HEALTH TIPS

West Bengal | ಬಾಲಕಿಯ ಅತ್ಯಾಚಾರ, ಕೊಲೆ: ಶಂಕಿತ ಆರೋಪಿಯನ್ನು ಥಳಿಸಿ ಹತ್ಯೆಗೈದ ಉದ್ರಿಕ್ತ ಗುಂಪು

ಕೋಲ್ಕತ್ತ: ಬರುಯಿಪುರದ ಸುರ್ಜಾಪುರ ಹಾತ್ ಸಮೀಪದ ಕೆರೆಯಲ್ಲಿ 12 ವರ್ಷದ ಶಾಲಾ ಬಾಲಕಿಯೊಬ್ಬಳ ಮೃತದೇಹವು ಪತ್ತೆಯಾಗಿದ್ದು, ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದ್ದು, 26 ವರ್ಷದ ಶಂಕಿತನನ್ನು ಉದ್ರಿಕ್ತ ಗುಂಪು ಥಳಿಸಿ ಹತ್ಯೆಗೈದಿದೆ ಎಂದು ವರದಿಯಾಗಿದೆ.

ಪ್ರತಿಭಟನೆಯಲ್ಲಿ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತನನ್ನು ಬಂಧಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಆರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ ಐಟಿ) ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಗಳನ್ನು ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಬಾಲಕಿ ಶನಿವಾರ ಸಂಜೆ ಸುಮಾರು 4 ಗಂಟೆಗೆ ತನ್ನ ಸ್ನೇಹಿತೆಯ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಲು ಮನೆಯಿಂದ ಹೊರಟಿದ್ದಳು. ಆದರೆ ಆಕೆ ಮನೆಗೆ ಮರಳಿ ಬಂದಿರಲಿಲ್ಲ. ಪೋಷಕರು ಹಾಗೂ ಸ್ಥಳೀಯರು ವ್ಯಾಪಕ ಹುಡುಕಾಟ ನಡೆಸಿದರೂ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ರವಿವಾರ ಬೆಳಿಗ್ಗೆ ಧೋಪಧೋಪಿ-2 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಆಕೆಯ ಮನೆಯ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕುತ್ತಿಗೆ ಹಿಸುಕಿ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬಾಲಕಿಯ ಕುಟುಂಬವು ದಾಖಲಿಸಿದ ಎಫ್‌ಐಆರ್ ನಲ್ಲಿ ಸ್ಥಳೀಯ ನಾಲ್ವರು ನಿವಾಸಿಗಳ ಹೆಸರನ್ನು ಉಲ್ಲೇಖಿಸಿದೆ.

ನಾಲ್ವರಿಂದ ಐವರು ಶಂಕಿತರು ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಹತ್ಯೆ ಮಾಡಿ ಮೃತದೇಹವನ್ನು ಬಿಸಾಡಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.

ಪೊಲೀಸರು ತೀವ್ರ ನಿರ್ಲಕ್ಷ್ಯ ತೋರಿದ್ದಾರೆ ಹಾಗೂ ತಡವಾಗಿ ಸ್ಪಂದಿಸಿದ್ದಾರೆ ಎಂದು ಆರೋಪಿಸಿ, ಸ್ಥಳೀಯರು ಸೀಲ್ದಾ-ನಾಮ್ಖಾನಾ ಸಮೀಪ ಪ್ರತಿಭಟನೆ ನಡೆಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದರು. ಮತ್ತೊಂದು ಗುಂಪು ಬರುಯಿಪುರ್-ಜಯನಗರ ರಸ್ತೆಯಲ್ಲಿ ಮರದ ದಿಮ್ಮಿಗಳು ಮತ್ತು ಟೈರ್ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದೆ. ಮೃತ ಬಾಲಕಿಯ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಆರಂಭದಲ್ಲಿ ಮೃತದೇಹವನ್ನು ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿದ್ದರಾದರೂ, ಕೊನೆಗೆ ಪೋಲೀಸರ ಮನವಿಗೆ ಸ್ಪಂದಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಗೊಂದಲದ ನಡುವೆ ಪ್ರತಿಭಟನಾಕಾರರು ಶಂಕಿತರಲ್ಲಿ ಒಬ್ಬನಾದ ಇಂದ್ರಜಿತ್ ತಾಂತಿಯ ಮೇಲೆ ಹಲ್ಲೆ ನಡೆಸಿದ್ದು, ತಾನು ನಿರಪರಾಧಿ ಎಂಬ ಮನವಿಗೆ ಪ್ರತಿಭಟನಾಕಾರರು ಕಿವಿಗೊಡಲಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆ ಸಿಬ್ಬಂದಿ ಮಧ್ಯಪ್ರವೇಶಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಹೆಚ್ಚುವರಿ ಪಡೆ ಆಗಮಿಸಿದ ಬಳಿಕ ಪೊಲೀಸರು ಇಂದ್ರಜಿತ್ ತಂತಿಯನ್ನು ರಕ್ಷಿಸಿದರೂ, ಗಂಭೀರ ಗಾಯಗೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

ಘರ್ಷಣೆಯ ವೇಳೆ ಗುಂಪಿನ ವಶದಲ್ಲಿದ್ದ ಮತ್ತೊಬ್ಬ ಶಂಕಿತ ಆರೋಪಿ ಪ್ರಭಾಶ್ ಮಂಡಲ್ ಎಂಬಾತನನ್ನು ರಕ್ಷಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು, ವಿಚಾರಣೆ ಬಳಿಕ ಬಂಧಿಸಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬಾಲಕಿಯ ತಂದೆಗೆ ದೂರವಾಣಿ ಕರೆ ಮಾಡಿದ್ದು ಮಂಗಳವಾರ ಭೇಟಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಬಾಲಕಿಯ ತಂದೆಯು, ಪೊಲೀಸರಿಗೆ ತಮ್ಮ ಕೆಲಸ ಮಾಡಲು ಅವಕಾಶ ನೀಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ.

ಪೊಲೀಸರೂ ಧ್ವನಿವರ್ಧಕಗಳ ಮೂಲಕ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಪ್ರೆಸಿಡೆನ್ಸಿ ರೇಂಜ್ ಭಾಗದ ಐಜಿಪಿ ಕಂಕರ್ ಪ್ರಸಾದ್ ಬರುಯಿ, "ಈ ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನೂ ಬಂಧಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದ ಯಾರೊಬ್ಬರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ದಯವಿಟ್ಟು ನಮಗೆ ಸಹಕರಿಸಿ," ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸ್ಥಳದಿಂದ ಚದುರಿದ್ದಾರೆ ಎಂದು ತಿಳಿದುಬಂದಿದೆ. ಕೊನೆಗೆ ಪ್ರತಿಭಟನಾಕಾರರು ಮಧ್ಯಾಹ್ನ ರಸ್ತೆ ಹಾಗೂ ರೈಲು ತಡೆಗಳನ್ನು ತೆರವುಗೊಳಿಸಿದ ಬಳಿಕ ರೈಲು ಸಂಚಾರ ಪುನರಾರಂಭವಾಗಿದೆ.

ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಾಟಾಪುಕೂರ್ ನಲ್ಲಿ ನಡೆಸಲಾಗಿದೆ.

ಗಲಭೆಯ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್‌ಐಆರ್ ದಾಖಲಾಗಿದ್ದು, ಗುಂಪು ಹಲ್ಲೆ ನಡೆಸಿ ಶಂಕಿತನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಎಫ್‌ಐಆರ್ ಕೂಡ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries