ಜೈಪುರ: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಭಾರತವು ಸಮರ್ಪಕವಾಗಿ ಎದುರಿಸಿದ್ದು, ನಾಗರಿಕರ ಮೇಲೆ ಹೆಚ್ಚಿನ ಹೊರೆಯಾಗದಂತೆ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿವಿಧ ಇಂಧನ ಮೂಲಗಳು, ಸಮರ್ಪಕ ನೀತಿಗಳು ಮತ್ತು ಸಮರ್ಥವಾದ ರಾಜತಾಂತ್ರಿಕ ಸಂಬಂಧಗಳ ಮೂಲಕ ಭಾರತ ಈ ಬಿಕ್ಕಟ್ಟನ್ನು ಎದುರಿಸಲು ಸಾಧ್ಯವಾಯಿತು.
ಇದರಿಂದಾಗಿ ದೇಶದ ಪ್ರಜೆಗಳ ಮೇಲೆ ಅಲ್ಪಪ್ರಮಾಣದ ಹೊರೆಯಷ್ಟೇ ಬೀಳುವಂತಾಯಿತು ಎಂದು ಅವರು ತಿಳಿಸಿದರು.
ಬಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿ ಸಂಸ್ಕರಣಾಗಾರ ಸಂಕೀರ್ಣದ ಉದ್ಘಾಟನೆ ಮತ್ತು ವಿವಿಧ ಅಭಿವೃದ್ದಿ ಯೋಜನೆಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
'ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತನ್ನ ಇಂಧನ ಆಮದುಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಬಿಕ್ಕಟ್ಟು ಆರಂಭವಾದಾಗ 25ರಿಂದ 26 ದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಿಕ್ಕಟ್ಟಿನ ಸಮಯದಲ್ಲಿ ಅದನ್ನು 40ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದ್ದೇವೆ. ಇದಕ್ಕೆ ಭಾರತದ ರಾಜತಾಂತ್ರಿಕತೆಯೇ ಕಾರಣ' ಎಂದು ಅವರು ಒತ್ತಿ ಹೇಳಿದರು.
'ಜಾಗತಿಕ ತೈಲ ಬೆಲೆ ಹೆಚ್ಚಳದಿಂದಾಗಿ ದೇಶದ ತೈಲ ಕಂಪನಿಗಳು ಏಪ್ರಿಲ್ ಮತ್ತು ಜೂನ್ ನಡುವಿನ ಅವಧಿಯಲ್ಲಿ ₹75,000 ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿದವು. ಸರ್ಕಾರ ಆ ಹೊರೆಯನ್ನು ತನ್ನದಾಗಿಸಿಕೊಂಡಿತು. ಈ ವೇಳೆ ಪ್ರತಿ ಲೀಟರ್‌ಗೆ ₹10ರಷ್ಟು ಅಬಕಾರಿ ಸುಂಕ ಕಡಿಮೆ ಮಾಡುವುದರ ಮೂಲಕ ನಾಗರಿಕರ ಮೇಲೆ ಹೆಚ್ಚಿನ ಹೊರೆ ಆಗದಂತೆ ನೋಡಿಕೊಳ್ಳಲಾಯಿತು' ಎಂದು ಅವರು ವಿವರಿಸಿದರು.
'ಈ ವೇಳೆ ಕೆಲವರು ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿ, ಜನರನ್ನು ಪ್ರಚೋದಿಸಲು ಯತ್ನಿಸಿದರು. ಆದರೆ ದುರದ್ದೇಶ ಹೊಂದಿದ್ದವರ ಯೋಜನೆಗಳು ಯಶಸ್ವಿಯಾಗಲಿಲ್ಲ. ಭಾರತ ವಿಫಲವಾಗುವುದನ್ನು ನೋಡಲು ಬಯಸಿದವರು ಹತಾಶೆಗೆ ಒಳಗಾದರು' ಎಂದು ಮೋದಿ ಆರೋಪಿಸಿದರು.
ನಾಲ್ಕನೇ ಅತಿದೊಡ್ಡ ದೇಶ:
ತೈಲ ಸಂಸ್ಕರಣಾ ಸಾಮರ್ಥ್ಯದಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರಾಷ್ಟ್ರವಾಗಿದೆ ಎಂದ ಅವರು, 'ರಸಗೊಬ್ಬರ ಪೂರೈಕೆಯಲ್ಲಿ ಉಂಟಾದ ಅಡೆತಡೆಗಳನ್ನು ನಿವಾರಿಸುವಲ್ಲಿ ದೀರ್ಘಾಕಾಲೀನ ನೀತಿಗಳಿಗೆ ಸರ್ಕಾರ ಮನ್ನಣೆ ನೀಡಿದೆ' ಎಂದು ತಿಳಿಸಿದರು.
ಪ್ರಜೆಗಳು ಸ್ವಾವಲಂಬಿಗಳಾದಾಗ ದೇಶವೂ ಸ್ವಾವಲಂಬಿಯಾಗುತ್ತದೆ, ಈ ನಿಟ್ಟಿನಲ್ಲಿ ಸರ್ಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ದೇಶಕ್ಕೆ ಮಹತ್ವದ ಹೆಗ್ಗುರುತು: ಮೋದಿ ಬಣ್ಣನೆ ಪಚಪದ್ರಾದಲ್ಲಿ ದೇಶದ ಮೊದಲ ಗ್ರೀನ್‌ಫೀಲ್ಡ್ ಸಂಯೋಜಿತ ಸಂಸ್ಕರಣಾಗಾರ-ಕಂ-ಪೆಟ್ರೋಕೆಮಿಕಲ್ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಕ್ಕೆ ಅರ್ಪಿಸಿದರು. ಸಂಕೀರ್ಣವನ್ನು ವೀಕ್ಷಿಸಿದ ಅವರು ರಿಮೋಟ್ ಬಟನ್ ಒತ್ತುವ ಮೂಲಕ ಯೋಜನೆ ಉದ್ಘಾಟಿಸಿದರು. 'ದೇಶದ ಇಂಧನ ಮತ್ತು ಪೆಟ್ರೋಕೆಮಿಕಲ್ ವಲಯಕ್ಕೆ ಇದು ಮಹತ್ವದ ಹೆಗ್ಗುರುತಾಗಿದೆ' ಎಂದು ಪ್ರಧಾನಿ ಬಣ್ಣಿಸಿದರು. ದೇಶದ ಇಂಧನ ಭದ್ರತೆ ಬಲಪಡಿಸಲು ಪೆಟ್ರೋಕೆಮಿಕಲ್ ಸ್ವಾವಲಂಬನೆ ಹೆಚ್ಚಿಸಲು ಇದು ನೆರವಾಗಲಿದೆ. ಅಲ್ಲದೆ ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಮತ್ತು ಗಮನಾರ್ಹ ಉದ್ಯೋಗಾವಕಾಶಗಳ ಸೃಷ್ಟಿಗೂ ಕಾರಣವಾಗಲಿದೆ ಎಂದು ಅವರು ಹೇಳಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2018ರಿಂದ 2023ರವರೆಗೆ ಸಂಸ್ಕರಣಾಗಾರದ ಕೆಲಸ ಸ್ಥಗಿತಗೊಂಡಿತ್ತು ಎಂದು ಮೋದಿ ತಿಳಿಸಿದರು. ರಾಜ್ಯಪಾಲ ಹರಿಭಾವು ಬಗಾಡೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್ ಸಿಂಗ್ ಪುರಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಉಪಸ್ಥಿತರಿದ್ದರು.

