HEALTH TIPS

ರಾಮ ಮಂದಿರ ದೇಣಿಗೆ ಕಳವು | ವಿಪಕ್ಷ ನಾಯಕರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿ: VHP

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ಮತ್ತು ಆಭರಣಗಳು ಕಳವಾಗಿವೆ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಯೋಧ್ಯೆ ಪೊಲೀಸರನ್ನು ಒತ್ತಾಯಿಸಿದೆ.

ಈ ಕುರಿತು ಅಯೋಧ್ಯೆ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಕರಣದ ತನಿಖಾಧಿಕಾರಿ ಅಶುತೋಷ್ ತಿವಾರಿ ಅವರಿಗೆ ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಎನಿದೆ?

ವಿರೋಧ ಪಕ್ಷದ ನಾಯಕರು ರಾಮ ಮಂದಿರದ ದೇಣಿಗೆ ಕಳವು ಹಾಗೂ ಹಗರಣದ ಬಗ್ಗೆ ನಿರ್ದಿಷ್ಟ ಅಂಕಿ-ಅಂಶಗಳನ್ನು ನೀಡುತ್ತಾ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಈ ನಾಯಕರಿಗೆ ಪ್ರಕರಣದ ಸತ್ಯಾಸತ್ಯತೆ ತಿಳಿದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದ್ದರಿಂದ, ತನಿಖಾಧಿಕಾರಿಗಳು ಇವರಿಗೆ ಸಮನ್ಸ್ ಜಾರಿಗೊಳಿಸಿ, ಅವರ ಆರೋಪಗಳಿಗೆ ಇರುವ ಆಧಾರ, ಮಾಹಿತಿ ಮೂಲ ಹಾಗೂ ದಾಖಲೆಗಳನ್ನು ಒದಗಿಸುವಂತೆ ಕೇಳಬೇಕು ಎಂದು ವಿಎಚ್‌ಪಿ ಆಗ್ರಹಿಸಿದೆ.

‌ಕಾನೂನು ಕ್ರಮಕ್ಕೆ ಒತ್ತಾಯ

ಸಮಾಜದಲ್ಲಿ ದ್ವೇಷದ ಭಾವನೆಗಳನ್ನು ಸೃಷ್ಟಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದಲೇ ಇಂತಹ ಸುಳ್ಳು ಮತ್ತು ಬೇಜವಾಬ್ದಾರಿಯುತ ಆರೋಪಗಳನ್ನು ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ಮಾಡಬೇಕು. ಒಂದು ವೇಳೆ ಅವರ ಬಳಿ ಯಾವುದೇ ಸಾಕ್ಷಿ ಇಲ್ಲದಿದ್ದರೆ, ಇಂತಹ ಗಂಭೀರ ಆರೋಪ ಮಾಡಿರುವ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ವಿಪಕ್ಷ ನಾಯಕರ ಆರೋಪವೇನು?

ವಿಎಚ್‌ಪಿ ತನ್ನ ಪತ್ರದಲ್ಲಿ ಪ್ರಮುಖವಾಗಿ ವಿಪಕ್ಷ ನಾಯಕರ ಸಾರ್ವಜನಿಕ ಹೇಳಿಕೆಗಳನ್ನು ಉಲ್ಲೇಖಿಸಿದೆ.

  • ಕೇವಲ ಕಿರಿಯ ಮಟ್ಟದ ನೌಕರರು ಮಾತ್ರವೇ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಾಣಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವೇ? ಅಥವಾ ಇದರ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆಯೇ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದರು.

  • ರಾಮ ಮಂದಿರದ ಸುಮಾರು ₹200 ಕೋಟಿ ನಗದು, ಶ್ರೀರಾಮನ ಹಾರ, ಪಾದುಕೆಗಳು, ವಜ್ರ, ಚಿನ್ನಾಭರಣಗಳು, ಬೆಳ್ಳಿ ದೀಪಗಳು ಕಳವಾಗಿವೆ ಎಂದು ಆರೋಪಿಸಿದ ಅರವಿಂದ ಕೇಜ್ರಿವಾಲ್, ಈ ಬಗ್ಗೆ ಉತ್ತರ ಪ್ರದೇಶ ಪೊಲೀಸರು, ಇ.ಡಿ ಮತ್ತು ಸಿಬಿಐ ಏಕೆ ಮೌನವಾಗಿದೆ ಎಂದು ಕೇಳಿದ್ದರು.

  • ರಾಮ ಮಂದಿರದಲ್ಲಿ ಬರೋಬ್ಬರಿ ₹20,000 ಕೋಟಿ ಬೃಹತ್ ಹಗರಣ ನಡೆದಿದೆ. ದೇಶ-ವಿದೇಶಗಳ ಭಕ್ತರು ನೀಡಿದ ದೇಣಿಗೆ ಹಣ ನಾಪತ್ತೆಯಾಗಿದೆ. ಇದರಲ್ಲಿ ಕಿರಿಯ ನೌಕರರು ಮಾತ್ರವಲ್ಲದೇ, ಇತ್ತೀಚೆಗಷ್ಟೇ ರಾಜೀನಾಮೆ ನೀಡಿರುವ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಹಲವು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದರು.

  • ರಾಮ ಮಂದಿರದಲ್ಲಿ ₹200 ಕೋಟಿಗೂ ಹೆಚ್ಚು ಹಣ ಕಳವಾಗಿದ್ದು, ಇದರಲ್ಲಿ 50ಕ್ಕೂ ಹೆಚ್ಚು ಉದ್ಯೋಗಿಗಳು ಶಾಮೀಲಾಗಿದ್ದಾರೆ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ದೂರಿದ್ದರು.

ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆಗಾಗಿ ಈ ಎಲ್ಲಾ ನಾಯಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು. ಒಂದು ವೇಳೆ ಅವರು ನೀಡುವ ಮಾಹಿತಿ ನಿಜವಾಗಿದ್ದರೆ, ಸತ್ಯವನ್ನು ಹೊರತರಲು ಅದು ತನಿಖಾ ಸಂಸ್ಥೆಗೆ ನೆರವಾಗಲಿದೆ. ಒಂದು ವೇಳೆ ಅಪಪ್ರಚಾರ ಮಾಡಿದ್ದರೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಅಲೋಕ್ ಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries