HEALTH TIPS

ಪಾಕಿಸ್ತಾನ ಮೂಲದ ಜೆಇಎಂ, ಎಲ್‌ಇಟಿಗೆ ಸೇರಿದ 23 ಕಾರ್ಯಕರ್ತರನ್ನು UAPA ಅಡಿಯಲ್ಲಿ ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಜೈಶ್‌-ಎ-ಮೊಹಮ್ಮದ್‌ (ಜೆಇಎಂ), ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ) ಮತ್ತು ಇತರ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಪಾಕಿಸ್ತಾನ ಮೂಲದ 23 ಮಂದಿಯನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಘೋಷಿಸಿದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವವರೂ ಸೇರಿದಂತೆ 23 ಪಾಕಿಸ್ತಾನ ಮೂಲದ ಭಯೋತ್ಪಾದಕರ ಹೆಸರನ್ನು UAPA ಕಾಯ್ದೆಯ ನಾಲ್ಕನೇ ಅನುಸೂಚಿಗೆ ಸೇರಿಸಲಾಗಿದೆ. ಇದರೊಂದಿಗೆ UAPA ಅಡಿಯಲ್ಲಿ ಗುರುತಿಸಲಾದ ಭಯೋತ್ಪಾದಕರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ-1967ರ ಪ್ರಕಾರ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ವ್ಯಕ್ತಿಗಳನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ.

ಒಬ್ಬ ವ್ಯಕ್ತಿಯ ಹೆಸರನ್ನು ಈ ಪಟ್ಟಿಗೆ ಸೇರಿಸಿದ ಬಳಿಕ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನ ಹಣಕಾಸು ವ್ಯವಹಾರಗಳನ್ನು ನಿರ್ಬಂಧಿಸಬಹುದು. ಅಲ್ಲದೆ, ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಮಾರಾಟದ ಮೇಲೆ ನಿರ್ಬಂಧ ಹೇರಲು ಹಾಗೂ ಆತನ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಅವಕಾಶ ದೊರೆಯುತ್ತದೆ.

2019ರ ತಿದ್ದುಪಡಿಯ ನಂತರ, ಭಯೋತ್ಪದಕ ಸಂಘಟನೆಗಳಷ್ಟೇ ಅಲ್ಲದೆ ವ್ಯಕ್ತಿಗತವಾಗಿ ಭಯೋತ್ಪಾದಕರ ಹೆಸರನ್ನೂ ಯುಎಪಿಎ ಅಡಿಯಲ್ಲಿ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಸಂಘಟನೆಗಳನ್ನು ಮಾತ್ರ ಪಟ್ಟಿಗೆ ಸೇರಿಸಲಾಗುತ್ತಿತ್ತು.

ಜೈಶ್‌-ಎ-ಮೊಹಮ್ಮದ್‌ಗೆ ಸೇರಿದ ಮಸೂದ್ ಇಲ್ಯಾಸ್ ಕಾಶ್ಮೀರಿ, ಮೊಹಮ್ಮದ್ ಮುಸಾದಿಕ್ ಅಲಿಯಾಸ್ ಡಾಕ್ಟರ್, ಮುಫ್ತಿ ಮುಹಮ್ಮದ್ ಅಸ್ಗರ್ ಖಾನ್ ಅಲಿಯಾಸ್ ಅಬು ಸಾದ್, ಹಫೀಝ್ ಅಬ್ದುಲ್ ಶಕೂರ್ ಅಲಿಯಾಸ್ ಖಾರಿ ಜರ್ರಾರ್, ಅಬ್ದುಲ್ಲಾ ಜೆಹಾದಿ, ಗುಲಾಮ್ ಫರೀದ್, ಮೌಲಾನಾ ಇಮ್ದಾದ್ ಉಲ್ಲಾ ಮಕ್ಕಿ ಮತ್ತು ವಸೀಮ್ ನೂರ್ ಜಾಟ್ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ.

ಅದೇ ರೀತಿ, ಲಷ್ಕರ್‌-ಎ-ತೊಯ್ಬಾಗೆ ಸೇರಿದ ಫಿರ್ದೌಸ್ ಅಹ್ಮದ್ ಭಟ್, ಹರೂನ್ ರಶೀದ್ ಗನೈ, ಬಿಲಾಲ್ ಅಹ್ಮದ್ ಮಿರ್, ಅಬಿದ್ ಕ್ಯುಯೂಮ್ ಲೋನ್, ನಜೀರ್ ಅಹ್ಮದ್ ಗುಜ್ಜರ್, ಅಬ್ದುಲ್ ರೌಫ್ ಅಲಿಯಾಸ್ ಹಫೀಜ್ ಅಬ್ದುಲ್ ರೌಫ್, ಅಶ್ಫಾಕ್ ಅಹ್ಮದ್, ಹಫೀಜ್ ಖಾಲಿದ್ ವಲೀದ್, ಮೌಲಾನಾ ಯೂಬುಲ್ಲಾ ಸೈಫುಲ್ಲಾ, ಮೌಲಾನಾ ಸೈಫುಲ್ಲಾ ತೈಬಿ, ಓವೈಸ್ ಫರೂಜ್, ಕ್ವಾರಿ ಯಾಕೂಬ್ ಶೇಖ್ ಮತ್ತು ರಾಣಾ ಇಫ್ತಿಕರ್ ಅವರ ಹೆಸರನ್ನೂ ಸೇರಿಸಲಾಗಿದೆ.

ಇದಲ್ಲದೆ, ಅಲ್ ಖೈದಾ ಮತ್ತು ಐಸಿಸ್ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿರುವುದಾಗಿ ಹೇಳಲಾಗಿರುವ ಮೊಹಮ್ಮದ್ ಶಹೀದ್ ಫೈಸಲ್ ನ ಹೆಸರನ್ನೂ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries