HEALTH TIPS

ಅಧಿಕೃತ ಅನುಮತಿಯಿಲ್ಲದೆ ಮನೆಗಳನ್ನು ಧ್ವಂಸ, ಕಾರ್ಯಾಚರಣೆಯ ವೇಳೆ 27 ಲಕ್ಷ ರೂ. ಆಹಾರದ ಬಿಲ್; ಗುಜರಾತ್‌ ನ ಎರಡು ಪಾಲಿಕೆಗಳ ವಿರುದ್ಧ ಆಕ್ರೋಶ

ಅಹಮದಾಬಾದ್: ಗುಜರಾತ್‌ ನ ಸೂರತ್ ಮಹಾನಗರ ಪಾಲಿಕೆ (SMC) ಮತ್ತು ರಾಜ್‌ಕೋಟ್ ಮಹಾನಗರ ಪಾಲಿಕೆ (RMC) ನಡೆಸಿದ ಎರಡು ಪ್ರತ್ಯೇಕ ಕಟ್ಟಡ ಧ್ವಂಸ ಕಾರ್ಯಾಚರಣೆಗಳು ವಿವಾದಕ್ಕೆ ಕಾರಣವಾಗಿವೆ. ಸೂರತ್‌ ನಲ್ಲಿ ಅಧಿಕೃತ ಅನುಮತಿಯಿಲ್ಲದೆ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದರೆ, ರಾಜ್‌ ಕೋಟ್‌ ನಲ್ಲಿ ಧ್ವಂಸ ಕಾರ್ಯಾಚರಣೆಯ ವೇಳೆ 27.20 ಲಕ್ಷ ರೂ. ಮೊತ್ತದ ಆಹಾರ ಮತ್ತು ಉಪಹಾರ ವೆಚ್ಚದ ಬಿಲ್ ಸಲ್ಲಿಕೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಸೂರತ್‌ ನ ಕೇಂದ್ರ ವಲಯದ ನಾಸಿರ್‌ನಗರ ಪ್ರದೇಶದಲ್ಲಿ ಮೇ 30ರಂದು 'ಖಾಸಗಿ ಭೂಮಿಯ ಅತಿಕ್ರಮಣ' ಆರೋಪದಡಿ ಮಹಾನಗರ ಪಾಲಿಕೆಯು ಧ್ವಂಸ ಕಾರ್ಯಾಚರಣೆ ನಡೆಸಿದ್ದು, ಇದರಿಂದ 100ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಆದರೆ, ಈ ಕಾರ್ಯಾಚರಣೆಗೆ ಯಾವುದೇ ಅಧಿಕೃತ ಅನುಮತಿ ನೀಡಲಾಗಿಲ್ಲ ಎಂದು ನಂತರ ತಿಳಿದುಬಂದಿದೆ.

ಈ ಸಂಬಂಧ ನಾಸಿರ್‌ನಗರ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವೇಳೆ, ಸೂರತ್ ಮಹಾನಗರ ಪಾಲಿಕೆ ಆಯುಕ್ತರು, ಮೇ 30ರಂದು ನಡೆದ ಧ್ವಂಸ ಕಾರ್ಯಾಚರಣೆಗೆ ತಾವು ಅಥವಾ ಮಹಾನಗರ ಪಾಲಿಕೆಯ ಯಾವುದೇ ಅಧಿಕಾರಿಯು ಅನುಮತಿ ಆದೇಶ ನೀಡಿಲ್ಲ ಎಂದು ಗುಜರಾತ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.

"ಮೇ 30ರಂದು ನಡೆದ ಧ್ವಂಸ ಕಾರ್ಯಾಚರಣೆಗೆ ಅಧಿಕಾರ ನೀಡುವ ಯಾವುದೇ ಆದೇಶವನ್ನು ಮಹಾನಗರ ಪಾಲಿಕೆಯು ಹೊರಡಿಸಿಲ್ಲ" ಎಂದು ಅರ್ಜಿದಾರರ ಪರ ವಕೀಲ ಝಮೀರ್ ಸೈಖ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದರಿಂದ ಅಧಿಕೃತ ಅನುಮತಿಯಿಲ್ಲದೆ ಇಷ್ಟೊಂದು ದೊಡ್ಡ ಪ್ರಮಾಣದ ಧ್ವಂಸ ಕಾರ್ಯಾಚರಣೆ ಹೇಗೆ ನಡೆಯಿತು ಎಂಬ ಬಗ್ಗೆ ಹೈಕೋರ್ಟ್ ಪ್ರಶ್ನಿಸಿದೆ. ಭೂಮಿಯ ಗುರುತಿಸುವಿಕೆ ಹೆಸರಿನಲ್ಲಿ ಕಾನೂನುಬಾಹಿರ ಧ್ವಂಸ ನಡೆದಿದ್ದರೆ, ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಬೇಕಾಗಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಈ ಬೆಳವಣಿಗೆಯ ನಂತರ, ಧ್ವಂಸ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಐವರು ಅಧಿಕಾರಿಗಳನ್ನು ಸೂರತ್ ಮಹಾನಗರ ಪಾಲಿಕೆ ಅಮಾನತುಗೊಳಿಸಿದೆ. ಅಮಾನತುಗೊಂಡವರಲ್ಲಿ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಒಬ್ಬ ಉಪ ಎಂಜಿನಿಯರ್, ಒಬ್ಬ ಕಿರಿಯ ಎಂಜಿನಿಯರ್ ಹಾಗೂ ಒಬ್ಬ ಸಹಾಯಕ ಎಂಜಿನಿಯರ್ ಸೇರಿದ್ದಾರೆ.

