ನವದೆಹಲಿ: ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿಷಯದಲ್ಲಿ ತಮ್ಮ ವಿರುದ್ಧ ಮಾನನಷ್ಟಕರ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದೆ ಎಂದು ಆರೋಪಿಸಿ, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮೆಟಾ, ಗೂಗಲ್ ವಿರುದ್ಧ ₹11 ಕೋಟಿ ಪರಿಹಾರವಾಗಿ ಕೋರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ತೈಲ ಆಮದನ್ನು ಕಡಿಮೆ ಮಾಡುವ ಮತ್ತು ಪರಿಸರ ಸ್ನೇಹಿ ಇಂಧನ ಬಳಕೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇ-20 ಬಳಕೆಗೆ ಉತ್ತೇಜನ ನೀಡುತ್ತಿರುವ ಬೆನ್ನಲ್ಲೇ, ಶೇ.20 ರಷ್ಟು ಎಥೆನಾಲ್ ಹೊಂದಿರುವ ಇ-20 ಪೆಟ್ರೋಲ್‌ನಿಂದ ವಾಹನಗಳ ಎಂಜಿನ್‌ಗಳಿಗೆ ಹಾನಿಯಾಗುತ್ತದೆ ಎಂದು ಆರೋಪಿಸಿ ಗಡ್ಕರಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಹರಿದಾಡಿದ್ದವು.
ಇ-20 ಪೆಟ್ರೋಲ್ ನೀತಿಯನ್ನು ಸರ್ಕಾರವು ಜಾರಿ ಮಾಡಿದೆ. ಆದರೆ, ಈ ವಿಷಯದಲ್ಲಿ ನನ್ನನ್ನು ವೈಯಕ್ತಿಕವಾಗಿ ಜವಾಬ್ದಾರನೆಂದು ತಪ್ಪಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಿಸಲಾಗುತ್ತಿದೆ ಎಂದು ಗಡ್ಕರಿ ಅವರು ಆರೋಪಿಸಿದ್ದಾರೆ.
ನಕಲಿ ಮತ್ತು ಡೀಪ್‌ಫೇಕ್ ಪೋಸ್ಟ್‌ಗಳ ಮೂಲಕ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದಿಂದ ನನ್ನ ಕುಟುಂಬವು ಲಾಭ ಗಳಿಸಿದೆ ಎಂದು ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಗಡ್ಕರಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಮೆಟಾದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

