ದೇಶದ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯುನಲ್ಲಿ ಜುಲೈ ಮೂರರಂದು ಗಣತಿ ಕಾರ್ಯ ಮುಗಿದಿದ್ದು, ಜುಲೈ 10ರಂದು ಕರಡು ಪಟ್ಟಿ ಪ್ರಕಟವಾಗಲಿದೆ. ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕ್ರಮವಾಗಿ ಆಗಸ್ಟ್ 16 ಮತ್ತು ಸೆಪ್ಟೆಂಬರ್ 15ರಂದು ಪ್ರಾರಂಭವಾಗಲಿದೆ.
ಕಳೆದ ವರ್ಷದ ಜೂನ್‌ನಲ್ಲಿ ಬಿಹಾರದಲ್ಲಿ ಆರಂಭವಾದ ಎಸ್‌ಐಆರ್ ಪ್ರಕ್ರಿಯೆ ಈವರೆಗೆ 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೂರ್ಣಗೊಂಡಿದೆ. ಅದಕ್ಕೂ ಮೊದಲು ಆ ರಾಜ್ಯಗಳಲ್ಲಿ ಇದ್ದ ಮತದಾರರ ಸಂಖ್ಯೆಯು ಪ್ರಕ್ರಿಯೆಯ ಬಳಿಕ ಸುಮಾರು ಶೇ 10.5ರಷ್ಟು ಅಥವಾ 5.83 ಕೋಟಿಯಷ್ಟು ಕಡಿಮೆಯಾಗಿದೆ.
ನಾಲ್ಕು ರಾಜ್ಯಗಳ ಕರಡು ಪ್ರಕಟ
ಒಡಿಶಾ, ಮಣಿಪುರ, ಮಿಜೋರಾಂ ಮತ್ತು ಸಿಕ್ಕಿಂ ರಾಜ್ಯಗಳ ಕರಡು ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಈ ರಾಜ್ಯಗಳಲ್ಲಿದ್ದ ಸುಮಾರು 3.68 ಕೋಟಿ ಮತದಾರರ ಪೈಕಿ, ಸಾವು, ಸ್ಥಳಾಂತರ ಅಥವಾ ಬೇರೆ ಬೇರೆ ಸ್ಥಳಗಳಲ್ಲಿ ನೋಂದಣಿಯಾಗಿದ್ದ ಕಾರಣಕ್ಕೆ ಶೇ 6.12ರಷ್ಟು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಒಡಿಶಾದಲ್ಲಿ ಶೇ 6.02ರಷ್ಟು ಹೆಸರು ಡಿಲೀಟ್
ಒಡಿಶಾದಲ್ಲಿ ಹೆಸರು ತೆಗೆದುಹಾಕಲಾದ ಪ್ರಮಾಣ ಶೇ 6.02ರಷ್ಟಿದೆ. ಕರಡುಪಟ್ಟಿ ಪ್ರಕಟಕ್ಕೂ ಮುನ್ನ ಇಲ್ಲಿ, 3.33 ಕೋಟಿ ಮತದಾರರ ಹೆಸರುಗಳು ಪಟ್ಟಿಯಲ್ಲಿದ್ದವು. ಈಗ, 20.12 ಲಕ್ಷ ಹೆಸರುಗಳನ್ನು ಕೈಬಿಡಲಾಗಿದ್ದು, 3.13 ಕೋಟಿ ಹೆಸರುಗಳಷ್ಟೇ ಉಳಿದಿವೆ.
ಪಟ್ಟಿಯಿಂದ ಹೆಸರು ತೆಗೆಯಲಾಗಿರುವವರ ಪೈಕಿ 10.07 ಲಕ್ಷ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 8.32 ಲಕ್ಷ ಮಂದಿ ಮೃತಪಟ್ಟಿದ್ದಾರೆ. 1.58 ಲಕ್ಷ ಜನರು ವಿವಿಧೆಡೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.
