ಶಿಲ್ಲಾಂಗ್: ದೇಶದ ಅನೇಕ ನಗರಗಳಲ್ಲಿ ಕ್ವಿಕ್ ಕಾಮರ್ಸ್ ಕಂಪನಿ ಬ್ಲಿಂಕಿಟ್ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದ್ದು, ಗ್ರಾಹಕರ ಮನೆಬಾಗಿಲಿಗೆ ನಿಮಿಷಗಳಲ್ಲಿ ಆಹಾರ ಪದಾರ್ಥ, ವಸ್ತುಗಳನ್ನು ತಲುಪಿಸುತ್ತಿದೆ.
ಆದರೆ ಇದರಿಂದಾಗಿ ದೇಶದಾದ್ಯಂತ ಸಾವಿರಾರು ಕಿರಾಣಿ ಅಂಗಡಿಗಳು ಬಾಗಿಲು ಮುಚ್ಚಿವೆ.
ಸಣ್ಣ ಉದ್ಯಮಗಳು ಅಂಗಡಿ ಬಂದ್ ಮಾಡುವ ಪರಿಸ್ಥಿತಿ ಬಂದಿದೆ. ಆದರೆ ಈ ರೀತಿ ಆಗುವುದನ್ನು ತಡೆದು, ಸ್ಥಳೀಯ ವ್ಯಾಪಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಮೇಘಾಲಯದಾದ್ಯಂತ ಬ್ಲಿಂಕಿಟ್ ಸೇವೆಯನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಖಾಸಿ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿಯು (ಏಊಂಆಅ) ಬ್ಲಿಂಕಿಟ್ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಹೇಳಿದೆ. ಸ್ಥಳೀಯ ಬುಡಕಟ್ಟು ಹಾಗೂ ಸಾಂಪ್ರದಾಯಿಕ ವ್ಯಾಪಾರಿಗಳ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶದಿಂದ ಮತ್ತು ಸುಮಾರು 4 ಸಾವಿರ ಸ್ಥಳೀಯ ಕಿರಾಣಿ ಅಂಗಡಿಗಳನ್ನು ಉಳಿಸುವ ನಿಟ್ಟಿನಲ್ಲಿ ಬ್ಲಿಂಕಿಟ್ ಕಾರ್ಯಾಚರಣೆಗೆ ಅನುಮತಿ ನೀಡುವುದಿಲ್ಲ ಎಂದು ಸಂಸ್ಥೆ ಹೇಳಿರುವುದಾಗಿ 'ದಿ ಅಸ್ಸಾಂ ಟ್ರಿಬ್ಯೂನ್' ವರದಿ ಮಾಡಿದೆ.
ಶಿಲ್ಲಾಂಗ್ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ 4 ಸಾವಿರ ಕಿರಾಣಿ ಅಂಗಡಿಗಳಿವೆ. ಬ್ಲಿಂಕಿಟ್‌ನಂತಹ ಕ್ವಿಕ್‌ಕಾಮರ್ಸ್ ಕಂಪನಿ ಕಾರ್ಯಾಚರಣೆ ಆರಂಭಿಸಿ, ಭಾರಿ ರಿಯಾಯಿತಿ ಮತ್ತು ಮನೆಬಾಗಿಲಿಗೆ ಶೀಘ್ರ ವಿತರಣೆ ಎನ್ನುವುದನ್ನು ಆರಂಭಿಸಿದರೆ, ಸ್ಥಳೀಯ ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಬ್ಲಿಂಕಿಟ್ ಕಾರ್ಯಾಚರಣೆ ಆಂಭಿಸಲು ಏಊಂಆಅ ಟ್ರೇಡಿಂಗ್ ಲೈಸೆನ್ಸ್ ನಿರಾಕರಿಸಿದೆ.
ಬ್ಲಿಂಕಿಟ್ ಈಗಾಗಲೇ ಶಿಲ್ಲಾಂಗ್‌ನಲ್ಲಿ ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಂಡು, ನೂರಾರು ಡೆಲಿವರಿ ಪಾರ್ಟ್‌ನರ್‌ಗಳನ್ನು ನಿಯೋಜಿಸಿತ್ತು. ಆದರೆ ಪರವಾನಗಿ ಸಿಗದ ಕಾರಣ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ಎದುರಾಗಿದೆ.

