ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ನಡೆದಿರುವ ಆರೋಪದ ವಿರುದ್ಧ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರವಿವಾರ 'ರಾಮ ರಕ್ಷಾ' ಆಂದೋಲನಕ್ಕೆ ಚಾಲನೆ ನೀಡಿದರು. ಬಿಜೆಪಿ ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡಿದ್ದು, "ಹಿಂದೂಗಳನ್ನು ಲೂಟಿ ಮಾಡುವವರೇ ಇಂದು ಅಧಿಕಾರದಲ್ಲಿದ್ದಾರೆ" ಎಂದು ಅವರು ಆರೋಪಿಸಿದರು.
ಮುಂಬೈನ ದಾದರ್‌ನಲ್ಲಿರುವ ಹನುಮಾನ್ ದೇವಾಲಯದ ಹೊರಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ಹನುಮಾನ್ ಸ್ತೋತ್ರ, ಹನುಮಾನ್ ಚಾಲೀಸಾ ಹಾಗೂ ರಾಮ ರಕ್ಷಾ ಸ್ತೋತ್ರವನ್ನು ಪಠಿಸಿದ ಬಳಿಕ ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದರು.
"ಯಾರೇ ಆಗಲಿ, ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡು ದೇವಾಲಯವನ್ನು ಲೂಟಿ ಮಾಡಿದ್ದರೆ, ಹಿಂದೂಗಳು ಅವರನ್ನು ಕ್ಷಮಿಸುವುದಿಲ್ಲ" ಎಂದು ಅವರು ಹೇಳಿದರು.
ಈ ವೇಳೆ 'ಬಿಜೆಪಿ-ಮುಕ್ತ ರಾಮ' ಎಂಬ ಘೋಷಣೆಯನ್ನು ಮುಂದಿಟ್ಟ ಠಾಕ್ರೆ, "ಭಗವಾನ್ ರಾಮ ಎಲ್ಲರಿಗೂ ಸೇರಿದವರು. ಯಾವುದೇ ರಾಜಕೀಯ ಪಕ್ಷ ಅವರನ್ನು ತನ್ನ ಸ್ವತ್ತೆಂದು ಪರಿಗಣಿಸಲು ಸಾಧ್ಯವಿಲ್ಲ" ಎಂದು ಪ್ರತಿಪಾದಿಸಿದರು.
ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ದೇವರು ತೋರಿದ ಮಾರ್ಗವನ್ನು ಬಿಟ್ಟು ಹೋದ ನಂತರ ಕೊನೆಗೂ ಅವರು ರಾಮನನ್ನು ನೆನಪಿಸಿಕೊಂಡಿದ್ದಾರೆ ಎಂಬುದು ಸಂತೋಷದ ಸಂಗತಿ" ಎಂದು ಹೇಳಿದರು.
ಗಡ್ಚಿರೋಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, "ಅವರು ರಾಮನನ್ನು ನೆನಪಿಸಿಕೊಳ್ಳಬೇಕು ಎಂಬುದೇ ನಮ್ಮ ನಿರೀಕ್ಷೆಯಾಗಿತ್ತು. ಅವರು ರಾಮನ ಮಾರ್ಗವನ್ನು ತೊರೆದಿದ್ದರು. ಅದಕ್ಕಾಗಿಯೇ ಅವರ ಪಕ್ಷ ಕುಸಿಯಿತು. ಅವರು ರಾಮನ ಮಾರ್ಗದಲ್ಲಿ ನಡೆದರೆ ಅದು ಅವರಿಗೆ ಒಳ್ಳೆಯದು. ಇಂದಷ್ಟೇ ಅಲ್ಲ, ಪ್ರತಿದಿನವೂ 'ರಾಮ ರಕ್ಷಾ' ಪಠಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದು ಹೇಳಿದರು.