ಮಣಿಪುರದಲ್ಲಿ 1.58 ಲಕ್ಷ ಮಂದಿ ಪಟ್ಟಿಯಿಂದ ಹೊರಕ್ಕೆ
ಮಣಿಪುರದಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿರುವ ಹೆಸರುಗಳ ಪ್ರಮಾಣ ಶೇ 7.5ರಷ್ಟಿದೆ. ಅಂದರೆ, ಇಲ್ಲಿನ 20.93 ಲಕ್ಷ ಮತದಾರರ ಪೈಕಿ 1.58 ಲಕ್ಷ ಜನರನ್ನು ಕೈಬಿಟ್ಟು, 19.34 ಲಕ್ಷ ಮಂದಿಯನ್ನು ಉಳಿಸಿಕೊಳ್ಳಲಾಗಿದೆ.
ಇಲ್ಲಿ ಸುಮಾರು 43,000 ಮಂದಿ ಮೃತಪಟ್ಟಿದ್ದಾರೆ. 1.08 ಲಕ್ಷ ಜನರು ಶಾಶ್ವತವಾಗಿ ಬೇರೆ ಕಡೆ ನೆಲೆಸಿದ್ದಾರೆ. 7,394 ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಾಯಿಸಿಕೊಂಡಿದ್ದರು ಎನ್ನಲಾಗಿದೆ.
ಮಿಜೋರಾಂನಲ್ಲಿ ಅತಿ ಕಡಿಮೆ ಹೆಸರು ಡಿಲೀಟ್
ಎಸ್‌ಐಆರ್ ನಡೆಸಲಾಗಿರುವ ರಾಜ್ಯಗಳ ಪೈಕಿ ಅತಿಕಡಿಮೆ ಹೆಸರುಗಳನ್ನು ಕೈಬಿಟ್ಟಿರುವುದು ಮಿಜೋರಾಂನಲ್ಲೇ. ಇಲ್ಲಿನ ಮತದಾರರ ಪಟ್ಟಿಯಲ್ಲಿದ್ದ 8.28 ಲಕ್ಷ ಹೆಸರುಗಳಲ್ಲಿ 46,162 ಅನ್ನು ತೆಗೆಯಲಾಗಿದೆ. ಇದರಲ್ಲಿ 21,295 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಉಳಿದಂತೆ, 22,311 ಜನರು ಬೇರೆ ಕಡೆ ನೆಲೆ ಕಂಡುಕೊಂಡಿದ್ದಾರೆ. 2,248 ಜನರು ವಿವಿಧ ಕಡೆಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು ಎಂದು ಹೇಳಲಾಗಿದೆ.
ಮಿಜೋರಾಂನಲ್ಲಿ ಸದ್ಯ 8.28 ಲಕ್ಷ ಮತದಾರರು ಇದ್ದಾರೆ.
ಸಿಕ್ಕಿಂನಲ್ಲಿ ಕೈಬಿಟ್ಟವರ ಪ್ರಮಾಣ ಶೇ 8
ಉಳಿದ ಮೂರು ರಾಜ್ಯಗಳಿಗೆ ಹೋಲಿಸಿದರೆ ಸಿಕ್ಕಿಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾರರನ್ನು ಕೈಬಿಡಲಾಗಿದೆ. ಇಲ್ಲಿದ್ದ 4.71 ಲಕ್ಷ ಮತದಾರರ ಪೈಕಿ ಶೇ 8ರಷ್ಟು ಅಂದರೆ 37,724 ಜನರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಹೀಗಾಗಿ, ಇಲ್ಲಿನ ಮತದಾರರ ಸಂಖ್ಯೆ 4.33 ಲಕ್ಷಕ್ಕೆ ಕುಸಿದಿದೆ.
ಸದ್ಯ ಪ್ರಕಟವಾಗಿರುವುದು ಕರಡು ಪಟ್ಟಿ ಮಾತ್ರ. ಅಂತಿಮ ಪಟ್ಟಿಯು ಸೆಪ್ಟೆಂಬರ್ 6ರಂದು ಬಿಡುಗಡೆಯಾಗಲಿದೆ. ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಹಾಗೂ ಹೊಸ ಹೆಸರುಗಳ ಸೇರ್ಪಡೆಗೆ ಸಂಬಂಧಿಸಿದಂತೆ ಆಯಾ ರಾಜ್ಯಗಳ ಜನರು ಮುಂದಿನ ಒಂದು ತಿಂಗಳೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ನಾಲ್ಕು ರಾಜ್ಯಗಳಲ್ಲಿ ಮತದಾರರ ಸಂಖ್ಯೆ

