ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೈತುಂಬಾ ಸಂಬಳ ಸಿಗುವ ಉದ್ಯೋಗಾವಕಾಶವನ್ನು ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ, ಐಐಟಿ ರೂರ್ಕಿಯ ಪದವೀಧರೆ ಭಾರಿ ಮೊತ್ತದ ವಾರ್ಷಿಕ ಪ್ಯಾಕೇಜ್‌ನ ಆಫರ್ ತಿರಸ್ಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗುರುಗ್ರಾಮದಲ್ಲಿ (ಗುರಗಾಂವ್) ಸಿಕ್ಕಿದ್ದ ವಾರ್ಷಿಕ ₹32 ಲಕ್ಷ ರೂಪಾಯಿ ಸಂಬಳದ ಕೆಲಸವನ್ನು ಬೇಡ ಎಂದು ಅವರು ಬೆಂಗಳೂರಿನಲ್ಲೇ ಉಳಿಯಲು ನಿರ್ಧರಿಸಿದ್ದಾರೆ.
ಡೇಟಾ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಾ ಪ್ರಿಯಾ ಅವರ ನಿರ್ಧಾರವು, ಯಶಸ್ವಿ ವೃತ್ತಿಜೀವನ ಎಂದರೆ ಕೇವಲ ದೊಡ್ಡ ಸಂಬಳವೇ ಅಥವಾ ನೆಮ್ಮದಿಯ ಜೀವನವೇ ಎಂಬ ಹೊಸ ಚರ್ಚೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಾಕಿದೆ.
ಹಣಕ್ಕಿಂತ ನೆಮ್ಮದಿಯೇ ಮುಖ್ಯ ಎಂದ ಸ್ನೇಹಾ
ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸ್ನೇಹಾ ಪ್ರಿಯಾ, ತಮಗೆ ಬೆಂಗಳೂರು ನಗರದ ಮೇಲಿರುವ ಪ್ರೀತಿ ಮತ್ತು ಇಲ್ಲಿ ಸಿಗುವ ಸುರಕ್ಷಿತ ಭಾವನೆಯೇ ಈ ತೀರ್ಮಾನಕ್ಕೆ ಕಾರಣ ಎಂದಿದ್ದಾರೆ.
'ಇವತ್ತು ನಾನು ಬೆಂಗಳೂರನ್ನು ಬಿಟ್ಟು ಗುರುಗ್ರಾಮದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಬೇಕಿತ್ತು. ಆದರೆ ನಾನು ಇಲ್ಲೇ ಉಳಿಯಲು ನಿರ್ಧರಿಸಿದೆ. ಕೆಲವೊಮ್ಮೆ ಅತ್ಯುತ್ತಮ ವೃತ್ತಿಪರ ನಿರ್ಧಾರ ಎಂದರೆ ಅತಿ ಹೆಚ್ಚು ಸಂಬಳ ಕೊಡುವ ಕೆಲಸವನ್ನು ಒಪ್ಪಿಕೊಳ್ಳುವುದಲ್ಲ, ಬದಲಿಗೆ ನೆಮ್ಮದಿಯನ್ನು ಆರಿಸಿಕೊಳ್ಳುವುದು' ಎಂದಿದ್ದಾರೆ ಸ್ನೇಹಾ ಪ್ರಿಯಾ.
ಬೆಂಗಳೂರನ್ನು ಆರಿಸಿಕೊಳ್ಳಲು ಪ್ರಮುಖ ಕಾರಣಗಳು
'ಐಐಟಿ ರೂರ್ಕಿಯಲ್ಲಿ ಓದುತ್ತಿದ್ದಾಗ ನಾನು ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿದ್ದೆ. ಆ ವೇಳೆ ಅಲ್ಲಿನ ಕೆಲವು ವೈಯಕ್ತಿಕ ಅನುಭವಗಳು ಅಷ್ಟಾಗಿ ಸರಿ ಎನಿಸಲಿಲ್ಲ. ಮುಖ್ಯವಾಗಿ ಸುರಕ್ಷತೆಯ ದೃಷ್ಟಿಯಿಂದ ದೆಹಲಿಗಿಂತ ಬೆಂಗಳೂರು ಹೆಚ್ಚು ಸೂಕ್ತ ಎನಿಸಿತು' ಎಂದು ಸ್ನೇಹಾ ಹೇಳಿದ್ದಾರೆ.
ಬೆಂಗಳೂರು ನಗರದ ಜನರ ಆತ್ಮೀಯತೆ, ಸುರಕ್ಷಿತ ವಾತಾವರಣ ಮತ್ತು ಇಲ್ಲಿನ ಜೀವನಶೈಲಿ ತಮಗೆ ಮನೆಯಂತಹ ಅನುಭವ ನೀಡುತ್ತದೆ ಎಂದು ಸ್ನೇಹಾ ಅಭಿಪ್ರಾಯಪಟ್ಟಿದ್ದಾರೆ.
ದೊಡ್ಡ ಸಂಬಳದ ಆಫರ್ ಅನ್ನು ಬದಿಗೊತ್ತಿ, ಮಾನಸಿಕ ನೆಮ್ಮದಿ ಹಾಗೂ ಸುರಕ್ಷತೆಗೆ ಆದ್ಯತೆ ನೀಡಿದ ಸ್ನೇಹಾ ಅವರ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

