ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಭಕ್ತರು ಸಮರ್ಪಿಸಿರುವ ಬೆಲೆಬಾಳುವ ಕಾಣಿಕೆಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ತಿಳಿಸಿದ್ದಾರೆ.
ದೇವಾಲಯದ ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಬೆನ್ನಲ್ಲೇ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಟ್ರಸ್ಟ್ ಬಳಿ 32 ಕೆ.ಜಿ ಚಿನ್ನ ಮತ್ತು 1,518 ಕೆ.ಜಿ ಬೆಳ್ಳಿ ಹಾಗೂ ಇತರ ಅಮೂಲ್ಯ ವಸ್ತುಗಳು ಭದ್ರವಾಗಿವೆ. ಭಕ್ತರು ನೀಡಿದ ಒಟ್ಟು 2,926 ಬೆಲೆಬಾಳುವ ವಸ್ತುಗಳ ನಿಖರವಾದ ದಾಖಲೆಗಳು ಇವೆ ಎಂದು ಮಾಧ್ಯಮಗಳಿಗೆ ದೇವ್ ಗಿರಿ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಾಪತ್ತೆಯಾಗಿವೆ ಎಂದು ವದಂತಿ ಹಬ್ಬಿದ್ದ ಚಿನ್ನದ 'ರಾಮಚರಿತಮಾನಸ', ವಜ್ರಖಚಿತ ಹಾರ, ಬೆಳ್ಳಿಯ 'ಚರಣ ಪಾದುಕೆ' ಮತ್ತು ಬೆಳ್ಳಿಯ 'ಕಾಗ್‌ಭುಶುಂಡಿ' ಕಲಾಕೃತಿಗಳನ್ನು ಟ್ರಸ್ಟ್ ಸೋಮವಾರ ಮಾಧ್ಯಮಗಳ ಮುಂದೆ ಪ್ರದರ್ಶಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದೆ. ಪ್ರತಿಯೊಂದು ಕಾಣಿಕೆಯನ್ನೂ ದಾನಿಗಳ ವಿವರ, ದಿನಾಂಕ ಮತ್ತು ತೂಕದೊಂದಿಗೆ ವ್ಯವಸ್ಥಿತವಾಗಿ ದಾಖಲಿಸಲಾಗಿದೆ ಎಂದು ದೇವ್ ಗಿರಿ ಸ್ಪಷ್ಟಪಡಿಸಿದ್ದಾರೆ.
ಕಾಣಿಕೆಗಳ ವಿವರ (ಮಾರ್ಚ್ 31, 2026ರ ವರೆಗೆ)
* ಚಿನ್ನಾಭರಣ : ಒಟ್ಟು 32 ಕೆ.ಜಿ
* ಬೆಳ್ಳಿ ವಸ್ತುಗಳು: ಒಟ್ಟು 1,518 ಕೆ.ಜಿ (ಇದರಲ್ಲಿ ಸರ್ಕಾರಿ ಸ್ವಾಮ್ಯದ ಟಂಕಸಾಲೆಯಲ್ಲಿ ಕರಗಿಸಿ ಶುದ್ಧೀಕರಿಸಿದ 849 ಕೆ.ಜಿ ಬೆಳ್ಳಿಯೂ ಸೇರಿದೆ).
ಕಾಣಿಕೆ ಬಂದ ಬೆಳ್ಳಿ ವಸ್ತುಗಳನ್ನು ಭಾರತ ಸರ್ಕಾರದ ಟಂಕಸಾಲೆಯಲ್ಲಿ ಕರಗಿಸಿ, ಶುದ್ಧೀಕರಿಸಲಾಗಿದೆ. ಇದರ ತೂಕ ಮತ್ತು ಶುದ್ಧತೆಯ ಪ್ರಮಾಣಪತ್ರಗಳನ್ನು ಫೋಟೊ ಸಮೇತ ಸಂರಕ್ಷಿಸಲಾಗಿದೆ. ಪ್ರತಿಯೊಬ್ಬ ದಾನಿಗೂ ರಶೀದಿ ನೀಡಲಾಗಿದೆ. ಯಾರಲ್ಲಾದರೂ ಅಕ್ರಮದ ಪುರಾವೆಗಳಿದ್ದರೆ ಅದನ್ನು ನೇರವಾಗಿ ಎಸ್‌ಐಟಿ ತನಿಖಾ ತಂಡಕ್ಕೆ ನೀಡಲಿ ಎಂದು ಗೋವಿಂದ ದೇವ್ ಗಿರಿ ಹೇಳಿದ್ದಾರೆ.
ಆಡಳಿತ ಮಂಡಳಿಯಲ್ಲಿ ಬದಲಾವಣೆ
ದೇಣಿಗೆ ದುರುಪಯೋಗದ ದೂರುಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ನಗದು ವಂಚನೆಗೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಈ ವಿವಾದದ ಬೆನ್ನಲ್ಲೇ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಸದಸ್ಯ ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದ್ದು, ಕೃಷ್ಣ ಮೋಹನ್ ಅವರನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ದೇವಾಲಯದ ಆಡಳಿತ ಮತ್ತು ಹಣಕಾಸು ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಲು ನಿರ್ಧರಿಸಲಾಗಿದೆ.
ಅಕ್ರಮಗಳ ತನಿಖೆಗೆ ರಚನೆಯಾಗಿರುವ ಎಸ್‌ಐಟಿ ತಂಡಕ್ಕೆ ಟ್ರಸ್ಟ್ ಸಂಪೂರ್ಣ ಸಹಕಾರ ನೀಡಲಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