2019ರಲ್ಲಿ ಉದ್ಧವ್ ಠಾಕ್ರೆ ಅವರು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದು ಕಾಂಗ್ರೆಸ್ ಜತೆ ಕೈಜೋಡಿಸಿದ ನಂತರ, ಅವರು ಹಿಂದುತ್ವವನ್ನು ತ್ಯಜಿಸಿದ್ದಾರೆ ಎಂದು ಬಿಜೆಪಿ ನಿರಂತರವಾಗಿ ಆರೋಪಿಸುತ್ತಿದೆ. 2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನೆಯಲ್ಲಿ ನಡೆದ ಬಂಡಾಯದ ಸಂದರ್ಭದಲ್ಲೂ ಇದೇ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿತ್ತು.
"ಕಳೆದ 12 ವರ್ಷಗಳಿಂದ ದೇಶದಲ್ಲಿ ಕೇಸರಿ ವಿಚಾರಧಾರೆಯ ಸರ್ಕಾರ ಅಧಿಕಾರದಲ್ಲಿದೆ ಎಂದು ನಾವು ನಂಬಿದ್ದೆವು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೂಗಳಿಗೆ ಅನ್ಯಾಯವಾಗುವುದಿಲ್ಲ ಎಂದು ಹೇಳಿದ್ದರು. ಆದರೆ ಇಂದು ಅಧಿಕಾರದಲ್ಲಿರುವವರೇ ಹಿಂದೂಗಳ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ದುರದೃಷ್ಟಕರ" ಎಂದು ಠಾಕ್ರೆ ಆರೋಪಿಸಿದರು.
ಆರೋಪ ಎದುರಿಸುತ್ತಿರುವವರಿಂದಲೇ ತನಿಖೆ ನಡೆಸುವ ನಿರೀಕ್ಷೆ ಇಡಲು ಸಾಧ್ಯವಿಲ್ಲ ಎಂದರು.
"ದರೋಡೆ ಮಾಡಿದ ವ್ಯಕ್ತಿಯಿಂದಲೇ ದರೋಡೆಯ ತನಿಖೆ ನಡೆಸಲು ಹೇಳಲಾಗುವುದಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಇಲ್ಲದಿದ್ದರೆ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗುತ್ತದೆ" ಎಂದು ಅವರು ಹೇಳಿದರು.
ನಿಷ್ಪಕ್ಷಪಾತ ತನಿಖೆ ನಡೆಯುವವರೆಗೆ 'ರಾಮ ರಕ್ಷಾ' ಆಂದೋಲನವನ್ನು ಮುಂದುವರಿಸಲಾಗುವುದು ಎಂದು ಘೋಷಿಸಿದ ಠಾಕ್ರೆ, ಈ ಆಂದೋಲನವನ್ನು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಿಗೂ ವಿಸ್ತರಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
"ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರು ಹಿಂದೂಗಳನ್ನು ಜಾಗೃತಗೊಳಿಸಿದ್ದರು. ಆದರೆ ಈಗ ಅವರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ" ಎಂದು ಅವರು ಆರೋಪಿಸಿದರು.
ಅಯೋಧ್ಯೆ ರಾಮ ಮಂದಿರದ ದೇಣಿಗೆ ದುರುಪಯೋಗದ ಆರೋಪಗಳು ಜೂನ್ 7ರಂದು ಬೆಳಕಿಗೆ ಬಂದಿದ್ದವು. ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ ಪ್ರಾಥಮಿಕ ವರದಿ ಆಧರಿಸಿ ಜೂನ್ 25ರಂದು ಎಫ್‌ಐಆರ್ ದಾಖಲಾಗಿದ್ದು, ದೇವಾಲಯದ ದೇಣಿಗೆ ಸಂಗ್ರಹ ಮತ್ತು ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
"ಶೌಚಾಲಯಗಳಲ್ಲಿ ಹಣವನ್ನು ಮರೆಮಾಚಲಾಗುತ್ತಿತ್ತು. ಇದು ಅವರ ಕೊಳಕು ಹಿಂದುತ್ವ. ಇದು ಹಿಂದುತ್ವಕ್ಕೆ ಮಾಡಿದ ಅವಮಾನ" ಎಂದು ಠಾಕ್ರೆ ಆರೋಪಿಸಿದರು.
