ನವದೆಹಲಿ: 'ಕಳೆದ ಬಾರಿ ಎನ್‌ಟಿಎ ಪ್ರಮಾದ ನಡೆಸಿದ್ದಾಗ ಕೇಂದ್ರ ಸರ್ಕಾರ ಕೆ. ರಾಧಾಕೃಷ್ಣನ್ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿತ್ತು. ಅದರ ಶಿಫಾರಸುಗಳನ್ನೇ ಜಾರಿ ಮಾಡಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸುವುದಾಗಿ ಘೋಷಿಸಲಾಗಿದೆ' ಎಂದು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ.
ರಾಧಾಕೃಷ್ಣನ್ ನೇತೃತ್ವದ ಸಮಿತಿಯು ಒಟ್ಟು 101 ಶಿಫಾರಸುಗಳನ್ನು ನೀಡಿತ್ತು. ಇವುಗಳಲ್ಲಿ 60- ತಕ್ಷಣವೇ ಕಾರ್ಯರೂಪಕ್ಕೆ ತರಬೇಕಾಗಿರುವಂಥವು. 30- ಕಾಲಮಿತಿಯೊಳಗೆ ಜಾರಿ ಮಾಡಬೇಕಾದ ಸಲಹೆಗಳಾಗಿದ್ದವು. ಇನ್ನು 6 ಶಿಫಾರಸುಗಳು ಕೇಂದ್ರ ಸರ್ಕಾರಕ್ಕೆ ನೀಡಿದ್ದವಾಗಿದ್ದವು' ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಸಮಿತಿಯ ಶಿಫಾರಸ್ಸುಗಳ ಅನ್ವಯ ಎನ್‌ಟಿಎ ಇನ್ನು ಮುಂದೆ ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಮಾಜಿ ಮಂತ್ರ ಪ್ರಧಾನ್ ಅವರು 2024ರ ಡಿಸೆಂಬರ್‌ನಲ್ಲಿ ಘೋಷಿಸಿದ್ದರು. ಆದರೂ 2025ರಿಂದ 2026ರವರೆಗೆ ಎನ್‌ಟಿಎ ಹಲವು ನೇಮಕಾತಿ ಪರೀಕ್ಷೆಗಳನ್ನು ನಡೆಸಿದೆ. ಎನ್‌ಟಿಎಗೆ ಪೂರ್ಣಾವಧಿ ಮಹಾನಿರ್ದೇಶಕರನ್ನು ನೇಮಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ' ಎಂದರು.

