HEALTH TIPS

ಮತದಾರರ ಪಟ್ಟಿಯಿಂದ ಮಾಜಿ ಸಂಪಾದಕರ ಹೆಸರು ಡಿಲೀಟ್, ಪಾಸ್‌ಪೋರ್ಟ್‌ ನವೀಕರಣಕ್ಕೆ ತಡೆ: SIR ನಿಂದ ಸೇವೆಗಳ ನಿರಾಕರಣೆ ಸಾಧ್ಯವೇ?

ನವದೆಹಲಿ: ದಿ ಟೆಲಿಗ್ರಾಫ್ʼ ಪತ್ರಿಕೆಯ ಮಾಜಿ ಸಂಪಾದಕ ಆರ್. ರಾಜಗೋಪಾಲ್ ಅವರ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ ಬಿದ್ದಿರುವ ವಿಷಯವನ್ನು ಕೇರಳ ಮುಖ್ಯಮಂತ್ರಿ ವಿ. ಡಿ. ಸತೀಶನ್ ಹಾಗೂ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿವೆ. ಈ ವರ್ಷದ ಆರಂಭದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿತ್ತು.

ವಿಶೇಷ ತೀವ್ರ ಪರಿಷ್ಕರಣೆ ವೇಳೆ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಯಾವುದೇ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಬಂಗಾಳದ ನೂತನ ಬಿಜೆಪಿ ಸರ್ಕಾರ ಮೇ ತಿಂಗಳಲ್ಲಿ ಘೋಷಿಸಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ ನ್ಯಾಯಮಂಡಳಿಗಳ ಮುಂದೆ ಲಕ್ಷಾಂತರ ಮತದಾರರ ಮೇಲ್ಮನವಿಗಳು ಬಾಕಿ ಇರುವಾಗಲೇ ನಡೆದಿರುವ ಈ ಬೆಳವಣಿಗೆಗಳು, ಹೆಸರು ಕಳೆದುಕೊಂಡವರಿಗೆ ಎದುರಾಗಬಹುದಾದ ಗಂಭೀರ ಪರಿಣಾಮಗಳ ಮುನ್ಸೂಚನೆಯನ್ನು ನೀಡಿವೆ.

ಏನಿದು ರಾಜಗೋಪಾಲ್ ಪ್ರಕರಣ?

ಮೂಲತಃ ಕೇರಳದವರಾಗಿದ್ದು, ಕಳೆದ 30 ವರ್ಷಗಳಿಂದ ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ಮಾಜಿ ಸಂಪಾದಕ ರಾಜಗೋಪಾಲ್ ಅವರು, ತಾವು ಫೆಬ್ರವರಿಯಲ್ಲಿ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಈ ನಡುವೆ, ದಾಖಲೆಗಳಲ್ಲಿ "ತಾರ್ಕಿಕ ವ್ಯತ್ಯಾಸಗಳಿವೆ"ಎಂದು ಚುನಾವಣಾ ಆಯೋಗವು ಗುರುತಿಸಿದ ನಂತರ, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಡೆದ ಅಭೂತಪೂರ್ವ ಪರಿಶೀಲನಾ ಪ್ರಕ್ರಿಯೆಯಲ್ಲಿ ಬಂಗಾಳದ 27 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿತ್ತು. ಅವರಲ್ಲಿ ರಾಜಗೋಪಾಲ್ ಕೂಡ ಒಬ್ಬರಾಗಿದ್ದರು.

ಮಾರ್ಚ್ 27 ರಂದು ಪ್ರಕಟವಾದ ಪೂರಕ ಪಟ್ಟಿಯಲ್ಲಿ ತಮ್ಮ ಹೆಸರು ಡಿಲೀಟ್ ಆಗಿರುವುದನ್ನು ಅವರು ಗಮನಿಸಿದರು. ಇದರಿಂದಾಗಿ ಎಪ್ರಿಲ್‌ನಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ.

ಪಾಸ್‌ಪೋರ್ಟ್ ನವೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪರಿಶೀಲನೆ ಬಾಕಿ ಇದ್ದ ಕಾರಣ, ಮೇ 20 ರಂದು ಅವರನ್ನು ಭದ್ರತಾ ನಿಯಂತ್ರಣ ಸಂಸ್ಥೆಯ ಕಚೇರಿಗೆ ಕರೆಯಿಸಲಾಗಿತ್ತು. ಅಲ್ಲಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮರುಸ್ಥಾಪನೆಯಾಗುವವರೆಗೆ ಪೊಲೀಸ್ ಕ್ಲಿಯರೆನ್ಸ್ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ರಾಜಗೋಪಾಲ್ ಹೇಳಿದ್ದಾರೆ. ನ್ಯಾಯಮಂಡಳಿಯ ಮುಂದೆ ಬಾಕಿ ಇರುವ ತಮ್ಮ ಮೇಲ್ಮನವಿಯ ಸ್ಥಿತಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ಮಂಗಳವಾರ ಪಾಸ್‌ಪೋರ್ಟ್ ಅಧಿಕಾರಿಗಳು ಮತ್ತೊಮ್ಮೆ ಪೊಲೀಸ್ ಪರಿಶೀಲನೆಗೆ ಒಳಪಡುವಂತೆ ತಮಗೆ ತಿಳಿಸಿದ್ದಾರೆ ಎಂದು ರಾಜಗೋಪಾಲ್ ಹೇಳಿರುವುದಾಗಿ 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಉಲ್ಲೇಖಿಸಿದೆ.

