ನವದೆಹಲಿ: ಕಾನೂನುಬಾಹಿರ ಬಂಧನ ಸೇರಿದಂತೆ ಜೀವನ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಪ್ರಕರಣಗಳಲ್ಲಿ ನಾಗರಿಕರು ನಿಯಮಿತ ಕೆಲಸದ ಸಮಯವನ್ನು ಮೀರಿ ನ್ಯಾಯಾಲಯಗಳನ್ನು ಸಂಪರ್ಕಿಸಲು ಅನುವು ಮಾಡಿಕೊಡಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (ಎಸ್‌ಒಪಿ) ರೂಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಈ ಸಂಬಂಧ ವಕೀಲ ಮಹೇರವಿಶ್ ರೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಲ್ಯ ಬಾಗ್ಚಿ ಮತ್ತು ವಿ ಮೋಹನ ಅವರನ್ನೊಳಗೊಂಡ ಪೀಠವು ಹೈಕೋರ್ಟ್‌ಗಳಿಗೆ ನೋಟಿಸ್ ನೀಡಿದೆ. ಇದೇ ವೇಳೆ, ತುರ್ತು ಅಲ್ಲದ ಪ್ರಕರಣಗಳನ್ನು ಸಹ ಆಲಿಸಲು ನ್ಯಾಯಾಲಯಗಳ 24/7 ಲಭ್ಯತೆಯನ್ನು ದುರುಪಯೋಗಪಡಿಸಿಕೊಳ್ಳಬಹುದೇ ಎಂದು ಅರ್ಜಿ ವಿಚಾರಣೆ ಸಮಯದಲ್ಲಿ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಎಸ್‌ಒಪಿ ಸಿದ್ಧಪಡಿಸುವ ಕಾರ್ಯವನ್ನು ಸುಪ್ರೀಂ ಕೋರ್ಟ್ ನ್ಯಾಯಾಂಗದ ಕಡೆಯಿಂದಲ್ಲದೆ, ಕಾರ್ಯಾಂಗದ ಕಡೆಯಿಂದ ಕೈಗೊಳ್ಳಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.
ವಾರಾಂತ್ಯ ಅಥವಾ ರಜಾದಿನಗಳಲ್ಲಿ ತಡರಾತ್ರಿ ಬಂಧನ, ಬೆಳ್ಳಂ ಬೆಳಗ್ಗೆ ಅಕ್ರಮ ಕಟ್ಡಡ ನೆಲಸಮ ಕಾರ್ಯಾಚರಣೆ ಮತ್ತು ಗಡೀಪಾರು ಮುಂತಾದ ಸಂದರ್ಭಗಳಲ್ಲಿ ತುರ್ತು ನ್ಯಾಯಾಲಯದ ಮೊರೆಹೋಗಬೇಕಾದ ಅಗತ್ಯವಿದೆ ಎಂದು ಅರ್ಜಿದಾರರು ವಾದಿಸಿದರು.
ಇಂತಹ ಸಂದರ್ಭಗಳಲ್ಲಿ ನ್ಯಾಯಾಯಗಳ ಲಭ್ಯತೆ ಇಲ್ಲದೇ ಇರುವುದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನ್ಯಾಯಾಲಯಗಳ ಪ್ರಸ್ತುತ ಸಾಂಸ್ಥಿಕ ಚೌಕಟ್ಟು, ಗೊತ್ತುಪಡಿಸಿದ ಸಮಯ, ಕೆಲಸದ ದಿನಗಳು ಮತ್ತು ಸೀಮಿತ ರಜಾ ಪೀಠಗಳ ಮಿತಿಯು ಜನರಿಗೆ ಎಲ್ಲ ಸಮಯದಲ್ಲೂ ನ್ಯಾಯಾಂಗ ಪ್ರವೇಶವನ್ನು ನಿರ್ಬಂಧಿಸುತ್ತದೆ ಎಂದೂ ವಾದಿಸಲಾಗಿದೆ.

