ನವದೆಹಲಿ: ಭಾರತಕ್ಕೆ ಆಸ್ಟ್ರೇಲಿಯದ ಯುರೇನಿಯಂ ಮಾರಾಟವನ್ನು ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಸಾಧನೆ ಎಂಬುದಾಗಿ ಬಿಂಬಿಸುತ್ತಿರುವ ಬಿಜೆಪಿಯನ್ನು ಕಾಂಗ್ರೆಸ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಭಾರತ-ಅಮೆರಿಕ ಪರಮಾಣು ಒಪ್ಪಂದದ ನಂತರ, 2011ರ ಡಿಸೆಂಬರ್‌ನಲ್ಲಿ ಅಂದಿನ ಆಸ್ಟ್ರೇಲಿಯ ಪ್ರಧಾನಿ ಜೂಲಿಯಾ ಗಿಲಾರ್ಡ್, ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತನ್ನ ಪಕ್ಷದ ಅನುಮೋದನೆಯನ್ನು ಪಡೆದಿದ್ದರು ಎನ್ನುವುದರತ್ತ ಕಾಂಗ್ರೆಸ್ ಬೆಟ್ಟು ಮಾಡಿದೆ.
2010ರಲ್ಲಿ ಆಸ್ಟ್ರೇಲಿಯ ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ನಿರಾಕರಿಸಿತ್ತು. ಆದರೆ ಮೋದಿ ನಾಯಕತ್ವದಲ್ಲಿ ಉಭಯ ದೇಶಗಳು ಯುರೇನಿಯಂ ರಫ್ತು ಒಪ್ಪಂದವನ್ನು ಮಾಡಿಕೊಂಡಿವೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿಕೊಂಡ ಬಳಿಕ ಕಾಂಗ್ರೆಸ್‌ನಿಂದ ಈ ಹೇಳಿಕೆ ಬಂದಿದೆ.
ಬಿಜೆಪಿಯ ಹೇಳಿಕೆಯನ್ನು ತಳ್ಳಿಹಾಕಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಭಾರತಕ್ಕೆ ಆಸ್ಟ್ರೇಲಿಯದ ಯುರೇನಿಯಂ ಮಾರಾಟವು ಮೋದಿ ಅವರ ಸಾಧನೆ ಎಂದು ತೋರಿಸಲು ಬಿಜೆಪಿ ಪರಿಸರ ವ್ಯವಸ್ಥೆಯು ಅತಿಯಾಗಿ ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ''ಆದರೆ, 2008ರ ಅಕ್ಟೋಬರ್‌ನಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದ ಏರ್ಪಟ್ಟ ನಂತರ, 2011 ಡಿಸೆಂಬರ್ 4ರಂದು ಆಸ್ಟ್ರೇಲಿಯ ಪ್ರಧಾನಿ ಜೂಲಿಯಾ ಗಿಲಾರ್ಡ್ ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತನ್ನ ಪಕ್ಷದ ಅನುಮೋದನೆ ಪಡೆದಿದ್ದರು'' ಎಂದು ಜೈರಾಮ್ ರಮೇಶ್ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ತಿಳಿಸಿದ್ದಾರೆ.
''ಕೆಲವು ಸಂಸದರನ್ನೂ ಒಳಗೊಂಡಿರುವ ಬಿಜೆಪಿಯ ಟ್ರೋಲ್‌ಗಳು ತಮ್ಮ ಸಿದ್ಧತೆಗಳನ್ನು ಇನ್ನೂ ಚೆನ್ನಾಗಿ ಮಾಡಬೇಕಾಗಿದೆ'' ಎಂದು ಅವರು ಹೇಳಿದರು.
ಭಾರತಕ್ಕೆ ಯುರೇನಿಯಂ ಮಾರಾಟವನ್ನು ಮುಕ್ತಗೊಳಿಸುವ ಯೋಜನೆಗಳಿಗೆ ಆಸ್ಟ್ರೇಲಿಯದ ಲೇಬರ್ ಪಾರ್ಟಿಯು ಬೆಂಬಲ ನೀಡಿದೆ ಎಂದು ತಿಳಿಸುವ 2011ರ ಡಿಸೆಂಬರ್ ತಿಂಗಳ ಮಾಧ್ಯಮ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನು ಅವರು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ, ''ಪರಮಾಣು ಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ಕ್ಕೆ ಭಾರತ ಸಹಿ ಮಾಡದಿರುವುದನ್ನು ಮುಂದಿಟ್ಟು ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ಆಸ್ಟ್ರೇಲಿಯ ನಿರಾಕರಿಸಿತ್ತು. ಇಂದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ಯುರೇನಿಯಂ ರಫ್ತು ಒಪ್ಪಂದವನ್ನು ಮಾಡಿಕೊಂಡಿವೆ'' ಎಂದು ಮಾಳವೀಯ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದರು.
''ಇದು ಕೇವಲ ಯುರೇನಿಯಂ ಬಗ್ಗೆ ಅಲ್ಲ. ಇದು ಭಾರತದ ಬದಲಾದ ಜಾಗತಿಕ ಸ್ಥಾನಮಾನವನ್ನು ಪ್ರತಿಬಿಂಬಿಸುತ್ತದೆ. ನಿರ್ಬಂಧಗಳ ದೃಷ್ಟಿಕೋನದಿಂದ ನೋಡಲ್ಪಡುತ್ತಿದ್ದ ದೇಶದಿಂದ, ಭಾರತ ಇಂದು ನಂಬಿಕಸ್ಥ ಆಯಕಟ್ಟಿನ ಪಾಲುದಾರನಾಗಿ ಪರಿಗಣಿಸಲ್ಪಡುವವರೆಗೆ ಬೆಳೆದಿದೆ'' ಎಂದು ಮಾಳವೀಯ ಹೇಳಿದ್ದರು.