ದೇಶದ ಇತರ ಪ್ರಮುಖ ಹಿಂದೂ ದೇವಾಲಯಗಳ ಪರಿಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, "ಅಯೋಧ್ಯಾ ತೋ ಝಾಂಕಿ ಹೈ, ಕಾಶಿ, ಮಥುರಾ ಅಭಿ ಬಾಕಿ ಹೈ" ಎಂಬ ಘೋಷಣೆಯನ್ನು ಉಲ್ಲೇಖಿಸಿದರು.
"ನಾವು ದೇಶದ ಬಗ್ಗೆ ಹೆಮ್ಮೆಪಡುವ ಕಟ್ಟಾ ಹಿಂದೂಗಳು. ನಾವು ಮುಗ್ಧರಾಗಿರಬಹುದು, ಆದರೆ ಮೂರ್ಖರಲ್ಲ. ದೇವಾಲಯಗಳನ್ನು ಲೂಟಿ ಮಾಡಲು ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡರೆ, ಹಿಂದೂಗಳು ಇನ್ನು ಮುಂದೆ ಮೌನವಾಗಿರುವುದಿಲ್ಲ" ಎಂದು ಅವರು ಹೇಳಿದರು.
ತಮ್ಮ ಪಕ್ಷವನ್ನು ಟೀಕಿಸುವವರನ್ನು "ಕಳ್ಳರ ರಕ್ಷಕರು" ಎಂದು ಆರೋಪಿಸಿದ ಠಾಕ್ರೆ, ಬಿಜೆಪಿ ಹೆಸರನ್ನು ನೇರವಾಗಿ ಉಲ್ಲೇಖಿಸದೆ, 'ಜೈ ಶ್ರೀರಾಮ್' ಮತ್ತು 'ಮಂದಿರ್ ವಹೀ ಬನಾಯೇಂಗೆ' ಮೊದಲಾದ ಘೋಷಣೆಗಳನ್ನು ರಾಜಕೀಯ ಅಧಿಕಾರ ಪಡೆಯಲು ಬಳಸಲಾಗಿದೆ ಎಂದು ಟೀಕಿಸಿದರು. ರಾಮ ಜನ್ಮಭೂಮಿ ಚಳುವಳಿಗೆ ಶಿವಸೈನಿಕರಷ್ಟಾಗಿ ಯಾವುದೇ ರಾಜಕೀಯ ಪಕ್ಷ ಕೊಡುಗೆ ನೀಡಿಲ್ಲ ಎಂದು ಅವರು ಹೇಳಿದರು.
ಇದೇ ವೇಳೆ, ಕೇದಾರನಾಥ ದೇವಾಲಯದಿಂದ ಹಲವು ಕಿಲೋಗ್ರಾಂ ಚಿನ್ನ ಕಳುವಾಗಿದೆ ಎಂಬ ಆರೋಪ ಕುರಿತು ಉತ್ತರಾಖಂಡದ ಜ್ಯೋತಿರ್ ಮಠದ ಮುಖ್ಯಸ್ಥ ಅವಿಮುಕ್ತೇಶ್ವರಾನಂದ ಸರಸ್ವತಿ ಮಾಡಿರುವ ಹೇಳಿಕೆಯನ್ನು ಠಾಕ್ರೆ ಉಲ್ಲೇಖಿಸಿದರು. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿರುವ ಭೂ ಅಕ್ರಮಗಳ ಆರೋಪಗಳನ್ನೂ ಪ್ರಸ್ತಾಪಿಸಿದ ಅವರು, ಬದರಿನಾಥ ದೇವಾಲಯದಲ್ಲಿಯೂ ಕಳ್ಳತನದ ಘಟನೆಗಳ ವರದಿಗಳಿವೆ ಎಂದು ಹೇಳಿ, ಧಾರ್ಮಿಕ ನಂಬಿಕೆಯ ದುರುಪಯೋಗವು ಪುನರಾವರ್ತಿತ ಮಾದರಿಯಾಗಿದೆ ಎಂದು ಆರೋಪಿಸಿದರು.

