ವಾಷಿಂಗ್ಟನ್: ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಈ ಬಾರಿ ಇತಿಹಾಸದ ಪುಟಗಳಲ್ಲಿ ದಾಖಲಾಗಬೇಕಿತ್ತು. ಈ ವಿಶೇಷ ಆಚರಣೆಗೆ ದೇಶದಾದ್ಯಂತ ಹಲವು ವರ್ಷಗಳಿಂದ ಸಿದ್ಧತೆಗಳು ನಡೆದಿದ್ದವು. ಸ್ವಾತಂತ್ರ್ಯದ ಘೋಷಣಾಪತ್ರಕ್ಕೆ ಸಹಿ ಹಾಕಲಾದ ಫಿಲಡೆಲ್ಫಿಯಾದಿಂದ ಹಿಡಿದು ರಾಜಧಾನಿ ವಾಷಿಂಗ್ಟನ್‌ವರೆಗೆ ಭವ್ಯ ಮೆರವಣಿಗೆಗಳು, ಸಂಗೀತ ಕಾರ್ಯಕ್ರಮಗಳು, ರಾಜ್ಯಮಟ್ಟದ ಉತ್ಸವಗಳು ಮತ್ತು ವಿಶೇಷ ಪ್ರದರ್ಶನಗಳು ನಡೆಯಬೇಕಾಗಿತ್ತು.
ಆದರೆ ಪ್ರಕೃತಿಯೇ ಈ ಸಂಭ್ರಮಕ್ಕೆ ಅಡ್ಡಿಯಾಗಿದೆ!.
ದೇಶದ ಪೂರ್ವ ಮತ್ತು ಮಧ್ಯ ಭಾಗವನ್ನು ಆವರಿಸಿರುವ ದಾಖಲೆಯ ಬಿಸಿಗಾಳಿಯಿಂದಾಗಿ ಪ್ರಮುಖ ಕಾರ್ಯಕ್ರಮಗಳು ರದ್ದಾಗಿವೆ. ಕೆಲವು ಕಾರ್ಯಗಳು ಮುಂದೂಡಲ್ಪಟ್ಟಿವೆ. ಸುಮಾರು 18 ಕೋಟಿ ಜನರು ತೀವ್ರ ಉಷ್ಣಾಂಶ ಎಚ್ಚರಿಕೆಯ ವ್ಯಾಪ್ತಿಗೆ ಬಂದಿದ್ದು, ಮಧ್ಯಾಹ್ನದ ವೇಳೆಯಲ್ಲಿ ಅನಗತ್ಯವಾಗಿ ಹೊರಗೆ ಬರದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
1776ರ ಜುಲೈ 4ರಂದು ಸ್ವಾತಂತ್ರ್ಯದ ಘೋಷಣಾಪತ್ರಕ್ಕೆ ಸಹಿ ಹಾಕಿದ ದಿನಕ್ಕೆ ಈ ವರ್ಷ 250 ವರ್ಷಗಳು ಪೂರ್ಣಗೊಂಡಿವೆ. ಇದೇ ಕಾರಣಕ್ಕೆ ಈ ಬಾರಿಯ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕ ಸರ್ಕಾರ ಹಾಗೂ ವಿವಿಧ ರಾಜ್ಯಗಳು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದವು. ಆದರೆ 40 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ಮತ್ತು ಅದಕ್ಕಿಂತಲೂ ಹೆಚ್ಚು ಅನುಭವವಾಗುತ್ತಿದ್ದ ಉಷ್ಣಾಂಶವು ಹಲವು ನಗರಗಳ ಯೋಜನೆಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿವೆ.
ಸ್ವಾತಂತ್ರ್ಯದ ತೊಟ್ಟಿಲಿನಲ್ಲೇ ಐತಿಹಾಸಿಕ ಮೆರವಣಿಗೆ ರದ್ದು
ಸ್ವಾತಂತ್ರ್ಯದ ಘೋಷಣಾಪತ್ರಕ್ಕೆ ಸಹಿ ಹಾಕಲಾದ ಫಿಲಡೆಲ್ಫಿಯಾದಲ್ಲಿ ಈ ಬಾರಿ ನಗರದ ಇತಿಹಾಸದಲ್ಲೇ ಅತಿ ದೊಡ್ಡ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಯಬೇಕಿತ್ತು. 50ಕ್ಕೂ ಹೆಚ್ಚು ಮರ್ಚಿಂಗ್ ಬ್ಯಾಂಡ್‌ಗಳು, ಸುಮಾರು 20 ಸ್ತಬ್ಧಚಿತ್ರ ವಾಹನಗಳು, ಸಾವಿರಾರು ಕಲಾವಿದರು ಹಾಗೂ ಸಂಘಟನೆಗಳು ಭಾಗವಹಿಸಲು ಸಿದ್ಧವಾಗಿದ್ದವು. ಮಧ್ಯಾಹ್ನ ಆರಂಭವಾಗಬೇಕಿದ್ದ ಮೆರವಣಿಗೆಯನ್ನು ಮೊದಲು ಮುಂದೂಡಲಾಗಿತ್ತು. ಆದರೆ ಗರಿಷ್ಠ ತಾಪಮಾನ ಸುಮಾರು 40 ಡಿಗ್ರಿ ಸೆಲ್ಸಿಯಸ್ ತಲುಪುವ ಹಾಗೂ ತೇವಾಂಶದಿಂದ ಅದು 44 ಡಿಗ್ರಿ ಸೆಲ್ಸಿಯಸ್‌ನಷ್ಟು ಅನುಭವವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಆಯೋಜಕರು ಮೆರವಣಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದಾರೆ.
ನಗರದ ಇತಿಹಾಸದಲ್ಲೇ ಅತಿ ದೊಡ್ಡ ಸ್ವಾತಂತ್ರ್ಯೋತ್ಸವ ಮೆರವಣಿಗೆಯೆಂದು ಪರಿಗಣಿಸಲಾಗಿದ್ದ ಈ ಕಾರ್ಯಕ್ರಮ ಕೊನೆಯ ಕ್ಷಣದಲ್ಲಿ ಕೈಬಿಡಬೇಕಾದದ್ದು ಅನೇಕ ಮಂದಿಗೆ ನಿರಾಸೆ ಮೂಡಿಸಿದೆ.
ರಾಜಧಾನಿಗೂ ಬಿಸಿಯ ಬಿಸಿ
ವಾಷಿಂಗ್ಟನ್‌ನ ಇಂಡಿಪೆಂಡೆನ್ಸ್ ಅವೆನ್ಯೂನಲ್ಲಿ ಪ್ರತಿವರ್ಷ ನಡೆಯುವ ಸ್ವಾತಂತ್ರ್ಯೋತ್ಸವ ಮೆರವಣಿಗೆಯನ್ನೂ ಇದೇ ಕಾರಣಕ್ಕೆ ರದ್ದುಪಡಿಸಲಾಗಿದೆ. ಬ್ಯಾಂಡ್‌ಗಳು, ಸ್ತಬ್ಧಚಿತ್ರ ವಾಹನಗಳು, ಬೃಹತ್ ಬಲೂನುಗಳು ಮತ್ತು ಸಾವಿರಾರು ಪ್ರೇಕ್ಷಕರನ್ನು ಸೆಳೆಯುವ ಈ ಮೆರವಣಿಗೆ ಶನಿವಾರ ಬೆಳಿಗ್ಗೆ ಆರಂಭವಾಗಬೇಕಿತ್ತು. ಆದರೆ ಸುಮಾರು 39 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ 43 ಡಿಗ್ರಿ ಸೆಲ್ಸಿಯಸ್‌ನಷ್ಟು ಅನುಭವವಾಗುವ ಬಿಸಿಯ ಮುನ್ಸೂಚನೆ ಹಿನ್ನೆಲೆಯಲ್ಲಿ ಆಯೋಜಕರು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ಕೈಬಿಟ್ಟಿದ್ದಾರೆ.
ಟ್ರಂಪ್ ಮಹತ್ವಾಕಾಂಶಿ ಕಾರ್ಯಕ್ರಮಕ್ಕೂ ಅಡ್ಡಿ
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ 'ಗ್ರೇಟ್ ಅಮೆರಿಕನ್ ಸ್ಟೇಟ್ ಫೇರ್' ಕೂಡ ಬಿಸಿಗಾಳಿಯಿಂದ ಹಿನ್ನಡೆ ಅನುಭವಿಸಿದೆ. ವಾಷಿಂಗ್ಟನ್‌ನ ನ್ಯಾಷನಲ್ ಮಾಲ್‌ನಲ್ಲಿ ಬೆಳಿಗ್ಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಂಜೆ ವೇಳೆಗೆ ಮುಂದೂಡಲಾಗಿದೆ. ಮಧ್ಯಾಹ್ನಕ್ಕೆ ತಾಪಮಾನ ಸುಮಾರು 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಅನುಭವವಾಗುತ್ತಿದ್ದ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ದಾಟಿತ್ತು.
'ನಮ್ಮ ಅತಿಥಿಗಳು, ಸ್ವಯಂಸೇವಕರು, ಕಲಾವಿದರು, ವ್ಯಾಪಾರಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಕಾರ್ಯಕ್ರಮ ಮುಂದುವರಿಯಲಿದೆ' ಎಂದು ಆಯೋಜಕರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
18 ಕೋಟಿ ಜನರಿಗೆ ಎಚ್ಚರಿಕೆ
ಒಹಿಯೊದಿಂದ ನ್ಯೂಯಾರ್ಕ್‌ವರೆಗೆ ಹಾಗೂ ದಕ್ಷಿಣದಲ್ಲಿ ಜಾರ್ಜಿಯಾ ರಾಜ್ಯದವರೆಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಬಿಸಿಗಾಳಿ ತೀವ್ರವಾಗಿದೆ. ಹಲವು ನಗರಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಸಮೀಪ ದಾಖಲಾಗುತ್ತಿದ್ದು, ಲಕ್ಷಾಂತರ ಜನರು ಶೀತಲೀಕರಣ ಕೇಂದ್ರಗಳು, ಸಾರ್ವಜನಿಕ ಕಟ್ಟಡಗಳು ಹಾಗೂ ಒಳಾಂಗಣ ಸ್ಥಳಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಸ್ವಾತಂತ್ರ್ಯೋತ್ಸವದ ದಿನವೂ ನ್ಯೂಯಾರ್ಕ್, ವಾಷಿಂಗ್ಟನ್ ಹಾಗೂ ಫಿಲಡೆಲ್ಫಿಯಾ ಸೇರಿದಂತೆ ಹಲವು ನಗರಗಳಲ್ಲಿ ಉಷ್ಣಾಂಶದಲ್ಲಿ ಹೆಚ್ಚಿನ ಇಳಿಕೆ ಕಂಡುಬರುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಥ್ರೋಪಿಕ್‌ನ ಫೇಬಲ್ 5, ಮಿಥೋಸ್ 5 ಎಐ ಮಾದರಿಗಳ ಮೇಲಿನ ಅಮೆರಿಕ ನಿರ್ಬಂಧ ರದ್ದು
ವಿದ್ಯುತ್ ಜಾಲಕ್ಕೂ ಸಂಕಷ್ಟ
ಬಿಸಿಗಾಳಿಯಿಂದ ಏರ್‌ಕಂಡೀಷನರ್‌ಗಳ ಬಳಕೆ ಗಣನೀಯವಾಗಿ ಹೆಚ್ಚಿದ ಪರಿಣಾಮ ಅಮೆರಿಕದ ಅತಿದೊಡ್ಡ ವಿದ್ಯುತ್ ಜಾಲದ ಮೇಲೂ ಭಾರಿ ಒತ್ತಡ ಉಂಟಾಗಿದೆ.
ವಿದ್ಯುತ್ ಬೇಡಿಕೆ ಶುಕ್ರವಾರ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುವುದರಿಂದ ಉತ್ಪಾದಕರು ಸಂಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್ ಪೂರೈಕೆ ಖಚಿತಪಡಿಸಿಕೊಳ್ಳಬೇಕು ಎಂದು 13 ಮಧ್ಯ ಅಟ್ಲಾಂಟಿಕ್ ರಾಜ್ಯಗಳು ಹಾಗೂ ವಾಷಿಂಗ್ಟನ್ ಡಿ.ಸಿಗೆ ವಿದ್ಯುತ್ ಪೂರೈಸುವ ದೇಶದ ಅತಿದೊಡ್ಡ ವಿದ್ಯುತ್ ಜಾಲದ ನಿರ್ವಾಹಕ ಸಂಸ್ಥೆ ಎಚ್ಚರಿಕೆ ನೀಡಿತ್ತು.
