ಕಠ್ಮಂಡು: ಭಾರತ ಮತ್ತು ನೇಪಾಳದ ಪ್ರಜೆಗಳು 2016 ನವೆಂಬರ್ 9ರ ಬಳಿಕ ಚಲಾವಣೆಗೆ ಬಂದಿರುವ ₹200 ಮತ್ತು ₹500 ಮುಖಬೆಲೆಯ ₹25000ವರೆಗಿನ ನಗದನ್ನು ನೇಪಾಳಕ್ಕೆ ತರಲು ಅಥವಾ ಅಲ್ಲಿಂದ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ.
ಈ ಮೂಲಕ 2016ರಲ್ಲಿ ಭಾರತದಲ್ಲಿ ನೋಟು ರದ್ದುಗೊಂಡ ಬಳಿಕ ನೇಪಾಳದಲ್ಲಿ ಭಾರತದ ₹100 ಮುಖಬೆಲೆಗಿಂತ ಹೆಚ್ಚಿನ ಮುಖಬೆಲೆಯ ನೋಟುಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ.
ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ನೇಪಾಳ ರಾಷ್ಟ್ರ ಬ್ಯಾಂಕ್(ಎನ್‌ಆರ್‌ಬಿ), '2016 ನವೆಂಬರ್ 9ರ ಮುನ್ನ ಚಲಾವಣೆಗೆ ಬಂದಿರುವ ಭಾರತದ ₹500 ಮತ್ತು ₹1000 ಸಾವಿರ ಮುಖಬೆಲೆಯ ನೋಟುಗಳಿಗೆ ನೇಪಾಳದಲ್ಲಿ ವಿಧಿಸಿರುವ ನಿರ್ಬಂಧವು ಮುಂದುವರಿಯಲಿದೆ' ಎಂದು ತಿಳಿಸಿದೆ.
ಈ ಬಗ್ಗೆ ಫೆಬ್ರುವರಿ 11ರಂದೇ ನೇಪಾಳವು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಇದೀಗ ಹೊಸ ನಿಯಮ ಮತ್ತು ಅನುಷ್ಠಾನದ ಕುರಿತ ಸ್ಪಷ್ಟನೆಯೊಂದಿಗೆ ಹೊಸ ಪ್ರಕಟಣೆ ನೀಡಲಾಗಿದೆ.
'ಭಾರತದಿಂದ ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ನೇಪಾಳದ ಪ್ರಜೆಗಳು ಭಾರತದ ನೋಟುಗಳನ್ನು ನೇಪಾಳಕ್ಕೆ ತರುವಂತಿಲ್ಲ. ಅದೇ ರೀತಿ ನೇಪಾಳದಿಂದ ಭಾರತ ನೋಟುಗಳನ್ನು ಬೇರೆ ದೇಶಕ್ಕೆ ಕೊಂಡೊಯ್ಯುವಂತಿಲ್ಲ' ಎಂದು ಎನ್‌ಆರ್‌ಬಿ ವಕ್ತಾರ ಗುರುಪ್ರಸಾದ್ ಪೌದೇಲ್ ಅವರು ಶನಿವಾರ ತಿಳಿಸಿದ್ದಾರೆ.
'ಹೊಸ ನಿಯಮದಿಂದ ಭಾರತದಿಂದ ಬರುವ ಪ್ರವಾಸಿಗರಿಗೆ ಹಾಗೂ ಭಾರತದಲ್ಲಿ ವ್ಯಾಪಾರ ಮತ್ತು ಉದ್ಯಮ ನಡೆಸುತ್ತಿರುವ ನೇಪಾಳದ ಪ್ರಜೆಗಳಿಗೆ ಅನುಕೂಲವಾಗಲಿದೆ' ಎಂದು ಹೇಳಿದರು.

