ಗೋರಿ ಬ್ಯೂಟಿ ಕ್ರೀಮ್ ಬಳಸುತ್ತಿದ್ದ ಅನೇಕ ಮಹಿಳೆಯರಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಂಡಿವೆ ಎಂಬ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಅಧಿಕಾರಿಗಳ ಪ್ರಕಾರ, ಈ ಕಾಯಿಲೆಗೆ ತುತ್ತಾಗಿರುವವರು ಇ-ಕಾಮರ್ಸ್ ವೇದಿಕೆಗಳ ಮೂಲಕ ಗೋರಿ ಬ್ಯೂಟಿ ಕ್ರೀಮ್ ಅನ್ನು ಖರೀದಿಸಿದ್ದರು. ಮಾತ್ರವಲ್ಲದೆ, ಸುಮಾರು 2 ವರ್ಷಗಳಿಂದಲೂ ಅದನ್ನು ಬಳಸುತ್ತಿದ್ದರು ಎಂದು ತಿಳಿದುಬಂದಿದೆ.
ದೂರಿನ ಬಳಿಕ ಕ್ರೀಮ್‌ನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಈ ಕ್ರೀಮ್‌ನಲ್ಲಿ ಪಾದರಸದ ಅಂಶ ಇರುವುದು ಪತ್ತೆಯಾಗಿದೆ. ಇದನ್ನು ದೀರ್ಘಕಾಲದವರೆಗೆ ಬಳಸಿದರೆ, ಮೂತ್ರಪಿಂಡ, ನರಮಂಡಲ ಮತ್ತು ಇತರ ಅಂಗಗಳಿಗೆ ತೀವ್ರ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಸಂಶೋಧಕರು ದೃಢಪಡಿಸಿದ್ದಾರೆ.
ಅವಧಿ ಮುಗಿಯುವ ದಿನಾಂಕ ಮುದ್ರಿಸದೆ ಇರುವುದು ಈ ಉತ್ಪನ್ನದ ಬಳಕೆಯ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ಪ್ರಯೋಗಾಲಯದಿಂದ ಹೊರಬಿದ್ದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು, ಮಹಾರಾಷ್ಟ್ರದಲ್ಲಿ ಗೋರಿ ಬ್ಯೂಟಿ ಕ್ರೀಮ್ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಮಾತ್ರವಲ್ಲದೆ, ದಾಸ್ತಾನುಗಳನ್ನು ವಶಪಡಿಸಿಕೊಂಡಿದೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಎಫ್‌ಡಿಎಯು ಗೋರಿ ಬ್ಯೂಟಿ ಕ್ರೀಮ್ ವಿರುದ್ಧ ವಿಶೇಷ ಅಭಿಯಾನವನ್ನು ಜಾರಿಗೊಳಿಸಿದೆ. ಆನ್‌ಲೈನ್ ವೇದಿಕೆಗಳು ಮತ್ತು ಸ್ಥಳೀಯ ವಿತರಕರ ಮೂಲಕ ಕ್ರೀಮ್‌ನ ಮಾರಾಟವನ್ನು ಪತ್ತೆಹಚ್ಚಲಾಗುತ್ತಿದ್ದು, ಗೋರಿ ಬ್ಯೂಟಿ ಕ್ರೀಮ್ ಅನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಗೋರಿ ಬ್ಯೂಟಿ ಕ್ರೀಮ್ ಅನ್ನು ಪಾಕಿಸ್ತಾನದಲ್ಲಿ ತಯಾರಿಸಲಾಗುತ್ತದೆ. ಮುಖದಲ್ಲಿನ ಕಪ್ಪು ಕಲೆ ಮತ್ತು ಚರ್ಮದ ಟೋನ್ ಅನ್ನು ಬದಲಿಸಿ ಬಿಳಿ ಬಣ್ಣ ನೀಡುವ ಕ್ರೀಮ್ ಆಗಿ ಮಾರಾಟವಾಗುತ್ತಿದೆ. ಮಾತ್ರವಲ್ಲದೆ, ದಕ್ಷಿಣ ಭಾರತದ ಕೆಲ ಕಡೆ ಈ ಕ್ರೀಮ್‌ಗೆ ಜನಪ್ರಿಯತೆಯೂ ಇದೆ.
ಆಧಾರ : ಇಂಡಿಯಾ ಟುಡೇ

