ಅಹಮದಾಬಾದ್: 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್‌ನ (ಐಎಂ) 38 ಮಂದಿಗೆ ಮರಣದಂಡನೆ ಮತ್ತು ಇತರ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದೆ.
ಶಿಕ್ಷೆಗೊಳಗಾದವರಲ್ಲಿ ನಿಷೇಧಿತ ಸಂಘಟನೆ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದ (ಸಿಮಿ) ಮಾಜಿ ಮುಖ್ಯಸ್ಥ ಸಫ್ದರ್ ನಗೋರಿ ಮತ್ತು ಅವರ ಸಹಚರರು ಸೇರಿದ್ದಾರೆ.
ವಿಶೇಷ ನ್ಯಾಯಾಲಯವು 2022ರ ಫೆಬ್ರುವರಿಯಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಎ. ವೈ.ಕೊಗ್ಜೆ ಮತ್ತು ಸಮೀರ್ ದೇವ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
ಅಹಮದಾಬಾದ್ ಸ್ಫೋಟ: 38 ಮಂದಿಗೆ ವಿಧಿಸಿದ್ದ ಗಲ್ಲು ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಪ್ರಕರಣದ ಹಿನ್ನೆಲೆ
70 ನಿಮಿಷ, 21 ಸ್ಫೋಟ:
2008ರ ಜುಲೈ 26ರಂದು ಅಹಮದಾಬಾದ್‌ನ ವಿವಿಧ ಪ್ರದೇಶಗಳಲ್ಲಿ 70 ನಿಮಿಷಗಳ ಅಂತರದಲ್ಲಿ 21 ಬಾಂಬ್‌ಗಳ ಸರಣಿ ಸ್ಫೋಟಗಳು ಸಂಭವಿಸಿದ್ದವು. ಘಟನೆಯಲ್ಲಿ 56 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಆಸ್ಪತ್ರೆಗಳೂ ಟಾರ್ಗೆಟ್:
ಸ್ಫೋಟಗೊಂಡ ಇತರ ಸ್ಥಳಗಳಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುತ್ತಿದ್ದ ಸಂದರ್ಭದಲ್ಲೇ, ಅಹಮದಾಬಾದ್‌ನ ಆಸ್ಪತ್ರೆಗಳ ಮೇಲೂ ಬಾಂಬ್ ಸ್ಫೋಟಿಸಲಾಗಿತ್ತು. ಭಾರತದ ಇತಿಹಾಸದಲ್ಲೇ ವೈದ್ಯಕೀಯ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಮೊದಲ ಉಗ್ರರ ದಾಳಿ ಇದಾಗಿತ್ತು.
ಪೊಲೀಸರು ಅಹಮದಾಬಾದ್‌ನಲ್ಲಿ 20, ಸೂರತ್‌ನಲ್ಲಿ 15 ಎಫ್‌ಐಆರ್ ದಾಖಲಿಸಿದ್ದರು. ಬಾಂಬ್ ಸ್ಫೋಟ ಪ್ರಕರಣವು ಇಂಡಿಯನ್ ಮುಜಾಹಿದ್ದೀನ್ ತಂಡದ ಸಂಚಿನ ಭಾಗವಾಗಿದೆ ಎಂದು ಪೊಲೀಸರು ತನಿಖೆಯ ನಂತರ ಹೇಳಿದ್ದರು. ಎಲ್ಲ ಪ್ರಕರಣಗಳನ್ನು ಒಟ್ಟಾಗಿ ವಿಚಾರಣೆ ನಡೆಸಲಾಗಿತ್ತು.
ತೀರ್ಪಿನ ಮುಖ್ಯಾಂಶಗಳು
ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಒಂದೇ ಬಾರಿಗೆ ಅತಿ ಹೆಚ್ಚು ಅಂದರೆ 38 ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.
ಇದಕ್ಕೂ ಮುನ್ನ 1998 ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಟಾಡಾ (TADA) ನ್ಯಾಯಾಲಯವು 26 ಜನರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ವಿಶೇಷ ನ್ಯಾಯಾಲಯದ ಮುಂದೆ 78 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಪೈಕಿ 49 ಜನರನ್ನು 2022ರ ಫೆಬ್ರುವರಿಯಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು.
ಶಿಕ್ಷೆಗೊಳಗಾದವರಲ್ಲಿ ಸಿಮಿ ಸಂಘಟನೆಯ ಮಾಜಿ ನಾಯಕ ಸಫ್ದರ್ ನಾಗೋರಿ ಹಾಗೂ ಗುಜರಾತ್, ಮಧ್ಯಪ್ರದೇಶ, ಕೇರಳ, ಉತ್ತರ ಪ್ರದೇಶ ಸೇರಿದಂತೆ 11 ರಾಜ್ಯಗಳಲ್ಲಿನ ಆತನ ಸಹಚರರು ಸೇರಿದ್ದಾರೆ.
ಸಂತ್ರಸ್ತರ ಕುಟುಂಬಸ್ಥರಿಗೆ ತಲಾ ₹10 ಲಕ್ಷ ಪರಿಹಾರ
ಸ್ಫೋಟದಲ್ಲಿ ಮೃತರಾದವರ ಕುಟುಂಬಸ್ಥರಿಗೆ ತಲಾ ₹10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ ₹5 ಲಕ್ಷ ಪರಿಹಾರವನ್ನು 2027ರ ಮಾರ್ಚ್ 30ರ ಒಳಗೆ ಪಾವತಿಸುವಂತೆ ಗುಜರಾತ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