ಕಾನೂನು ಏನು ಹೇಳುತ್ತದೆ?

ಕಳೆದ ವರ್ಷ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ತೀವ್ರ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದ್ದ ಚುನಾವಣಾ ಆಯೋಗವು, ಈ ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿಯ ಪರಿಷ್ಕರಣೆಯಷ್ಟೇ ಆಗಿದೆಯೇ ಹೊರತು ಪೌರತ್ವವನ್ನು ನಿರ್ಧರಿಸುವ ಪ್ರಕ್ರಿಯೆಯಲ್ಲ ಎಂದು ಹೇಳಿತ್ತು.

ಕಳೆದ ಮೇ ತಿಂಗಳಲ್ಲಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗಕ್ಕೆ ಇರುವ ಹಕ್ಕನ್ನು ಎತ್ತಿಹಿಡಿದಿದ್ದ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಚುನಾವಣಾ ಆಯೋಗಕ್ಕೆ ಮತದಾರರ ಪೌರತ್ವವನ್ನು ನಿರ್ಣಯಿಸುವ ಹಕ್ಕಿದ್ದರೂ, ಅದು ಸೀಮಿತ ಸ್ವರೂಪದ್ದಾಗಿದೆ ಎಂದು ತಿಳಿಸಿತ್ತು. "ಅಂತಹ ನಿರ್ಧಾರದ ಪರಿಣಾಮವೂ ಅಷ್ಟೇ ಸೀಮಿತವಾಗಿರುತ್ತದೆ. ಇದು ಕೇವಲ ಆ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಅರ್ಹತೆಯ ಮೇಲೆ ಮತ್ತು ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವರ ಹಕ್ಕಿನ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ, ಇದು ಆ ವ್ಯಕ್ತಿಯ ಪೌರತ್ವದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಅಥವಾ ಪೌರತ್ವ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರವು ಈ ಪ್ರಶ್ನೆಯನ್ನು ನಿರ್ಧರಿಸುವ ಹಕ್ಕನ್ನು ತಡೆಯುವುದಿಲ್ಲ" ಎಂದು ತೀರ್ಪಿನಲ್ಲಿ ಹೇಳಲಾಗಿದೆ.

2025 ಜೂನ್ 24ರ ಎಸ್‌ಐಆರ್ ಆದೇಶದ ಜೊತೆಗಿನ ಚುನಾವಣಾ ಆಯೋಗದ ಸ್ವಂತ ಮಾರ್ಗಸೂಚಿಗಳೂ ಸಹ ಇದನ್ನು ಸ್ಪಷ್ಟಪಡಿಸುತ್ತವೆ. ವಿದೇಶಿ ಪ್ರಜೆಗಳೆಂದು ಶಂಕಿಸಲಾದ ಪ್ರಕರಣಗಳನ್ನು ಮತದಾರರ ನೋಂದಣಾಧಿಕಾರಿಗಳು ಸಕ್ಷಮ ಪ್ರಾಧಿಕಾರಕ್ಕೆ ಒಪ್ಪಿಸಬೇಕು ಎಂದು ಅದು ಹೇಳುತ್ತದೆ. ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಬಿಟ್ಟ ವಿಷಯವಾಗಿದೆ.

ಹಾಗಿದ್ದರೆ, ಹೆಸರು ಡಿಲೀಟ್ ಆಗಿರುವ ಮತದಾರರಿಗೆ ಮೂಲಭೂತ ಸೇವೆಗಳನ್ನು ಏಕೆ ನಿರಾಕರಿಸಲಾಗುತ್ತಿದೆ?

ನ್ಯಾಯಮಂಡಳಿಗಳ ಮುಂದೆ ಅವರ ಮೇಲ್ಮನವಿಗಳು ಇನ್ನು ಬಾಕಿ ಇದ್ದಾಗಲೂ, ಸುವೇಂದು ಅಧಿಕಾರಿ ಸರ್ಕಾರದ ಆದೇಶದ ಮೇರೆಗೆ ಬಂಗಾಳದಲ್ಲಿ ಹೆಸರು ಡಿಲೀಟ್ ಆಗಿರುವ ಮತದಾರರಿಗೆ ಪಡಿತರ ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆಗಳ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಮತದಾರರ ಪಟ್ಟಿ ಮತ್ತು ಸರ್ಕಾರಿ ಯೋಜನೆಗಳು ಅಥವಾ ಸೇವೆಗಳ ನಡುವೆ ಯಾವುದೇ ನೇರ ಸಂಪರ್ಕವಿಲ್ಲದಿದ್ದರೂ, ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿ ದೇಶದಲ್ಲಿ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪುರಾವೆಗಳಲ್ಲಿ ಒಂದಾಗಿದೆ.

ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಜೂನ್ ತಿಂಗಳಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಫಲಾನುಭವಿಗಳ ಪರಿಶೀಲನೆಗೆ ಆದೇಶಿಸಿದ್ದು, ಎಸ್‌ಐಆರ್ ಮೂಲಕ ಹೆಸರು ಕೈಬಿಟ್ಟವರನ್ನು "ಅನರ್ಹರು" ಎಂದು ಪರಿಗಣಿಸಿ ಪಟ್ಟಿಯಿಂದ ತೆಗೆದುಹಾಕಲು ಮುಂದಾಗಿದೆ.

ಪಾಸ್‌ಪೋರ್ಟ್ ನವೀಕರಣಕ್ಕಾಗಿ ಮತದಾರರ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯವೇನಲ್ಲ, ಆದರೆ ಪರಿಶೀಲನೆಯ ಸಮಯದಲ್ಲಿ ಅದನ್ನು ಪುರಾವೆಯಾಗಿ ನೀಡಬಹುದು. ಪೊಲೀಸ್ ವೆರಿಫಿಕೇಶನ್ ಸಂದರ್ಭದಲ್ಲಿ, ಅರ್ಜಿದಾರರು ತಮ್ಮ ಗುರುತಿನ ಪುರಾವೆಯಾಗಿ ಆಧಾರ್, ಪಾನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ನೀಡಬಹುದು.

ಈ ಕುರಿತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೀಗೆ ಹೇಳಿದೆ: "ರಾಜಗೋಪಾಲ್ ಅವರ ಹೆಸರು ಇನ್ನು ಮುಂದೆ ಮತದಾರರ ಪಟ್ಟಿಯಲ್ಲಿ ಇಲ್ಲ ಎಂಬ ಕಾರಣಕ್ಕಾಗಿಯೇ ಅವರಿಗೆ ಪೊಲೀಸ್ ವೆರಿಫಿಕೇಶನ್ ನಿರಾಕರಿಸಲಾಗಿದೆ ಎಂದು ತೋರುತ್ತದೆ! ಚುನಾವಣಾ ಆಯೋಗವು ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದಾಗಿ ಲಕ್ಷಾಂತರ ಭಾರತೀಯರು ಅನುಭವಿಸುತ್ತಿರುವ ಸಂಕಷ್ಟವನ್ನು ರಾಜಗೋಪಾಲ್ ಅವರ ಪರಿಸ್ಥಿತಿ ಎತ್ತಿ ತೋರಿಸುತ್ತದೆ. ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ರಾಜಗೋಪಾಲ್ ಅವರಂತಹ ವ್ಯಕ್ತಿಗೇ ಹೀಗಾಗಿದ್ದರೆ, ಅಧಿಕಾರಶಾಹಿಯ ಒಂದೇ ಒಂದು ಸಹಿ ಅಥವಾ ಆದೇಶಕ್ಕೆ ಸಿಲುಕಿ ಹಕ್ಕು ಕಳೆದುಕೊಂಡಿರುವ ಮತ್ತು ಧ್ವನಿ ಎತ್ತಲಾಗದ ಸಾಮಾನ್ಯ ಜನರ ಗತಿ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ."

ಸೋಮವಾರ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೆ ಪತ್ರ ಬರೆದಿರುವ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ , ರಾಜಗೋಪಾಲ್ ಅವರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವಂತೆ ಕೋರಿದ್ದಾರೆ. "ಎಸ್‌ಐಆರ್ ಅಡಿಯಲ್ಲಿ ಮತದಾರರ ಪಟ್ಟಿಯಿಂದ ಅವರ (ರಾಜಗೋಪಾಲ್) ಹೆಸರನ್ನು ಕೈಬಿಟ್ಟಿರುವುದರ ಆಧಾರದ ಮೇಲೆಯೇ ಈ ನಕಾರಾತ್ಮಕ ಪೊಲೀಸ್ ವರದಿ ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಚುನಾವಣೆಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಸೂಕ್ತ ಮೇಲ್ಮನವಿ ಪ್ರಕ್ರಿಯೆಯ ಮೂಲಕ ಬಗೆಹರಿಸಲಾಗುತ್ತಿದ್ದರೂ, ಈ ಪೊಲೀಸ್ ವರದಿಯು ಅವರ ಪಾಸ್‌ಪೋರ್ಟ್ ನವೀಕರಣ ಪ್ರಕ್ರಿಯೆಯನ್ನು ವಿಳಂಬಗೊಳಿಸುವಂತೆ ಮಾಡಿದೆ ಎಂದು ನನಗೆ ತಿಳಿದುಬಂದಿದೆ. ಆದ್ದರಿಂದ ತಾವು ಈ ವಿಷಯವನ್ನು ಅತ್ಯಂತ ತುರ್ತಾಗಿ ಪರಿಶೀಲಿಸಬೇಕೆಂದು ಕೋರುತ್ತೇನೆ" ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries