ಭಾರತದಿಂದ 'ಇ20 ಪೆಟ್ರೋಲ್' ಆಮದು ಮಾಡಿಕೊಳ್ಳುವ ಪ್ರಸ್ತಾಪವನ್ನು ಭೂತಾನ್ ತಿರಸ್ಕರಿಸಿದೆ ಎಂಬ ವರದಿಗಳು ಭಾರಿ ಚರ್ಚೆಗೆ ಕಾರಣವಾಗಿವೆ. ಆದರೆ, ಭಾರತ ಸರ್ಕಾರ ಇದನ್ನು ನಿರಾಕರಿಸಿದ್ದು, ಆ ವರದಿಗಳು ಸುಳ್ಳು ಎಂದು ಪ್ರತಿಪಾದಿಸಿದೆ.
ಸ್ಪಷ್ಟನೆ ನೀಡಿದ ಸಚಿವಾಲಯ
ಭಾರತದ ತೈಲೋತ್ಪನ್ನ ಮಾರಾಟ ಕಂಪನಿಗಳು ಭೂತಾನ್‌ಗೆ 'ಇ20 ಪೆಟ್ರೋಲ್' ಪೂರೈಸುವ ಪ್ರಸ್ತಾಪ ಮುಂದಿಟ್ಟಿದ್ದವು. ಆದರೆ ಭೂತಾನ್ ಅದನ್ನು ತಿರಸ್ಕರಿಸಿರುವುದಾಗಿ ಅಲ್ಲಿನ ಮಾಧ್ಯಮವೊಂದು ವರದಿ ಮಾಡಿತ್ತು.
ಈ ಕುರಿತು 'ಎಕ್ಸ್' ನಲ್ಲಿ ಸ್ಪಷ್ಟನೆ ನೀಡಿದ ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, 'ಭಾರತೀಯ ತೈಲೋತ್ಪನ್ನ ಮಾರಾಟ ಕಂಪನಿಗಳು ಇಂತಹ ಯಾವುದೇ ಪ್ರಸ್ತಾಪವನ್ನು ಸಲ್ಲಿಸಿಲ್ಲ. ಭೂತಾನ್‌ಗೆ 'ಇ20 ಪೆಟ್ರೋಲ್' ರಫ್ತು ಮಾಡುವ ಯಾವುದೇ ಯೋಜನೆಯೂ ಸರ್ಕಾರದ ಮುಂದಿಲ್ಲ. ಸಾರ್ವಜನಿಕರು ಸಚಿವಾಲಯ ಅಥವಾ ಅಧಿಕೃತ ತೈಲ ಕಂಪನಿಗಳು ನೀಡುವ ಮಾಹಿತಿಯನ್ನು ಮಾತ್ರ ನಂಬಬೇಕು' ಎಂದು ತಿಳಿಸಿದೆ.
ಲಿಖಿತ ಸಾಕ್ಷಿ ಬಿಡುಗಡೆ ಮಾಡಿದ ಪತ್ರಕರ್ತ
ಕೇಂದ್ರ ಸರ್ಕಾರ ಈ ವರದಿಯನ್ನು ನಿರಾಕರಿಸಿದ ಬೆನ್ನಲ್ಲೇ, ಈ ಸುದ್ದಿಯನ್ನು ಬರೆದಿದ್ದ ಭೂತಾನ್‌ನ ಪತ್ರಕರ್ತ ತೆನ್ಜಿಂಗ್ ಲ್ಯಾಮ್ಸಾಂಗ್ ಮತ್ತು 'ದಿ ಭೂತಾನೀಸ್' (ಖಿhe ಃhuಣಚಿಟಿese) ಪತ್ರಿಕೆ ಭಾರತ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಭೂತಾನ್ ಸರ್ಕಾರದ ವಾಣಿಜ್ಯ ಇಲಾಖೆ ನೀಡಿರುವ ಲಿಖಿತ ಉತ್ತರದ ಪ್ರತಿಯನ್ನು (ಅಧಿಕೃತ ಪತ್ರ) ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ತೈಲೋತ್ಪನ್ನ ಮಾರಾಟ ಕಂಪನಿಗಳು ಇ20 ಪೆಟ್ರೋಲ್ ಪೂರೈಸುವ ಬಗ್ಗೆ ಪ್ರಸ್ತಾಪಿಸಿರುವುದು, ಇದಕ್ಕೆ ಪ್ರತಿಕ್ರಿಯಿಸಿದ ಭೂತಾನ್ ಸರ್ಕಾರ, ಸಾಮಾನ್ಯ ಪೆಟ್ರೋಲ್ ಅನ್ನೇ ಪೂರೈಸುವಂತೆ ವಿನಂತಿಸಿರುವುದು ಸರ್ಕಾರದ ಲಿಖಿತ ಪತ್ರದಿಂದ ಸಾಬೀತಾಗಿದೆ. ಅಷ್ಟೇ ಅಲ್ಲದೇ, ನಾನು ನಡೆಸಿದ ಮೌಖಿಕ ಸಂದರ್ಶನಗಳೂ ಇದನ್ನೇ ಖಚಿತಪಡಿಸಿವೆ. ನಿಮಗೆ ತಪ್ಪು ಅಥವಾ ಅಪೂರ್ಣ ಮಾಹಿತಿ ಸಿಕ್ಕಿದೆ ಎಂದು ಸಚಿವಾಲಯಕ್ಕೆ ತಿರುಗೇಟು ನೀಡಿದ್ದಾರೆ.
ಏನಿದು ಇ20 ಪೆಟ್ರೋಲ್?
ಇತ್ತೀಚಿನ ವರ್ಷಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಇಂಧನ ಸ್ವಾವಲಂಬನೆಗಾಗಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಪ್ರಕ್ರಿಯೆ ಜಾಗತಿಕವಾಗಿ ವೇಗ ಪಡೆದುಕೊಂಡಿದೆ. ಇ20 ಪೆಟ್ರೋಲ್ ಎಂದರೆ ಶೇ 80ರಷ್ಟು ಪೆಟ್ರೋಲ್ ಮತ್ತು ಶೇ 20ರಷ್ಟು ಎಥೆನಾಲ್ ಇರುವ ಇಂಧನ ಮಿಶ್ರಣ.

