ಜಕಾರ್ತಾ: ಉಭಯ ದೇಶಗಳ ನಡುವೆ ಸಂಬಂಧವನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಪದಕ 'ಬಿಂಟಾಂಗ್ ಆದಿಪೂರ್ಣ ಆಫ್ ದಿ ರಿಪಬ್ಲಿಕ್ ಆಫ್ ಇಂಡೋನೇಷ್ಯಾ'ನೀಡಿ ಗೌರವಿಸಲಾಗಿದೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಅವರು ಮೋದಿಗೆ ಪದಕ ನೀಡಿ ಗೌರವಿಸಿದರು.
'ಇಂದು ಬೆಳಿಗ್ಗೆ ಬಹಳ ಪ್ರೀತಿಯಿಂದ ಇಂಡೋನೇಷ್ಯಾದ ಅತ್ಯುನ್ನತ ಗೌರವ ನೀಡಲಾಗಿದೆ. ಈ ಗೌರವವು ಕೋಟ್ಯಂತರ ಭಾರತೀಯರಿಗೆ ಸಲ್ಲುತ್ತದೆ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಐತಿಹಾಸಿಕ ಮತ್ತು ಆಪ್ತ ಸಂಬಂಧಗಳಿಗೆ ಸಂದ ಗೌರವವಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿರುವುದಾಗಿ ಅವರ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
'ಅಧ್ಯಕ್ಷ ಪ್ರಬೊವೊ, ಇಂಡೋನೇಷ್ಯಾ ಸರ್ಕಾರ ಮತ್ತು ಅಲ್ಲಿನ ಜನರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ' ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿಗೆ ಸಿಕ್ಕ ಪದಕವು ಭಾರತ ಮತ್ತು ಇಂಡೋನೇಷ್ಯಾ ಸ್ನೇಹಕ್ಕೆ ಸಂದ ಗೌರವವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
'ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಭಾರತ ಮತ್ತು ಇಂಡೋನೇಷ್ಯಾ ಸಂಬಂಧ ಸುಧಾರಣೆಯ ಪ್ರಯತ್ನಕ್ಕೆ ಸಂದ ಗೌರವ' ಎಂದೂ ಬಣ್ಣಿಸಿದ್ದಾರೆ.
1959ರಲ್ಲಿ 'ಬಿಂಟಾಂಗ್ ಆದಿಪೂರ್ಣ ಆಫ್ ದಿ ರಿಪಬ್ಲಿಕ್ ಆಫ್ ಇಂಡೋನೇಷಾ'ಪದಕವನ್ನು ಆರಂಭಿಸಲಾಗಿದೆ.
ಏಕತೆ, ನಿರಂತರತೆ ಮತ್ತು ಇಂಡೋನೇಷ್ಯಾ ಸಮೃದ್ಧಿಗೆ ಕೊಡುಗೆ ನೀಡುವ ಜನರಿಗೆ ಈ ಅತ್ಯುನ್ನತ ಗೌರವ ನೀಡಲಾಗುತ್ತದೆ.

