ಭಿಲ್ವಾರಾ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕರೇಡಾ ಪಟ್ಟಣದಲ್ಲಿರುವ ಮೊಬೈಲ್ ಅಂಗಡಿಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದ ಶಂಕಿತರಲ್ಲಿ ಓರ್ವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಮುಖವಾಡ ಧರಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ಗಮನ ಸೆಳೆದಿದೆ.
ಕರೇಡಾ ಬಸ್ ನಿಲ್ದಾಣದ ಸಮೀಪದ 'ಮಾತೇಶ್ವರಿ ಮೊಬೈಲ್' ಅಂಗಡಿಯಲ್ಲಿ ಸೋಮವಾರ ತಡರಾತ್ರಿ ಕಳವು ನಡೆದಿದೆ. ಅಂಗಡಿ ಮಾಲೀಕ ಲಕ್ಷ್ಮಣ್ ಸೇನ್ ಅವರ ಪ್ರಕಾರ, ಕಳ್ಳರು ಮೊದಲು ಮೆಟ್ಟಿಲುಗಳ ಪ್ರವೇಶ ದ್ವಾರದ ಬೀಗ ಮುರಿದು, ನಂತರ ಮೇಲ್ಛಾವಣಿಯ ಮೂಲಕ ಅಂಗಡಿಯೊಳಗೆ ಪ್ರವೇಶಿಸಿದ್ದಾರೆ. ಅವರು ಅಂದಾಜು 4ರಿಂದ 5 ಲಕ್ಷ ರೂ. ಮೌಲ್ಯದ ಸುಮಾರು 35ರಿಂದ 40 ಸ್ಮಾರ್ಟ್‌ಫೋನ್‌ಗಳನ್ನು ಕಳ್ಳತನ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯಲ್ಲಿದ್ದ ದುಬಾರಿ ಮೊಬೈಲ್ ಫೋನ್‌ಗಳ ಪೆಟ್ಟಿಗೆಗಳು ಖಾಲಿಯಾಗಿ ಬಿದ್ದಿದ್ದರೆ, ಇತರೆ ವಸ್ತುಗಳು ನೆಲದ ಮೇಲೆ ಚದುರಿರುವುದು ಕಂಡುಬಂದಿದೆ.
ದೂರಿನ ಮೇರೆಗೆ ಕರೇಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗಡಿಯ ಒಳಗೆ ಹಾಗೂ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಶಂಕಿತರಲ್ಲಿ ಒಬ್ಬ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ಮುಖವಾಡ ಧರಿಸಿರುವುದು ಪತ್ತೆಯಾಗಿದೆ. ತನ್ನ ಗುರುತನ್ನು ಮರೆಮಾಚಲು ಆತ ಈ ಮುಖವಾಡವನ್ನು ಬಳಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಗುಂಪು ಅದೇ ರಾತ್ರಿ ಬೀಜ್ ಗೋಡಮ್ ಚೌಕ್ ಸಮೀಪದ 'ಸನ್ವಾರಿಯಾ ಮೊಬೈಲ್' ಅಂಗಡಿಗೂ ನುಗ್ಗಲು ಯತ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿಯೂ ಅದೇ ಮುಖವಾಡ ಧರಿಸಿದ್ದ ವ್ಯಕ್ತಿಯೊಬ್ಬ ಶಟರ್‌ನ ಬೀಗ ಮುರಿಯಲು ಯತ್ನಿಸುತ್ತಿರುವುದು ದಾಖಲಾಗಿದೆ.
ಈ ಘಟನೆ ಸ್ಥಳೀಯ ವ್ಯಾಪಾರಿಗಳು ಮತ್ತು ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ. ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿಯೂ ವ್ಯಾಪಾರ ಸಂಸ್ಥೆಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಉದ್ಭವಿಸಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.
ಅಂಗಡಿ ಮಾಲಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಪುರಾವೆಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

