಂದು ಸಾಬೀತಾಗಿದೆ.
ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು ಗ್ರೂಪ್ ಹಂತದಲ್ಲಿ ಪರಿಪೂರ್ಣ ಪ್ರದರ್ಶನ ನೀಡಿದೆ. ಆದರೆ ನಾಕೌಟ್ ಹಂತದಲ್ಲಿನ ಪ್ರದರ್ಶನವು ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಸಂಶಯ ಹುಟ್ಟುಹಾಕಿದೆ.
32ರ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನ ತಂಡವು ಮೊದಲ ಬಾರಿವಿಶ್ವಕಪ್ ಆಡಿದ್ದ ಕೇಪ್ ವರ್ಡ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಗೆಲುವು ಪಡೆದಿತ್ತು. ಅಂತಿಮ-16ರ ಸುತ್ತಿನಲ್ಲಿ ಈಜಿಪ್ಟ್ ವಿರುದ್ಧ ಆರಂಭದಲ್ಲಿ ಎರಡು ಗೋಲುಗಳ ಹಿನ್ನಡೆಯಲ್ಲಿತ್ತು. ನಂತರ ಪುಟಿದೆದ್ದು ಗೆಲುವು ದಾಖಲಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವಿಟ್ಸರ್ಲ್ಯಾಂಡ್ ವಿರುದ್ಧ 120 ನಿಮಿಷಗಳ ಕಾಲ ಆಡಿ ಜಯ ಗಳಿಸಿತ್ತು.
ಈ ಎಲ್ಲ ಮೂರು ಪಂದ್ಯಗಳಲ್ಲಿ ಸ್ಪಷ್ಟವಾಗಿ ಫೇವರಿಟ್ ತಂಡವಾಗಿದ್ದ ಅರ್ಜೆಂಟೀನ ತಂಡವು ಕೊನೆಯಕ್ಷಣದಲ್ಲಿ ಗೆಲುವು ಪಡೆದಿದೆ. ಇನ್ನೆಷ್ಟು ಸಮಯ ಈ ರೀತಿಯ ಗೆಲುವು ಪಡೆಯಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸಿದೆ.
ಇಂಗ್ಲೆಂಡ್: ಸಾಮರ್ಥ್ಯ ಹಾಗೂ ದೌರ್ಬಲ್ಯಗಳು
ಅರ್ಜೆಂಟೀನ ತಂಡದಂತೆಯೇ ಇಂಗ್ಲೆಂಡ್ ತಂಡ ಕೂಡ ಕೇನ್ ಹಾಗೂ ಬೆಲ್ಲಿಂಗ್ಹ್ಯಾಮ್ ಜೋಡಿಯ ಪ್ರದರ್ಶನವನ್ನು ಹೆಚ್ಚು ನೆಚ್ಚಿಕೊಂಡಿದೆ.
32ರ ವಯಸ್ಸಿನ ಕೇನ್ ಹಾಗೂ ಅವರ 23ರ ವಯಸ್ಸಿನ ಸಹ ಆಟಗಾರ ಬೆಲ್ಲಿಂಗ್ಹ್ಯಾಮ್ ಪ್ರಸಕ್ತ ಟೂರ್ನಮೆಂಟ್ನಲ್ಲಿ ಇಂಗ್ಲೆಂಡ್ ತಂಡ ಗಳಿಸಿರುವ 13 ಗೋಲುಗಳ ಪೈಕಿ 12 ಗೋಲುಗಳನ್ನು ಈ ಇಬ್ಬರೇ ಹಂಚಿಕೊಂಡು ಗೇಮ್ ಚೇಂಜರ್ ಆಗಿದ್ದಾರೆ.
ನಾರ್ವೆ ತಂಡದ ವಿರುದ್ಧ ಇಂಗ್ಲೆಂಡ್ ತಂಡದ ಕ್ವಾರ್ಟರ್ ಫೈನಲ್ ಗೆಲುವು 16ರ ಸುತ್ತಿನಲ್ಲಿ ಮೆಕ್ಸಿಕೋ ವಿರುದ್ಧದ ಗೆಲುವಿನಷ್ಟು ವೀರೋಚಿತವಾಗಿರಲಿಲ್ಲ. ತನ್ನ ತಂಡದ ಈ ಪ್ರದರ್ಶನವನ್ನು ಇಂಗ್ಲೆಂಡ್ ಕೋಚ್ ಥಾಮಸ್ ಟುಚೆಲ್ ಟೀಕಿಸಿದ್ದರು. ಆ ಪಂದ್ಯವು ನಿಧಾನವಾಗಿದ್ದು, ತಾಂತ್ರಿಕ ತಪ್ಪುಗಳಿಂದ ತುಂಬಿಹೋಗಿತ್ತು ಎಂದು ಹೇಳಿದ್ದಾರೆ.

