ಜೋಧಪುರ: ನಗರದ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದ್ದಾರೆ. ಇದೇ ವೇಳೆ ಉಡಾನ್ ಯೋಜನೆಗೂ ಚಾಲನೆ ನೀಡಿದ್ದಾರೆ.
ನಗರಕ್ಕೆ ಆಗಮಿಸಿದ ಮೋದಿ ಅವರನ್ನು ರಾಜ್ಯಪಾಲ ಹರಿಭಾವು ಬಗಾಡೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ.
ಮೋದಿ ಅವರು ರಿಮೋಟ್ ಬಟನ್ ಒತ್ತುವ ಮೂಲಕ ಉದ್ಘಾಟನಾ ಫಲಕವನ್ನು ಅನಾವರಣಗೊಳಿಸಿದರು. ಬಳಿಕ ನೂತನ ಟರ್ಮಿನಲ್ ಕಟ್ಟಡವನ್ನು ವೀಕ್ಷಿಸಿದ್ದಾರೆ.
'ಮುಂದಿನ 10 ವರ್ಷಗಳಲ್ಲಿ ₹28,840 ಕೋಟಿ ಅನುದಾನದೊಂದಿಗೆ ಉಡಾನ್ ಯೋಜನೆಯು ವಾಯುಯಾನ ಆಧಾರಿತ ಅಭಿವೃದ್ಧಿಯ ಮುಂದಿನ ಹಂತವನ್ನು ತಲುಪುವ ಗುರಿ ಹೊಂದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೋಧಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನು ₹480 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. 23,000 ಚದರ ಮೀಟರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹರಡಿರುವ ಇದನ್ನು ವಾರ್ಷಿಕ 20 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವ ಒದಗಿಸಲು ಟರ್ಮಿನಲ್‌ನಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ರಾಜಸ್ಥಾನದ ರಾಜಮನೆತನದ ಪರಂಪರೆಯಿಂದ ಪ್ರೇರಿತವಾದ ವಾಸ್ತುಶಿಲ್ಪವನ್ನು ಹೊಂದಿರುವ ಈ ಟರ್ಮಿನಲ್, ಕಮಾನುಗಳಂತಹ ಸಾಂಪ್ರದಾಯಿಕ ಕಲೆಗಳನ್ನು ಸಮಕಾಲೀನ ವಿನ್ಯಾಸದೊಂದಿಗೆ ಸಂಯೋಜಿಸಲಾಗಿದೆ.

