ಅಯೋಧ್ಯಾ: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು, ದೇವಸ್ಥಾನದಲ್ಲಿ ಕೆಲಸಕ್ಕೆ ಸೇರುವುದಕ್ಕೂ ಮುನ್ನ ವಿವಿಧ ಉದ್ಯೋಗಗಳಲ್ಲಿದ್ದರು.
ಆರೋಪಿಗಳ ಪೈಕಿ ಒಬ್ಬರು ಪ್ರಾಥಮಿಕ ಶಾಲೆ ಶಿಕ್ಷಕ ಹುದ್ದೆಯಲ್ಲಿದ್ದರೆ, ಮತ್ತೊಬ್ಬರು ಕಾರು ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮತ್ತೊಬ್ಬರು ಬ್ಯಾಂಕ್‌ವೊಂದರ ನಿವೃತ್ತಿ ನೌಕರ ಹಾಗೂ ಇನ್ನೊಬ್ಬರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹಿರಿಯ ಪದಾಧಿಕಾರಿಯೊಬ್ಬರ ನಂಬಿಕಸ್ಥ ಸಹಾಯಕರಾಗಿದ್ದರು ಎಂದು ಈ ಕುರಿತ ತನಿಖೆಯಿಂದ ತಿಳಿದುಬಂದಿದೆ.
'ಆರೋಪಿಗಳು ಹೊರಗುತ್ತಿಗೆ ಸಂಸ್ಥೆಯೊಂದರ ಮೂಲಕ ನೇಮಕಗೊಂಡವರಾಗಿದ್ದು, ದೇವಸ್ಥಾನಕ್ಕೆ ಭಕ್ತರು ಸಲ್ಲಿಸುವ ದೇಣಿಗೆಯನ್ನು ನಿರ್ವಹಿಸುವ ವ್ಯವಸ್ಥೆಯ ದುರುಪಯೋಗಪಡಿಸಿಕೊಂಡಿದ್ದಾರೆ' ಎಂದು ಪೊಲೀಸ್ ಮೂಲಗಳು ಆರೋಪಿಸಿವೆ.
'ಆರೋಪಿಗಳು ನಡೆಸಿದ್ದ ಹಣಕಾಸು ವ್ಯವಹಾರಗಳು, ದೇಣಿಗೆ ಕಳವು ಸಂಚಿನಲ್ಲಿ ಇವರ ಪಾತ್ರ ಹಾಗೂ ಅವರು ಹೊಂದಿರುವ ಸ್ವತ್ತುಗಳ ಕುರಿತು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ' ಎಂದೂ ಮೂಲಗಳು ಹೇಳಿವೆ.
'ಆರೋಪಿಗಳಲ್ಲೊಬ್ಬರಾದ ಅವಿನಾಶ ಶುಕ್ಲಾ, ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣ ಎಣಿಕೆ ಹಾಗೂ ಸಂಗ್ರಹವಾದ ಒಟ್ಟು ಮೊತ್ತ ನಿರ್ವಹಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದರು' ಎಂದು ಇವೇ ಮೂಲಗಳು ಹೇಳಿವೆ.
ದೇಣಿಗೆ ಸಂಗ್ರಹಿಸುವ ಕೌಂಟರ್‌ವೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದ ಮತ್ತೊಬ್ಬ ಆರೋಪಿ ಅನುಕಲ್ಪ ಮಿಶ್ರಾ ತಿಂಗಳಿಗೆ ₹15 ಸಾವಿರ ವೇತನ ಪಡೆಯುತ್ತಿದ್ದರು.
'ಮಿಶ್ರಾ ತನ್ನ ಸ್ವಂತ ಊರಾದ ಬಸಾವಾದಲ್ಲಿ ₹65 ಲಕ್ಷ ಮೌಲ್ಯದ ಮನೆ, ಫಾರ್ಮ್ ಹೌಸ್, ಐಷಾರಾಮಿ ಬೈಕ್ ಹೊಂದಿದ್ದು, ಒಂದು ಎಸ್‌ಯುವಿ ಖರೀದಿ ಬುಕ್ ಮಾಡಿರುವುದು ಪತ್ತೆಯಾಗಿದೆ. ಈ ಸ್ವತ್ತುಗಳು ಅವರ ಆದಾಯಕ್ಕೂ ಮೀರಿ ಗಳಿಸಿದ್ದವು ಎಂಬ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.
ಅನುಕಲ್ಪ ಮಿಶ್ರಾ ರಾಮ ಮಂದಿರದಲ್ಲಿ ಗುತ್ತಿಗೆ ನೌಕರನಾಗಿ ನೇಮಕವಾಗುವುದಕ್ಕೂ ಮೊದಲು ಕಾರು ಮೆಕ್ಯಾನಿಕ್ ಆಗಿದ್ದರು.
ಪ್ರಕರಣದ ಪ್ರಮುಖ ಆರೋಪಿ ರಾಮಶಂಕರ್ ಮಿಶ್ರಾ(ಟಿನ್ನು ಯಾದವ್), ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ವಾಹನ ಚಾಲಕನಾಗಿ ಉದ್ಯೋಗ ಆರಂಭಿಸಿದರೂ, ನಂತರ ಅವರ ನಂಬಿಕಸ್ಥನಾಗಿ ದೇವಸ್ಥಾನದ ಆಡಳಿತ ಮತ್ತು ವಿಐಪಿ ನಿರ್ವಹಣೆಯ ಹೊಣೆ ಹೊತ್ತುಕೊಂಡಿದ್ದರು. ದೇಣಿಗೆ ಎಣಿಕೆ ತಂಡದಲ್ಲಿದ್ದ ಮತ್ತೊಬ್ಬ ಆರೋಪಿ ಮನೀಷ್ ಕುಮಾರ್ ಯಾದವ್, ಟಿನ್ನು ಯಾದವ್ ಸೋದರ ಸಂಬಂಧಿ.
'ಸುಭಾಶ್ಚಂದ್ರ ಶ್ರೀವಾಸ್ತವ ನಿವೃತ್ತ ಬ್ಯಾಂಕ್ ಉದ್ಯೋಗಿ. ಅವರಿಗೆ, ಯಾತ್ರಾರ್ಥಿಗಳ ನೆರವು ಕೇಂದ್ರದಲ್ಲಿನ ದೇಣಿಗೆ ಸಂಗ್ರಹ ಕೌಂಟರ್ ಮೇಲುಸ್ತುವಾರಿ ಜವಾಬ್ದಾರಿ ನೀಡಲಾಗಿತ್ತು. ಅವರು ಆರ್‌ಎಸ್‌ಎಸ್‌ನ ಸ್ಥಳೀಯ ಘಟಕದ ಪದಾಧಿಕಾರಿಯೂ ಆಗಿದ್ದರು' ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್ನೊಬ್ಬ ಆರೋಪಿ ಕರುಣೇಶ್ ಪಾಂಡೆ, ದೇಣಿಗೆ ಸಂಗ್ರಹವಾದ ಪೆಟ್ಟಿಗೆಗಳನ್ನು ತೆರೆಯುವುದು ಹಾಗೂ ಹಣ ಎಣಿಕೆ ಕಾರ್ಯದ ಜವಾಬ್ದಾರಿ ಹೊತ್ತಿದ್ದರು.

