ಪುರಿ: 'ಸುನಾ ಬೇಷಾ' ಆಚರಣೆಯ ಅಂಗವಾಗಿ ಇಲ್ಲಿನ ಜಗನ್ನಾಥ ದೇವಸ್ಥಾನದಲ್ಲಿ ಬಲಭದ್ರ ಹಾಗೂ ದೇವಿ ಸುಭದ್ರಾ ಮೂರ್ತಿಗಳಿಗೆ 208 ಕೆ.ಜಿ. ತೂಕದ ಬಂಗಾರದ ಒಡವೆಗಳಿಂದ ಅಲಂಕಾರ ಮಾಡಿ ವಾರ್ಷಿಕ ರಥಯಾತ್ರೆಯಲ್ಲಿ ಮೆರವಣಿಗೆ ಮಾಡಲಾಯಿತು.
ಶನಿವಾರ ಸಂಜೆ 5ರಿಂದ ರಾತ್ರಿ 11ರವರೆಗೂ ರಥಗಳಿದ್ದ ಮೂರ್ತಿಗಳು ಚಿನ್ನದಿಂದಲೇ ಕಂಗೊಳಿಸಿದವು.
ಉತ್ಸವದ ಸಂದರ್ಭದಲ್ಲಿ ಚಿನ್ನ, ವಜ್ರ, ಬೆಳ್ಳಿ ಹಾಗೂ ಬೆಲೆ ಬಾಳುವ ಲೋಹದಿಂದ ತಯಾರಿಸಿದ 30ಕ್ಕೂ ಅಧಿಕ ಆಭರಣಗಳಿಂದ ಅಲಂಕಾರ ಮಾಡಲಾಗಿತ್ತು ಎಂದು ದೇವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಸುನಾ ಬೇಷಾ' ಆಚರಣೆಯು 1460ರ ರಾಜ ಕಪಿಲೇಂದ್ರ ದೇವ್ ಕಾಲದಿಂದಲೂ ಚಾಲ್ತಿಯಲ್ಲಿದೆ. ಆರಂಭದಲ್ಲಿ 138 ವಿನ್ಯಾಸದ ಆಭರಣಗಳಿಂದ ಅಲಂಕರಿಸಲಾಗುತ್ತಿತ್ತು. ಕ್ರಮೇಣ ಅವುಗಳ ಸಂಖ್ಯೆ ಕಡಿಮೆಯಾಗಿದೆ' ಎಂದು ಶ್ರೀ ಜಗನ್ನಾಥ ಸಾಂಸ್ಕೃತಿಕ ಕೇಂದ್ರದ ಸಂಶೋಧಕ ಹಾಗೂ ಲೇಖಕ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ.