ಸೂರತ್ ಮಹಾನಗರ ಪಾಲಿಕೆ ರಚಿಸಿದ್ದ ವಿಶೇಷ ತನಿಖಾ ಸಮಿತಿಯ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಕಾನೂನು ಪ್ರಕ್ರಿಯೆ ಉಲ್ಲಂಘನೆಯಾಗಿದೆಯೇ ಮತ್ತು ಯಾರು ಹೊಣೆಗಾರರು ಎಂಬುದನ್ನು ಪತ್ತೆಹಚ್ಚಲು ಇಲಾಖಾ ತನಿಖೆ ಆರಂಭಿಸಲಾಗಿದೆ.

ಇದೇ ವೇಳೆ, ರಾಜ್‌ಕೋಟ್ ಮಹಾನಗರ ಪಾಲಿಕೆಯು ಜಂಗಲೇಶ್ವರ ಪ್ರದೇಶದಲ್ಲಿ ಈ ವರ್ಷದ ಫೆಬ್ರುವರಿಯಲ್ಲಿ ನಡೆಸಿದ ಮೂರು ದಿನಗಳ ಧ್ವಂಸ ಕಾರ್ಯಾಚರಣೆಯ ವೇಳೆ ಸುಮಾರು 1,400 ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಿತ್ತು. ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸಲ್ಲಿಸಲಾದ 27.20 ಲಕ್ಷ ರೂ. ಮೊತ್ತದ ಆಹಾರ ಮತ್ತು ಉಪಹಾರ ವೆಚ್ಚದ ಬಿಲ್ ಈಗ ವಿವಾದಕ್ಕೆ ಕಾರಣವಾಗಿದೆ.

ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗೆ ಸಲ್ಲಿಸಲಾದ ದಾಖಲೆಗಳ ಪ್ರಕಾರ, 150 ಪ್ಲೇಟ್ ಸಮೋಸಾ, ಖರ್ಜೂರ ರೋಲ್ ಮತ್ತು ಖಮಾನ್‌ ಗೆ 34,650 ರೂ. ವೆಚ್ಚವಾಗಿದೆ. ಚಹಾ, ಕಾಫಿ ಮತ್ತು ಬಿಸ್ಕತ್‌ಗಳ ವೆಚ್ಚ ಮಾತ್ರವೇ 6,30,946 ರೂ.ಗಳಾಗಿದೆ.

ದಾಖಲೆಗಳ ಪ್ರಕಾರ, ಕಾರ್ಯಾಚರಣೆಯ ವೇಳೆ ಸಿಬ್ಬಂದಿ ಸುಮಾರು 21,000 ಕಪ್ ಚಹಾ ಮತ್ತು 4,000 ಬಾಟಲಿ ನಿಂಬೆ ಪಾನೀಯ ಸೇವಿಸಿದ್ದಾರೆ. ಅಲ್ಲದೆ, 'ಕಾಜು ಕಟ್ಲಿ'ಯ ಒಂದು ತುಂಡಿನ ಬೆಲೆಯನ್ನು 231 ರೂ. ಎಂದು ದಾಖಲಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರೇಮ್‌ವತಿ ರೆಸ್ಟೋರೆಂಟ್‌ ನಿಂದ ಸಲ್ಲಿಸಲಾದ 20.68 ಲಕ್ಷ ರೂ. ಮೊತ್ತದ ಆಹಾರ ಬಿಲ್ ಸೇರಿ ಒಟ್ಟು ವೆಚ್ಚವು 27.20 ಲಕ್ಷ ರೂ.ಗಳಿಗೆ ತಲುಪಿದೆ.

ಆದರೆ, ಈ ವೆಚ್ಚದ ಮರುಪಾವತಿಗೆ ಅನುಮೋದನೆ ನೀಡಲು ನಿರಾಕರಿಸಿರುವ ರಾಜ್‌ಕೋಟ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯು, ಅಸಾಮಾನ್ಯವಾಗಿ ಹೆಚ್ಚಿನ ವೆಚ್ಚದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರವಾದ ಸ್ಪಷ್ಟೀಕರಣವನ್ನು ಕೋರಿದ್ದು, ಪ್ರಸ್ತಾವನೆಯನ್ನು ಸದ್ಯಕ್ಕೆ ಬಾಕಿ ಉಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries