ಜೆರುಸಲೆಮ್: ಶಾಂತಿ ಮಾತುಕತೆ ವೇಳೆ ಇರಾನ್‌ನ ಹಿರಿಯ ಸಂಧಾನಕಾರರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಇಸ್ರೇಲ್ ಯೋಜನೆ ರೂಪಿಸಿದೆ ಎಂಬ ಅಮೆರಿಕ ಮಾಧ್ಯಮದ ವರದಿಯನ್ನು ಇಸ್ರೇಲ್ ತಳ್ಳಿಹಾಕಿದೆ.
ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಇರಾನ್ ಸಂಧಾನಕಾರರ ಕುರಿತು ಪ್ರಕಟಿಸಿರುವ ವರದಿ ವಾಸ್ತವಕ್ಕೆ ದೂರವಾದ ಮತ್ತು ಸಂಪೂರ್ಣ ಕಲ್ಪಿತ ಎಂದು ಇಸ್ರೇಲ್ ಕಿಡಿಕಾರಿದೆ.
ವರದಿ ಪ್ರಕಟವಾದ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಸಾಮಾಜಿಕ ಮಾಧ್ಯಮ 'ಎಕ್ಸ್' ತಾಣದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಕದನ ವಿರಾಮ ಮತ್ತು ಶಾಂತಿ ಮಾತುಕತೆಗೆ ಬರುವ ಇರಾನ್ ಸಂಧಾನಕಾರರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.
ಅಮೆರಿಕ ಮಾಧ್ಯಮದ ವರದಿಯಲ್ಲೇನಿದೆ?
ಅಮೆರಿಕ ಮತ್ತು ಇರಾನ್ ಮಾತುಕತೆ ಸಂದರ್ಭದಲ್ಲಿ ಇರಾನ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಹತ್ಯೆ ಮಾಡಲು ಇಸ್ರೇಲ್ ಯೋಜನೆ ರೂಪಿಸಿರಬಹುದು ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಶಂಕಿಸಿದ್ದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಇದನ್ನು ಅಮೆರಿಕದ ಮಾಜಿ ಮಿಲಿಟರಿ ಅಧಿಕಾರಿಗಳು ಬೆಂಬಲಿಸಿದ್ದರು.
ವರದಿಯಲ್ಲಿ ಉಲ್ಲೇಖಿಸಲಾದ ಇರಾನ್‌ನ ಆ ಇಬ್ಬರು ಪ್ರಮುಖ ನಾಯಕರೆಂದರೆ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್. ಇವರಿಬ್ಬರೂ ಕದನ ವಿರಾಮ ಮತ್ತು ವಿಸ್ತೃತ ಶಾಂತಿ ಒಪ್ಪಂದದ ಮಾತುಕತೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಕಳೆದ ಏಪ್ರಿಲ್‌ನಲ್ಲಿ ಕದನ ವಿರಾಮ ಮಾತುಕತೆಗಳು ಪ್ರಾರಂಭವಾದಾಗ ಅಮೆರಿಕದ ಆತಂಕ ಮತ್ತಷ್ಟು ಹೆಚ್ಚಾಯಿತು ಎಂದು ವರದಿ ಹೇಳಿದೆ. ಇರಾನ್ ನಾಯಕರನ್ನು ಹತ್ಯೆ ಮಾಡಲು ಇಸ್ರೇಲ್ ಯಾವುದೇ ಪ್ರಯತ್ನ ನಡೆಸಿದರೂ, ಅದು ಶಾಂತಿ ಮಾತುಕತೆಗೆ ತೊಂದರೆಯಾಗಬಹುದು ಹಾಗೂ ಯುದ್ಧ ಮುಂದುವರಿಯುವುದಕ್ಕೂ ಕಾರಣವಾಗಬಹುದು ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿತ್ತು.
ಸೈಯದ್ ಅಬ್ಬಾಸ್ ಅರಾಗ್ಚಿ ಮತ್ತು ಮೊಹಮ್ಮದ್ ಬಾಖಿರ್ ಖಾಲೀಬಾಫ್ ಮೇಲೆ ದಾಳಿಯಾಗುವ ಸಾಧ್ಯತೆಯಿದೆ ಎಂಬ ಬಗ್ಗೆ ಇರಾನ್‌ಗೆ ಮುನ್ನೆಚ್ಚರಿಕೆ ನೀಡುವಂತೆ ಅಮೆರಿಕ ಇರಾನ್‌ನ ಆಪ್ತರಿಗೆ ತಿಳಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.