ನ್ಯೂಯಾರ್ಕ್‌ನ ಕ್ವೀನ್ಸ್ ಪ್ರದೇಶದಲ್ಲಿ ಉಪಕರಣಗಳು ಅತಿಯಾಗಿ ಬಿಸಿಯಾಗಿದ್ದರಿಂದ ಹಾಗೂ ವಿದ್ಯುತ್ ಬೇಡಿಕೆ ಹೆಚ್ಚಿದ ಪರಿಣಾಮ ಸುಮಾರು 9,800 ಗ್ರಾಹಕರಿಗೆ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ಓಝೋನ್ ಪಾರ್ಕ್ ಮತ್ತು ರಿಚ್‌ಮಂಡ್ ಹಿಲ್ ಪ್ರದೇಶದ ನಿವಾಸಿಗಳಿಗೆ ಪರಿಹಾರವಾಗಿ ಡ್ರೈ ಐಸ್ (ಘನೀಕೃತ ಇಂಗಾಲದ ಡೈಆಕ್ಸೈಡ್) ವಿತರಿಸಲಾಗಿದೆ.
ಮೆರವಣಿಗೆಗಳು ರದ್ದು
ಫಿಲಡೆಲ್ಫಿಯಾ ಮಾತ್ರವಲ್ಲದೆ ಪೆನ್ಸಿಲ್ವೇನಿಯಾದ ನಾರಿಸ್ಟೌನ್, ಡೆಲಾವೇರ್‌ನ ಬೆಥನಿ ಬೀಚ್, ವರ್ಜೀನಿಯಾದ ಲವೆಟ್ಸ್‌ವಿಲ್ ಸೇರಿದಂತೆ ಹಲವು ನಗರಗಳಲ್ಲಿ ಜುಲೈ 4ರ ಮೆರವಣಿಗೆಗಳು ರದ್ದಾಗಿವೆ.
'ಈ ಮೆರವಣಿಗೆ ನಮ್ಮ ಸಮುದಾಯದ ಅತ್ಯಂತ ಪ್ರೀತಿಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇದನ್ನು ರದ್ದುಪಡಿಸಿರುವುದು ಬೇಸರದ ಸಂಗತಿ. ಆದರೆ ಕುಟುಂಬಗಳು, ಮೆರವಣಿಗೆಯಲ್ಲಿ ಭಾಗವಹಿಸುವವರು ಹಾಗೂ ತುರ್ತುಸೇವಾ ಸಿಬ್ಬಂದಿಯ ಸುರಕ್ಷತೆಯೇ ಮೊದಲ ಆದ್ಯತೆ' ಎಂದು ನಾರಿಸ್ಟೌನ್‌ನ ಮಧ್ಯಂತರ ಆಡಳಿತಾಧಿಕಾರಿ ಜೇನ್ ಮುಸೊನಿ ಹೇಳಿದ್ದಾರೆ.
ಸಂಜೆ ವೇಳೆಗೆ ತಾಪಮಾನ ಸ್ವಲ್ಪ ಇಳಿಯುವ ನಿರೀಕ್ಷೆಯಿದ್ದ ಕಾರಣ ಬಹುತೇಕ ನಗರಗಳು ಪಟಾಕಿ ಪ್ರದರ್ಶನಗಳು ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನಿಗದಿಯಂತೆ ನಡೆಸಲು ತೀರ್ಮಾನಿಸಿವೆ. ಬಾಸ್ಟನ್‌ನ ಪ್ರಸಿದ್ಧ 'ಬಾಸ್ಟನ್ ಪಾಪ್ಸ್ ಫೈರ್‌ವರ್ಕ್ಸ್ ಸ್ಪೆಕ್ಟಾಕ್ಯುಲರ್' ಕಾರ್ಯಕ್ರಮದ ಪ್ರವೇಶ ಸಮಯವನ್ನು ಮಾತ್ರ ಬದಲಾಯಿಸಲಾಗಿದೆ.
