ಶ್ರೀನಗರ: 2025ರ ಎಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು 26 ನಾಗರಿಕರು ಮೃತಪಟ್ಟ ಬಳಿಕ, ಮೊದಲ ಬಾರಿ ಅಮರನಾಥ ಯಾತ್ರೆ ನಡೆಯುತ್ತಿದೆ. ಈ ಬಾರಿಯ ಅಮರನಾಥ ಯಾತ್ರೆಯು ಜುಲೈ 3ರಂದು ಅಭೂತಪೂರ್ವ ಭದ್ರತೆಯ ನಡುವೆ ಪ್ರಾರಂಭವಾಗಿದೆ.
ಈ ಬಾರಿಯ ಅಮರನಾಥ ಯಾತ್ರೆಗೆ ಭಕ್ತರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ, ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ, 'ಬಾಬಾ ಬರ್ಫಾನಿ' ಎಂಬುದಾಗಿಯೂ ಕರೆಯಲ್ಪಡುವ ನೈಸರ್ಗಿಕ ಹಿಮಲಿಂಗವು ಶೇಕಡಾ 90ಕ್ಕಿಂತಲೂ ಹೆಚ್ಚು ಕರಗಿದೆ ಎಂದು ಹಲವು ವರದಿಗಳು ತಿಳಿಸಿವೆ.
ಅಮರನಾಥ ಗುಹಾ ದೇವಾಲಯವು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುಮಾರು 3,888 ಮೀಟರ್ ಎತ್ತರದಲ್ಲಿದೆ. ಯಾತ್ರಿಕರು ಸಾಂಪ್ರದಾಯಿಕ 48 ಕಿಲೋಮೀಟರ್‌ನ ಪಹಲ್ಗಾಮ್ ಮಾರ್ಗದ ಮೂಲಕ ಅಥವಾ ಕಡಿಮೆ ದೂರದ ಆದರೆ ಕಡಿದಾದ 14 ಕಿಲೋಮೀಟರ್‌ನ ಬಾಲ್ಟಾಲ್ ಮಾರ್ಗದ ಮೂಲಕ ಈ ಕ್ಷೇತ್ರವನ್ನು ತಲುಪಬಹುದು.
ನೈಸರ್ಗಿಕ ಶಿವಲಿಂಗವು ಇಷು ಬೇಗ ಕರಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ. ಹಿಮಲಿಂಗವು ಇಷ್ಟು ಬೇಗ ಕರಗಲು ಹವಾಮಾನ ವೈಪರೀತ್ಯವೇ ಕಾರಣ ಎಂದು ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ. ''ಅಮರನಾಥ ಯಾತ್ರೆ ಆರಂಭವಾಗಿ ಕೇವಲ ಒಂದು ವಾರವಾಗಿದೆ. ಆದರೆ ನೈಸರ್ಗಿಕವಾಗಿ ರೂಪುಗೊಂಡ ಹಿಮ ಲಿಂಗವು ಈಗಾಗಲೇ ಕರಗಿದೆ. ಯೋಚನಾರಹಿತವಾಗಿ ಮರಗಳನ್ನು ಕಡಿಯುವುದು, ಅಕ್ರಮ ಗಣಿಗಾರಿಕೆ, ತ್ಯಾಜ್ಯ ನಿರ್ವಹಣೆಯ ಕೊರತೆ ಮತ್ತು ನೀರಿನ ಮಟ್ಟ ಅಪಾಯಕಾರಿಯಾಗಿ ಕುಸಿಯುತ್ತಿರುವುದು ಇದಕ್ಕೆ ಪ್ರಮುಖ ಕಾರಣಗಳು'' ಎಂದು ಹೇಳಿದ್ದಾರೆ.
''ದುರದೃಷ್ಟವಶಾತ್, ಕಾಶ್ಮೀರದ ರಾಜಕಾರಣಕ್ಕೆ ಪರಿಸರವು ಬಲಿಯಾಗುತ್ತಿದೆ. ಇದಕ್ಕೆ ಯಾವುದೇ ರಾಜಕೀಯ ಮೌಲ್ಯವಿಲ್ಲ'' ಎಂದು ಮುಫ್ತಿ ಬರೆದಿದ್ದಾರೆ.
ದಾಖಲೆಯ ಭಕ್ತರ ಸಂಖ್ಯೆಯೂ ಕಾರಣವೇ?
ಈ ವರ್ಷ, ಭದ್ರತೆಯ ಆತಂಕಗಳ ಹೊರತಾಗಿಯೂ, ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಕನಿಷ್ಠ 93,000 ಯಾತ್ರಿಕರು ದರ್ಶನ ಪಡೆದಿದ್ದಾರೆ.
ಜುಲೈ 5ರ ವೇಳೆಗೆ 32,000ಕ್ಕೂ ಹೆಚ್ಚು ಭಕ್ತರು ಪ್ರಾರ್ಥನೆ ಸಲ್ಲಿಸಿದ್ದರು. ಯಾತ್ರೆಯ ಎರಡನೇ ದಿನದಂದೇ 20,000 ಕ್ಕೂ ಹೆಚ್ಚು ಯಾತ್ರಿಕರು ಭೇಟಿ ನೀಡಿದ್ದರು. ಇದು ಕಳೆದ ಹಲವು ವರ್ಷಗಳಲ್ಲಿ ಎರಡನೇ ದಿನದಂದು ದಾಖಲಾದ ಅತಿ ಹೆಚ್ಚು ಭಕ್ತರ ಸಂಖ್ಯೆಯಾಗಿದೆ.
ಹವಾಮಾನ ವೈಪರೀತ್ಯ ಕಾರಣವೇ?
ಜಾಗತಿಕವಾಗಿ ಇತರ ಅನೇಕ ಪರ್ವತ ವ್ಯವಸ್ಥೆಗಳಿಗಿಂತ ಹಿಮಾಲಯವು ವೇಗವಾಗಿ ಬಿಸಿಯಾಗುತ್ತಿದೆ ಎಂದು ವಿಜ್ಞಾನಿಗಳು ಪದೇ ಪದೇ ಎಚ್ಚರಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಾದ್ಯಂತ, ಹೆಚ್ಚುತ್ತಿರುವ ಸರಾಸರಿ ತಾಪಮಾನ, ಬದಲಾಗುತ್ತಿರುವ ಹಿಮಪಾತದ ಮಾದರಿಗಳು ಮತ್ತು ಕರಗುತ್ತಿರುವ ಹಿಮನದಿಗಳು ಹೆಚ್ಚೆಚ್ಚು ಗೋಚರಿಸುತ್ತಿವೆ.
ಹಿಮಲಿಂಗವು 2018ರಲ್ಲಿ 29 ದಿನಗಳಲ್ಲಿ, 2020ರಲ್ಲಿ 38 ದಿನಗಳಲ್ಲಿ, 2022ರಲ್ಲಿ 28 ದಿನಗಳಲ್ಲಿ ಮತ್ತು 2024 ರಲ್ಲಿ ಸುಮಾರು ಒಂದು ವಾರದೊಳಗೆ ಕರಗಿತ್ತು. ಈ ವರ್ಷ, ಹಿಮಲಿಂಗವು ಅದಕ್ಕಿಂತಲೂ ಮುಂಚಿತವಾಗಿ ಕರಗಿದಂತೆ ತೋರುತ್ತಿದೆ.