1863ರ ಗೆಟಿಸ್‌ಬರ್ಗ್ ಯುದ್ಧದ 163ನೇ ವಾರ್ಷಿಕೋತ್ಸವದ ಅಂಗವಾಗಿ ಪೆನ್ಸಿಲ್ವೇನಿಯಾದ ರಾಷ್ಟ್ರೀಯ ಸ್ಮಾರಕ ಉದ್ಯಾನದಲ್ಲಿ ನಡೆಯಬೇಕಿದ್ದ ಹೊರಾಂಗಣ ಕಾರ್ಯಕ್ರಮಗಳನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಶಾಂತಿ ಮಾತುಕತೆ ವೇಳೆ ಅರಾಘ್ಚಿ, ಖಾಲೀಬಾಫ್ ಹತ್ಯೆಗೆ ಇಸ್ರೇಲ್ ಸಂಚು: ಅಮೆರಿಕ ಶಂಕೆ
ರೈಲು ನೋಡಲು ಬಂದವರು ಅಸ್ವಸ್ಥ
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ಸಂಚರಿಸುತ್ತಿರುವ ಯೂನಿಯನ್ ಪೆಸಿಫಿಕ್‌ನ ಐತಿಹಾಸಿಕ ಉಗಿ ಎಂಜಿನ್ 'ಬಿಗ್ ಬಾಯ್ ನಂ. 4014' ರೈಲು ಪೆನ್ಸಿಲ್ವೇನಿಯಾದ ರೀಡಿಂಗ್ ನಗರಕ್ಕೆ ಆಗಮಿಸುತ್ತಿದ್ದಂತೆ ಅದನ್ನು ನೋಡಲು ಸಾವಿರಾರು ಜನ ರೈಲು ನಿಲ್ದಾಣದಲ್ಲಿ ಸೇರಿದ್ದರು.
ಆದರೆ ತೀವ್ರ ಬಿಸಿಗಾಳಿಯ ನಡುವೆ ಗಂಟೆಗಟ್ಟಲೆ ಕಾಯುತ್ತಿದ್ದವರಲ್ಲಿ 100ಕ್ಕೂ ಹೆಚ್ಚು ಮಂದಿ ಬಿಸಿಲಿನ ಅಸ್ವಸ್ಥತೆಗೆ ಒಳಗಾದರು. ಸ್ಥಳೀಯ ತುರ್ತು ವೈದ್ಯಕೀಯ ಸೇವೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ 'ತುರ್ತು ಸ್ಥಿತಿ' ಘೋಷಿಸಿ, ಸುತ್ತಮುತ್ತಲಿನ ಜಿಲ್ಲೆಗಳಿಂದ ಹೆಚ್ಚುವರಿ ವೈದ್ಯಕೀಯ ನೆರವು ಕೋರಬೇಕಾಯಿತು.
ಅಸ್ವಸ್ಥರಾದವರಲ್ಲಿ 45 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರಿಗೆ ಹೃದಯ ಸ್ತಂಭನವಾಗಿತ್ತು. ಚಿಕಿತ್ಸೆ ಪಡೆದವರಲ್ಲಿ ಶಿಶುಗಳಿಂದ ಹಿಡಿದು ವೃದ್ಧರವರೆಗಿನವರು ಇದ್ದಾರೆ ಈ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಿಸ್ಸಿಸಿಪಿಯ ಜಾಕ್ಸನ್‌ನಲ್ಲಿ 74 ವರ್ಷದ ವ್ಯಕ್ತಿಯೊಬ್ಬರು ತೀವ್ರ ಬಿಸಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದಂತೆ ನಗರದಾದ್ಯಂತ ತೆರೆಯಲಾದ ಸುಮಾರು 200 ಶೀತಲೀಕರಣ ಕೇಂದ್ರಗಳಲ್ಲಿ ಜನರು ಆಶ್ರಯ ಪಡೆದರು.
ಈ ವಿಶೇಷ ಸ್ವಾತಂತ್ರ್ಯೋತ್ಸವವನ್ನು ಅಮೆರಿಕವು ಇತಿಹಾಸದ ಸಂಭ್ರಮವಾಗಿ ಆಚರಿಸಲು ಸಜ್ಜಾಗಿತ್ತು. ಆದರೆ ಈ ಬಾರಿ ದೇಶದಾದ್ಯಂತ ಪಟಾಕಿ, ಮೆರವಣಿಗೆ ಮತ್ತು ಉತ್ಸವಗಳಷ್ಟೇ ಅಲ್ಲ, ದಾಖಲೆಯ ಬಿಸಿಗಾಳಿಯೂ ಅಷ್ಟೇ ದೊಡ್ಡ ಸುದ್ದಿಯಾಯಿತು.
ಆಧಾರ: ರಾಯಿಟರ್ಸ್, ಅಸೋಸಿಯೇಟೆಡ್ ಪ್ರೆಸ್, ಎಎಫ್‌ಪಿ, ದಿ ನ್ಯೂಯಾರ್ಕ್ ಟೈಮ್ಸ್

